- ಸಂಕಷ್ಟದಲ್ಲಿರುವ ಅಪ್ರಾಪ್ತರಿಂದ ರಕ್ಷಣೆಗೆ ಕರೆ
- 3 ವರ್ಷದಲ್ಲಿ 1962 ಪ್ರಕರಣಗಳು ದಾಖಲು
ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ತುರ್ತು ಸ್ಪಂದಿಸುವ, ಅಗತ್ಯ ನೆರವು ನೀಡುವ ‘ಮಕ್ಕಳ ಸಹಾಯವಾಣಿ-1098’ಗೆ ಜಿಲ್ಲೆಯಲ್ಲಿ ದೂರುಗಳ ಸುರಿಮಳೆಯಾಗುತ್ತಿದೆ. ನಿರೀಕ್ಷೆ ಮೀರಿ ಕರೆಗಳು ಸ್ವೀಕೃತವಾಗಿದ್ದರೆ, ಹೆಚ್ಚಿನ ಪ್ರಮಾಣದಲ್ಲಿ ಪ್ರಕರಣಗಳೂ ದಾಖಲಾಗಿವೆ.
ಕೇಂದ್ರ ಸರ್ಕಾರದ ಶೇ.100ರಷ್ಟು ಆರ್ಥಿಕ ನೆರವಿನೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ 2023ರ ಸೆಪ್ಟೆಂಬರ್‌ನಿಂದ ಮಕ್ಕಳ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು, ಜಿಲ್ಲೆಯಲ್ಲೂ ಇದು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಆರಂಭಿಕ ವರ್ಷದಲ್ಲಿ ದೂರುಗಳು, ಸ್ವೀಕೃತ ಕರೆಗಳು, ದಾಖಲಾದ ಪ್ರಕರಣಗಳು ಸಂಖ್ಯೆ ಕಡಿಮೆಯಾಗಿತ್ತು. ಬಳಿಕ ಅದು ಹೆಚ್ಚುತ್ತಲೇ ಸಾಗಿದೆ. ಕಳೆದ ಮೂರು ವರ್ಷದಲ್ಲೇ ಇವುಗಳ ಸಂಖ್ಯೆ ದ್ವಿಗುಣಗೊಂಡಿದೆ. ಇದು ಮಕ್ಕಳು ಅಸುರಕ್ಷತೆಯನ್ನು ಸಂಕೇತಿಸುತ್ತಿದೆ.
ಇನ್ನಷ್ಟು ಹೆಚ್ಚಿನ ಸುರಕ್ಷತಾ ವಾತಾವರಣ, ಪರಿಸ್ಥಿತಿಯನ್ನು ಸೃಷ್ಟಿ ಮಾಡಬೇಕಿದೆ. ಅದಕ್ಕಾಗಿ ಇನ್ನಷ್ಟು ಕ್ರಮ ಕೈಗೊಳ್ಳಬೇಕಾಗಿದೆ ಎಂಬುದನ್ನೂ ಇದುವೇ ಪ್ರತಿಬಿಂಬಿಸುತ್ತಿದೆ.
ಕಳೆದ ಮೂರು ವರ್ಷದಲ್ಲಿ 1,962 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 1,842 ಪ್ರಕರಣಗಳನ್ನು ವಿಲೇವಾರಿ ಮಾಡಿ, 120 ಕೇಸ್‌ಗಳನ್ನು ಇತ್ಯರ್ಥ ಮಾಡುವ ಹಂತದಲ್ಲಿವೆ. ಮಕ್ಕಳ ಸಹಾಯವಾಣಿಯ ಆರಂಭಿಕ ವರ್ಷವಾದ 2023-24ನೇ ಸಾಲಿನಲ್ಲಿ 453 ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ ಎಲ್ಲ ಪ್ರಕರಣಗಳು ವಿಲೇವಾರಿ ಮಾಡಲಾಗಿದ್ದು, ಯಾವುದೂ ಬಾಕಿ ಉಳಿದಿಲ್ಲ.
2024-25ನೇ ಸಾಲಿನಲ್ಲಿ 439 ಪ್ರಕರಣಗಳು ದಾಖಲಾಗಿದ್ದವು. ಇವುಗಳನ್ನೂ ವಿಲೇವಾರಿ ಮಾಡಲಾಗಿದೆ. ಇದರೊಂದಿಗೆ ವಿಲೇವಾರಿ ಪ್ರಕರಣಗಳನ್ನು ಶೂನ್ಯಕ್ಕಿಳಿಸಲಾಗಿದೆ.
2025-26ನೇ ವರ್ಷದಲ್ಲಿ ದಾಖಲಾಗಿರುವ ಪ್ರಕರಣಗಳು ನಿರೀಕ್ಷೆ ಮೀರಿ ಹೆಚ್ಚಾಗಿ ಸಾವಿರ ಗಡಿ ದಾಟಿದೆ. ಈ ವರ್ಷದಲ್ಲಿ 1,070 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 950 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಇನ್ನೂ 120 ಪ್ರಕರಣಗಳ ವಿಲೇವಾರಿ ಬಾಕಿ ಉಳಿದಿದೆ.
ದಾಖಲಾಗಿರುವ ಪ್ರಕರಣಗಳ ಪೈಕಿ ಬಾಲ್ಯವಿವಾಹವೇ ಅಧಿಕ. ಇದುವೇ ಚಿಂತಿಗೀಡು ಮಾಡಿದೆ. ಶೇ.70ರಷ್ಟು ಸಾಕ್ಷರತೆ ಇರುವ ಸಾಂಸ್ಕೃತಿಕ ಜಿಲ್ಲೆ ಎಂದು ಹಿರಿಮೆ ಪಡೆದಿರುವ ಮೈಸೂರಿನಲ್ಲಿ ಬಾಲ್ಯವಿವಾಹಗಳು ಎಗ್ಗಿಲ್ಲದೇ ನಡೆಯುತ್ತಿರುವುದು ಆತಂಕ ಮೂಡಿಸಿದೆ.
ಕಳೆದ ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ 691 ಬಾಲ್ಯವಿವಾಹಗಳು ವರದಿಯಾಗಿವೆ. ಈ ಪೈಕಿ ಶೇ.98ರಷ್ಟು ಬಾಲಕಿಯರು ಸಂಸಾರಿಕ ಬಂಧನಕ್ಕೆ ಒಳಪಟ್ಟಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಜತೆಗೆ, ಭಿಕ್ಷಾಟನೆ ಮಾಡುತ್ತಿದ್ದ 168 ಮಕ್ಕಳನ್ನೂ ರಕ್ಷಿಸಲಾಗಿದೆ. ನಾಪತ್ತೆಯಾಗಿದ್ದ 114 ಮಕ್ಕಳನ್ನೂ ಪತ್ತೆ ಮಾಡಿ ಪಾಲಕರ ವಶಕ್ಕೆ ಒಪ್ಪಿಸಲಾಗಿದೆ.
ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷಕ್ಕಿಂತ ಮುಂಚೆ ವಿವಾಹ ಮಾಡುವುದನ್ನು ಅಪರಾಧವಾಗಿದೆ. ಇದನ್ನು ತಡೆಯಲು ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಬಾಲ್ಯವಿವಾಹ ನಿಷೇಧಾಧಿಕಾರಿಗಳನ್ನೂ ನೇಮಿಸಲಾಗಿದೆ. ಆದಾಗ್ಯೂ, ಸಣ್ಣವಯಸ್ಸಿಗೆ ಹೆಣ್ಣು ಮಕ್ಕಳನ್ನು ಮದುವೆ ಮಾಡುವುದು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ ಎಂಬುದು ಕಳವಳಕಾರಿ.
ಕರೆ ಮಾಡಿದ ತ್ವರಿತ ರಕ್ಷಣೆ:
ಸಂಕಷ್ಟ ಪರಿಸ್ಥಿತಿಯಲ್ಲಿರುವ ಯಾವುದೇ ಮಗುವು ದಿನದ 24 ಗಂಟೆ ಕಾರ್ಯನಿರ್ವಹಿಸುವ ಉಚಿತ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಜಿಲ್ಲಾ ಮಕ್ಕಳ ಸಹಾಯವಾಣಿ ಘಟಕವು ತೊಂದರೆಗೆ ಸಿಲುಕಿರುವ ಮಕ್ಕಳನ್ನು ತ್ವರಿತವಾಗಿ ತಲುಪಿ ರಕ್ಷಣೆ ಮಾಡಲಿದೆ.
ಪೊಲೀಸರು, ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳು, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ರಕ್ಷಣಾ ಕೆಲಸದಲ್ಲಿ ತೊಡಗಿವೆ. ಜತೆಗೆ, ಪಾಲನೆ, ರಕ್ಷಣೆಯ ಅಗತ್ಯ ಇರುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸಿಕೊಡಲಾಗುತ್ತಿದೆ.
ರಜೆಯಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದು ಹೆಚ್ಚು
ಇದೀಗ ಪರೀಕ್ಷೆ ಮುಗಿದು ಶಾಲಾ-ಕಾಲೇಜುಗಳಿಗೆ ರಜೆ ಕೊಟ್ಟಿರುವುದರಿಂದ ಅಪ್ರಾಪ್ತರು ಕೆಲಸಗಳಲ್ಲಿ ತೊಡಗುವುದು ಹೆಚ್ಚಾಗುತ್ತದೆ. ಇದನ್ನು ತಡೆಯುವುದು ಇದೀಗ ಸವಾಲಿನ ಕಾರ್ಯ. ಆರ್ಥಿಕ ಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾಗಲು ಕೆಲ ಅಪ್ರಾಪ್ತರು ಕೆಲಸದಲ್ಲಿ ಭಾಗಿಯಾಗುತ್ತಿದ್ದಾರೆ.
ಇದಕ್ಕೆ ತಡೆವೊಡ್ಡಿದ್ದರೆ ಕುಟುಂಬಕ್ಕೆ ತೊಂದರೆಯಾಗಲಿದೆ. ಸುಮ್ಮನಿದ್ದರೆ ಕಾನೂನು ಉಲ್ಲಂಘನೆಯಾಗುತ್ತದೆ. ಇಂತಹ ಸಂದಿಗ್ಧತೆಯೂ ಎದುರಾಗುತ್ತಿದೆ.
14 ವರ್ಷದೊಳಗಿನ ಮಕ್ಕಳನ್ನು ಯಾವುದೇ ರೀತಿಯ ಉದ್ಯೋಗದಲ್ಲಿ ತೊಡಗಿಸುವುದು ಮತ್ತು 14ರಿಂದ 18 ವರ್ಷದೊಳಗಿನ ಹದಿಹರೆಯದ ಮಕ್ಕಳನ್ನು ಅಪಾಯಕಾರಿ ಉದ್ಯಮಗಳಲ್ಲಿ ದುಡಿಸಿಕೊಳ್ಳುವುದು ನಿಷಿದ್ಧ. ಆದರೆ, ಪಾಲಕರ ಅರಿವಿನ ಕೊರತೆ, ಗೊತ್ತಿದ್ದರೂ ತಮ್ಮ ಮಕ್ಕಳನ್ನು ಕೆಲಸಕ್ಕೆ ಹಚ್ಚುತ್ತಿದ್ದಾರೆ ಎಂಬುದೇ ದುರಂತ.
ಜಿಲ್ಲೆಯಲ್ಲಿ ಮಕ್ಕಳ ಸುರಕ್ಷತೆಗೆ ಅನೇಕ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಶಿಕ್ಷಣ, ಪೊಲೀಸ್, ಸಮಾಜಕಲ್ಯಾಣ, ಗ್ರಾಮೀಣ ಮತ್ತು ಪಂಚಾಯತ್ ರಾಜ್ಯ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸೇರಿದಂತೆ ಇತರ ಇಲಾಖೆಗಳು ಮಕ್ಕಳ ರಕ್ಷಣಾ ನೀತಿ ಅನ್ವಯಿಸಲಾಗುತ್ತಿದ್ದು, ಜವಾಬ್ದಾರಿ ನಿಗದಿಪಡಿಸಲಾಗಿದೆ.
ಪಾಲನೆ, ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ವಸತಿ ಸೌಕರ್ಯ, ಆಶ್ರಯ ಒದಗಿಸಲಾಗುತ್ತದೆ. ಮಕ್ಕಳ ಪಾಲನಾ ಸಂಸ್ಥೆ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಈ ಸಂಸ್ಥೆಗಳನ್ನು ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯ ತನಿಖಾ ಸಮಿತಿಯು ಪ್ರತಿ 3 ತಿಂಗಳಿಗೊಮ್ಮೆ ಪರಿಶೀಲಿಸಲಿದೆ. ಇದರೊಂದಿಗೆ ಮಕ್ಕಳ ಸೌಕರ್ಯ, ಸುರಕ್ಷತೆಯನ್ನೂ ಖಾತ್ರಿಪಡಿಸಿಕೊಳ್ಳಲಾಗುತ್ತದೆ.
ಕ್ರಮಗಳೊಂದಿಗೆ ಮಕ್ಕಳಿಗೆ ರಕ್ಷಣೆ ಖಾತ್ರಿ
ಶಾಲೆ, ವಸತಿ ಶಾಲೆ, ಹಾಸ್ಟೆಲ್‌ಗಳು, ಮಕ್ಕಳ ಪಾಲನಾ ಸಂಸ್ಥೆಗಳು ಸಲಹಾ ಪೆಟ್ಟಿಗೆಯನ್ನು ನಿರ್ವಹಿಸಬೇಕು. ಇದರಲ್ಲಿ ದಾಖಲಾಗುವ ಎಲ್ಲ ದೂರುಗಳನ್ನು ಮಕ್ಕಳ ಸುರಕ್ಷತಾ ಸಮಿತಿ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ.
ಜತೆಗೆ, ಮಕ್ಕಳ ಪಾಲನಾ ಸಂಸ್ಥೆಗಳಿಗೆ ಸಿಬ್ಬಂದಿಯನ್ನು ನೇಮಿಸುವಾಗ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲದಿರುವುದನ್ನು ಪೊಲೀಸ್ ಪರಿಶೀಲನಾ ವರದಿಯೊಂದಿಗೆ ಖಾತ್ರಿ ಪಡಿಸಿಕೊಳ್ಳಬೇಕಾಗುತ್ತಿದೆ. ಹೀಗೆ ವಿವಿಧ ಕ್ರಮಗಳ ಮೂಲಕ ಮಕ್ಕಳಿಗೆ ರಕ್ಷಣೆ ಕಲ್ಪಿಸಲಾಗುತ್ತಿದೆ. ಆದಾಗ್ಯೂ, ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ನಿಂತಿಲ್ಲ ಎಂಬುದು ಬೇಸರದ ಸಂಗತಿ.
ಮಕ್ಕಳ ಸಹಾಯವಾಣಿಯಲ್ಲಿ ದಾಖಲಾದ ಪ್ರಕರಣಗಳು
ಸಹಾಯವಾಣಿಯಲ್ಲಿ ದಾಖಲಾಗಿರುವ ಪ್ರಕರಣಗಳ ವಿವರ
ವರ್ಷ ಬಾಲ್ಯವಿವಾಹ ಭಿಕ್ಷಾಟನೆ ಮಕ್ಕಳ ಪತ್ತೆ
ಮಕ್ಕಳ ಸಹಾಯವಾಣಿ-1098’ ಕುರಿತು ಗ್ರಾಮದಿಂದ ನಗರಮಟ್ಟದ ವರೆಗೂ ವ್ಯಾಪಕವಾಗಿ ಪ್ರಚಾರ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಶಾಲಾ-ಕಾಲೇಜುಗಳಲ್ಲೂ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿ ಸಂಕಷ್ಟದ ಪರಿಸ್ಥಿತಿ ಬಂದಾಗ ಕರೆ ಮಾಡುವಂತೆ ತಿಳಿಸಲಾಗುತ್ತಿದೆ. ಇದರ ಫಲವಾಗಿ ಹೆಚ್ಚಿನ ಪ್ರಮಾಣದಲ್ಲಿ ದೂರುಗಳು, ಕರೆಗಳು ಸ್ವೀಕೃತವಾಗುತ್ತಿವೆ.