ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಿಐಟಿಯು ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಎಂ.ಅಣ್ಣಪ್ಪ, ಎನ್.ಕೆ.ಬಾಲಾಜಿರಾವ್, ಜಯರಾಂ ಇತರರು ಇದ್ದರು. 
ಮೈಸೂರು

ಸಿಐಟಿಯು ಕಾರ್ಯಕರ್ತರ ಪ್ರತಿಭಟನೆ

ಆರ್.ಕೃಷ್ಣ

ಪ್ರಮುಖ ಮುಖ್ಯಾಂಶಗಳು

  • ಹೊಸ ನಿಯಮಗಳ ಮೂಲಕ ಬಂಡವಾಳಗಾರರು ಮಾಡುವ ಕಾನೂನು ಉಲ್ಲಂಘನೆಯನ್ನು ಕಾನೂನುಬದ್ಧಗೊಳಿಸಲಾಗಿದೆ
  • ಯಾವುದೇ ಮಾತುಕತೆ ನಡೆಸದೆ ಸರ್ಕಾರ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿದೆ
ಮೈಸೂರು:ಕಾರ್ಮಿಕರ ಹಿತಾಸಕ್ತಿ ಬಲಿ ಕೊಟ್ಟಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ವಿರೋಧದ ನಡುವೆಯೂ ನಾಲ್ಕು ಕಾರ್ಮಿಕ ಸಂಹಿತೆ ನಿಯಮಾವಳಿಗಳ ಗೆಜೆಟ್ ಪ್ರಕಟಿಸಿರುವುದನ್ನು ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕಾರ್ಮಿಕ ಸಂಘಟನೆಗಳು ಸೂಚಿಸಿದ ಯಾವುದೇ ತಿದ್ದುಪಡಿ ಪರಿಗಣಿಸದೆ, ಯಾವುದೇ ಮಾತುಕತೆ ನಡೆಸದೆ ಸರ್ಕಾರ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿದೆ ಎಂದು ದೂರಿದರು.
ದಶಕಗಳ ಕಾಲದ ಹೋರಾಟದ ಮೂಲಕ ಗಳಿಸಿದ್ದ ಕಾರ್ಮಿಕರ ಮೂಲಭೂತ ಹಕ್ಕು ಮತ್ತು ಸವಲತ್ತನ್ನು ಈ ಸಂಹಿತೆಗಳು ನಾಶ ಮಾಡುತ್ತವೆ. ಈ ಹೊಸ ನಿಯಮಗಳ ಮೂಲಕ ಬಂಡವಾಳಗಾರರು ಮಾಡುವ ಕಾನೂನು ಉಲ್ಲಂಘನೆಯನ್ನು ಕಾನೂನುಬದ್ಧಗೊಳಿಸಲಾಗಿದೆ. ಇದರಿಂದ ಯುವಜನತೆಯ ಕಾಯಂ ಉದ್ಯೋಗದ ಕನಸು ಭಗ್ನಗೊಂಡು ಬದುಕು ಅತಂತ್ರವಾಗಲಿದೆ ಎಂದರು.
ಈ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಮೇಲೆ ಗುಲಾಮಗಿರಿ ಹೇರುವುದಲ್ಲದೆ, ಅವರ ಪ್ರತಿಭಟನೆಯ ಹಕ್ಕನ್ನೇ ಕಿತ್ತುಕೊಳ್ಳುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಕಾನೂನುಗಳು ಸಮವರ್ತಿ ಪಟ್ಟಿಯಲ್ಲಿ ಬರುವುದರಿಂದ, ಕರ್ನಾಟಕ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಈ ಸಂಹಿತೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಬಾರದು. ಸಂವಿಧಾನದ ಒಕ್ಕೂಟ ತತ್ವದಡಿ ರಾಜ್ಯದ ಶ್ರಮಜೀವಿಗಳ ಹಿತರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಈಗಾಗಲೇ ನಿರುದ್ಯೋಗ ಮತ್ತು ಬೆಲೆ ಏರಿಕೆ ತಾಂಡವವಾಡುತ್ತಿರುವಾಗ, ಕೇಂದ್ರ ಸರ್ಕಾರ ಕಾರ್ಮಿಕರ ಮೇಲೆ ಅಮಾನವೀಯ ಯುದ್ಧ ಸಾರಿದೆ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾ ಅಧ್ಯಕ್ಷ ಎಂ.ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಕೆ.ಬಾಲಾಜಿರಾವ್, ಮುಖಂಡರಾದ ಜಯರಾಂ ಇತರರು ಇದ್ದರು.