ಮಾನಸಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ‘ಪತ್ರಿಕೋದ್ಯಮದ ಉದಯೋನ್ಮುಖ ಪ್ರವೃತ್ತಿಗಳು’ ಕುರಿತ ಕಾರ್ಯಾಗಾರವನ್ನು ಚಿತ್ರ ನಿರ್ದೇಶಕ ಬಿ. ಸುರೇಶ್ ಉದ್ಘಾಟಿಸಿದರು. ಪ್ರೊ.ನಿರಂಜನ ವಾನಳ್ಳಿ, ಪ್ರೊ.ಎನ್.ಮಮತಾ ಇದ್ದರು. 
ಮೈಸೂರು

ಸಿನಿಮಾ ಸಾಮಾಜಿಕ ಜವಾಬ್ದಾರಿಯ ಮಾಧ್ಯಮವಾಗಬೇಕು : ನಿರ್ದೇಶಕ ಬಿ. ಸುರೇಶ್

ಮೈಸೂರು: ಸಿನಿಮಾಗಳು ಕೇವಲ ಮನರಂಜನೆಗೆ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿ ಮತ್ತು ಶಿಕ್ಷಣದ ಮಾಧ್ಯಮವಾಗಬೇಕು ಎಂದು ಚಿತ್ರ ನಿರ್ದೇಶಕ ಬಿ. ಸುರೇಶ್ ಹೇಳಿದರು.
ಮಾನಸಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮೈಸೂರು ವಿಶ್ವವಿದ್ಯಾಲಯ ಮತ್ತು ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಸಂಸ್ಥೆ ಆಯೋಜಿಸಿದ್ದ ‘ಪತ್ರಿಕೋದ್ಯಮದ ಉದಯೋನ್ಮುಖ ಪ್ರವೃತ್ತಿಗಳು’ ಕುರಿತ ಆರು ದಿನಗಳ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಾಧ್ಯಮಗಳು ವಿಶ್ವಾಸಾರ್ಹತೆಗಳನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಮಾಜಿಕ ಉತ್ತಮ ಸಂದೇಶಗಳನ್ನು ನೀಡಬೇಕು. ಚಲನಚಿತ್ರಗಳು ಸಾಮಾಜಿಕ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಆರಂಭಿಕ ದಿನಗಳಲ್ಲಿ ಚಲನಚಿತ್ರ ನಿರ್ಮಾಪಕರು ಹಳೆಯ ಮತ್ತು ಸೀಮಿತ ಕ್ಯಾಮೆರಾ ತಂತ್ರಜ್ಞಾನವನ್ನು ಬಳಸುತ್ತಿದ್ದರೂ, ಅವರು ಅರ್ಥಪೂರ್ಣ ಹಾಗೂ ಪರಿಣಾಮಕಾರಿ ಸಿನಿಮಾಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು ಎಂದರು.
ಚಲನಚಿತ್ರವು ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಶಿಕ್ಷಣ, ಜಾಗೃತಿ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ವಹಿಸುವ ಪ್ರಬಲ ಮಾಧ್ಯಮವಾಗಿಯೂ ಕಾರ್ಯನಿರ್ವಹಿಸುತ್ತದೆ. ಚಲನಚಿತ್ರಗಳು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುತ್ತವೆ, ಸಾಮಾಜಿಕ ವಾಸ್ತವಗಳನ್ನು ಪ್ರತಿಬಿಂಬಿಸುತ್ತವೆ ಹಾಗೂ ಸಂಸ್ಕೃತಿ, ಮೌಲ್ಯಗಳು, ಅಸಮಾನತೆ ಮತ್ತು ಮಾನವ ಭಾವನೆಗಳಂತಹ ಪ್ರಮುಖ ವಿಚಾರಗಳನ್ನು ಜನರಿಗೆ ತಲುಪಿಸುತ್ತವೆ ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ನಿರಂಜನ ವಾನಳ್ಳಿ, ಪತ್ರಕರ್ತ ರಾಮ್, ವಿಭಾಗದ ಮುಖ್ಯಸ್ಥೆ ಪ್ರೊ.ಎನ್.ಮಮತಾ, ಅತಿಥಿ ಉಪನ್ಯಾಸಕರಾದ ಡಾ. ಕುಮಾರಸ್ವಾಮಿ, ಡಾ.ಬಿ.ಸಿ.ಸಂಜಯ್ ಹಾಗೂ ಇತರರು ಇದ್ದರು.