ಕ್ರಿಸ್‌ಮಸ್ ಪ್ರಯುಕ್ತ ಮೈಸೂರು ನಗರದ ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್ ಆವರಣದಲ್ಲಿ ಗುರುವಾರ ಸೇರಿದ್ದ ಜನಸ್ತೋಮ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ಸಡಗರದೊಂದಿಗೆ ಕ್ರಿಸ್‌ಮಸ್ ಆಚರಿಸಲಾಯಿತು. ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್ ಸೇರಿದಂತೆ ನಗರದ ಎಲ್ಲ ಚರ್ಚ್‌ಗಳಲ್ಲಿ ಸಂಭ್ರಮ ಮನೆ ಮಾಡಿತು.
ಅಶೋಕ ರಸ್ತೆಯ ಸಂತ ಫಿಲೋಮಿನಾ ಚರ್ಚ್, ಹಿನಕಲ್‌ನ ಇನ್‌ಫ್ಯಾಂಟ್ ಜೀಸಸ್ ಚರ್ಚ್, ಲಕ್ಷ್ಮೀಪುರಂನ ಹಾರ್ಡ್ವಿಕ್ ಚರ್ಚ್, ರಾಮಕೃಷ್ಣ ನಗರದ ಯೇಸು ಕೃಪಾಲಯ ಚರ್ಚ್ ಸೇರಿದಂತೆ ನಗರದ ವಿವಿಧ ಚರ್ಚ್‌ಗಳು ವಿದ್ಯುತ್ ದೀಪಗಳಿಂದ ಕಂಗೊಳಿಸಿದವು. ಕ್ರೈಸ್ತರು ಬುಧವಾರ ಮಧ್ಯರಾತ್ರಿ ಚರ್ಚ್‌ಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಗುರುವಾರ ಬೆಳಗ್ಗೆ ಸಹ ಸಾಕಷ್ಟು ಸಂಖ್ಯೆಯಲ್ಲಿ ಜನರು ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಚರ್ಚ್‌ಗಳ ಜತೆಗೆ ಕ್ರೈಸ್ತರು ತಮ್ಮ ಮನೆಗಳನ್ನು ಸಹ ಸಿಂಗರಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಯೇಸು ಎಲ್ಲರ ಮನೆ-ಮನಗಳನ್ನು ಬೆಳಗಲಿ ಎಂದು ಮನೆಗಳ ಮುಂದೆ ನಕ್ಷತ್ರ ಪ್ರತಿಕೃತಿಗಳನ್ನು ಅಳವಡಿಸಲಾಗಿತ್ತು. ಕ್ರೈಸ್ತರು ಹೊಸ ಉಡುಪುಗಳನ್ನು ಧರಿಸಿ ಸಿಹಿ ಹಂಚಿ, ಶುಭಾಶಯ ವಿನಿಮಯ ಮಾಡಿಕೊಂಡರು.
ಯೇಸು ಕೊಟ್ಟಿಗೆಯಲ್ಲಿ ಜನಿಸಿದ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಚರ್ಚ್‌ಗಳು ಹಾಗೂ ಮನೆಗಳಲ್ಲಿ ಗೋದಲಿ ನಿರ್ಮಿಸಿ ಬಾಲ ಯೇಸುವಿನ ಮೂರ್ತಿಯನ್ನು ಇಟ್ಟು ಪೂಜಿಸಲಾಯಿತು. ಸಾಂತಾ ಕ್ಲಾಸ್ ಎಲ್ಲರ ಮನೆಗೆ ತೆರಳಿ ಬಾಳಿಗೆ ಬೆಳಕಾಗಲಿ ಎಂದು ಪ್ರಾರ್ಥಿಸಿದರು.