ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಶಿಕ್ಷಕರಿಗೆ ‘ಜೀವನದಿ ಕಾವೇರಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಡಾ.ಎನ್.ಪ್ರಭಾ, ಪುರುಷೋತ್ತಮ್, ಕಾವೇರಮ್ಮ, ಸಂಗಪ್ಪ, ಎಸ್.ಬಾಲಕೃಷ್ಣ, ಮುರಳೀಧರ, ಸಂಗಪ್ಪ ಇತರರು ಇದ್ದರು. 
ಮೈಸೂರು

ಮಕ್ಕಳು ಗುರುತಿಸುವುದೇ ಗುರುಗಳಿಗೆ ಸ್ಫೂರ್ತಿ: ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಡಾ.ಎನ್.ಪ್ರಭಾ

ಪ್ರಮುಖ ಮುಖ್ಯಾಂಶಗಳು

  • ಶಾಲಾ, ಕಾಲೇಜು ದಿನಗಳಲ್ಲಿ ಕಲಿತ ಮಕ್ಕಳು ಶಿಕ್ಷಕರನ್ನು ಎಂದೂ ಮರೆಯುವುದಿಲ್ಲ
  • ಶಿಕ್ಷಕರು ಇಂದು ಕೇವಲ ಪಾಠವನಲ್ಲದೆ ಸರ್ಕಾರ ನೀಡುವ ಕೆಲಸಗಳನ್ನೂ ಮಾಡಿಕೊಂಡು ಬರುತ್ತಿದ್ದಾರೆ
ಮೈಸೂರು:ಶಿಕ್ಷಕರು ನಿವೃತ್ತಿ ಆದರೂ ಅವರಿಂದ ಕಲಿತ ಮಕ್ಕಳು ತನ್ನ ಗುರುಗಳನ್ನು ಗುರುತಿಸಿ ತಮ್ಮ ಪರಿಚಯ ಮಾಡಿಕೊಳ್ಳುತ್ತಾರೆ. ಇದೇ ಗುರುಗಳಿಗೆ ಸ್ಫೂರ್ತಿ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಡಾ.ಎನ್.ಪ್ರಭಾ ಹೇಳಿದರು.
ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದಿಂದ ನಗರದ ಅಕ್ಕನಬಳಗ ಸಭಾಂಗಣದಲ್ಲಿ ಆಯೋಜಿಸಿದ್ದ ‘ಜೀವನದಿ ಕಾವೇರಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅಭಿನಂದನ ಭಾಷಣದಲ್ಲಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು. ಶಾಲಾ, ಕಾಲೇಜು ದಿನಗಳಲ್ಲಿ ಕಲಿತ ಮಕ್ಕಳು ಶಿಕ್ಷಕರನ್ನು ಎಂದೂ ಮರೆಯುವುದಿಲ್ಲ ಎಂದು ತಿಳಿಸಿದರು.
ಹಿರಣ್ಮಯಿ ಪ್ರತಿಷ್ಠಾನ ಹಾಗೂ ಜೀವನದಿ ಕಾವೇರಿ ಬಳಗದಿಂದ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಚಾರ. ಮಹಿಳೆ ಮನೆಯಲ್ಲಿ ನಾನಾ ಜವಾಬ್ದಾರಿಯನ್ನು ನಿರ್ವಹಿಸುತ್ತಾಳೆ. ಗೃಹಿಣಿಯಾಗಿ ಮನೆ ಕೆಲಸದ ಜತೆಗೆ ಮಕ್ಕಳಿಗೆ ಪಾಠ ಮಾಡುವ ಮೂಲಕ ಶಿಕ್ಷಣ ಸಚಿವೆಯಾಗಿ, ತಿಂಗಳ ಲೆಕ್ಕ ಸರಿದೂಗಿಸುವ ಹಣಕಾಸು ಮಂತ್ರಿ, ಸಮಾಜ ಕಲ್ಯಾಣ ಸಚಿವೆ, ಶಿಸ್ತಿನಿಂದ ಮಕ್ಕಳನ್ನು ಬೆಳೆಸುವ ಗೃಹ ಸಚಿವೆ ಹೀಗೆ ಮನೆಯಲ್ಲಿ ಎಲ್ಲ ಖಾತೆಗಳು, ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಡ್ಯ ಡಯಟ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪುರುಷೋತ್ತಮ್ ಮಾತನಾಡಿ, ಶಿಕ್ಷಕರು ಇಂದು ಕೇವಲ ಪಾಠವನಲ್ಲದೆ ಸರ್ಕಾರ ನೀಡುವ ಕೆಲಸಗಳನ್ನೂ ಮಾಡಿಕೊಂಡು ಬರುತ್ತಿದ್ದಾರೆ. ಚುನಾವಣೆ, ರಜಾ ಬಂದಾಗ ಜಾತಿಗಣತಿ, ಜನಗಣತಿ ಸೇರಿದಂತೆ ನಾನಾ ಸರ್ಕಾರಿ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ. ಆದರೂ ತಮ್ಮ ಉತ್ಸಾಹ ಕುಗ್ಗದಂತೆ ನೋಡಿಕೊಂಡು ಬಹಳ ಉತ್ಸಾಹದಿಂದ ಕೆಲಸ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲದೆ ಇತರ ಕೆಲಸಗಳ ಒತ್ತಡದ ನಡುವೆಯೂ ವಿದ್ಯಾರ್ಥಿಗಳಿಗೆ ಹೊಸದಾಗಿ ಏನಾದರೂ ಕಲಿಸಬೇಕು ಎಂದು ತವಕಿಸುತ್ತಿದ್ದಾರೆ. ಕಂಪ್ಯೂಟರ್ ಜ್ಞಾನಕ್ಕೆ ತಕ್ಕಂತೆ ಲ್ಯಾಬ್ಗಳನ್ನು ಮಾಡಿ ಅದರ ಬಗ್ಗೆ ಸಹ ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ಉಂಟು ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲ. ನಮ್ಮಲ್ಲಿರುವಂತ ಉಪಕರಣ ಬಳಸಿ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ ಎಂದು ಹೇಳಿದರು.
ಪ್ರಶಸ್ತಿಪುರಸ್ಕೃತರು:
ಎನ್.ಆರ್.ಮೊಹಲ್ಲಾ ಶಾಲೆಯ ಕೆ.ಮರಿಯಮ್ಮ, ಸಿಂಗರಮಾರನಹಳ್ಳಿಯ ಕೆ.ಟಿ.ಸಿದ್ದಪ್ಪ, ಸಿಕೆಸಿ ಶಾಲೆಯ ಎನ್.ಆರ್.ನಿರ್ಮಾಲಾ, ಎಚ್.ಡಿ.ಕೋಟೆ ಐಇಆರ್‌ಟಿಯ ಗಿರೀಶ್, ದುದ್ದಗೆರೆಯ ಡಿ.ಜೆಸ್ಸಿ ಗೀತಾಮಣಿ, ಹಡಜನದ ರೇಣುಕಾ, ಗಾಂಧಿನಗರದ ಕಾರ್ಮೆಲ್ ಅಂಟೋನೆಟ್, ಮಾವಿನಹಳ್ಳಿಯ ಅಸ್ಮಾ ಅಂಜುಮ್, ಏಳಿಗೆಹುಂಡಿಯ ಎಂ.ಎಸ್.ಸುಶೀಲಾ, ಪರೀಫ್ ಕಾಲನಿಯ ಬಿ.ಎಸ್.ನಾಗಸುಂದ್ರ, ವಿದ್ಯಾನಿಕೇತನದ ಕೆ.ಎಸ್.ಪವಿತ್ರಾ ಅವರಿಗೆ ಜೀವನದಿ ಕಾವೇರಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಕಾವೇರಿ ಬಳಗದ ಅಧ್ಯಕ್ಷೆ ಕಾವೇರಮ್ಮ, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಸಂಗಪ್ಪ, ಮೈಸೂರು ಕನ್ನಡ ವೇದಿಕೆಯ ಎಸ್.ಬಾಲಕೃಷ್ಣ, ಮುರಳೀಧರ, ಸಂಗಪ್ಪ ಇತರರು ಇದ್ದರು.