ಸರಗೂರು ಪಟ್ಟಣದ ತೊಗಟವೀರ ಸಮಾಜದಿಂದ ಆಯೋಜಿಸಿದ್ದ ಚೌಡೇಶ್ವರಿ ಅಮ್ಮನವರ ವಧರ್ಂತಿ ಹಾಗೂ 86ನೇ ಜ್ಯೋತಿ ಪೂಜಾ ಮಹೋತ್ಸವದಲ್ಲಿ ಭಕ್ತರು ಹಲಗು ಸೇವೆ ಮಾಡುತ್ತಿರುವುದು.
ಸರಗೂರು: ಪಟ್ಟಣದ ತೊಗಟವೀರ ಕ್ಷತ್ರಿಯ ನೇಕಾರ ಸಮಾಜದಿಂದ ಚೌಡೇಶ್ವರಿ ಅಮ್ಮನವರ ವಧರ್ಂತಿ ಹಾಗೂ 86ನೇ ಜ್ಯೋತಿ ಪೂಜಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಬೆಳಗಿನ ಜಾವ ನಾಲ್ಕು ಗಂಟೆಗೆ ಭಕ್ತರು ಕಪಿಲಾ ನದಿಯಲ್ಲಿ ಮಿಂದು ಅಲ್ಲಿಂದ ದೇವಸ್ಥಾನದವರೆಗೆ ಉರುಳು ಸೇವೆ ಮಾಡಿಕೊಂಡು ದೇವಿ ದರ್ಶನ ಪಡೆದರು. ಬೆಳಗ್ಗೆ 5 ಗಂಟೆಗೆ ಸಮಯದಲ್ಲಿ ದೇವಸ್ಥಾನದಲ್ಲಿ ಗಣಪತಿ ಪೂಜೆ, ಪುಣ್ಯಾಹ, ನಾಂದಿ, ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಲಲಿತ ಸಹಸ್ರನಾಮಾರ್ಚನೆ, ದುರ್ಗಾಹೋಮ, ಪೂರ್ಣಾಹುತಿ ನಡೆದವು.
ಚೌಡೇಶ್ವರಿ ಅಮ್ಮನವರ ಹೂವಿನ ಪಲ್ಲಕ್ಕಿ ಉತ್ಸವವನ್ನು ಜ್ಯೋತಿ ಸಮೇತ ಮಂಗಳವಾದ್ಯದೊಂದಿಗೆ ಕಪಿಲಾ ನದಿ ದಡಕ್ಕೆ ಬಿಜಂಗೈಯಿಸಿ ವಿಧಿ ವಿಧಾನಗಳಿಂದ ಗಂಗಾ ಪೂಜೆ ಮಾಡಲಾಯಿತು. ಹರಕೆಯ ಬಾಯಿಬೀಗ, ಅಲಗು ಸೇವೆ, ಸ್ತೋತ್ರಪಠಣ, ಖಡ್ಗ ಸ್ತೋತ್ರ ಪಠಣ, ಭಜನೆ, ಕಳಸ ಮತ್ತು ಮಂಗಳವಾದ್ಯದೊಡನೆ ಚೌಡೇಶ್ವರಿ ಅಮ್ಮನವರ ಪಲ್ಲಕ್ಕಿ ಉತ್ಸವ, ಜ್ಯೋತಿ ಉತ್ಸವ ದೇವಸ್ಥಾನ ತಲುಪಿತು. ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಸಮುದಾಯದ ಮುಖಂಡ ಎಸ್.ವಿ.ರವಿಕುಮಾರ್ ಮತ್ತಿತರರು ಇದ್ದರು.