ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಪಿರಿಯಾಪಟ್ಟಣ ಹಾಗೂ ಗ್ರಾ.ಪಂ. ಸಹಯೋಗದೊಂದಿಗೆ ಸಂಕ್ರಾಂತಿ ಸುಗ್ಗಿ ಹಬ್ಬದ ಸಂಭ್ರಮ ನಡೆಯಿತು. 
ಮೈಸೂರು

ಬೆಟ್ಟದಪುರದಲ್ಲಿ ಪುಟಾಣಿಗಳ ಸುಗ್ಗಿ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ಶ್ರೀಸಿಡಿಲು ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ವಿಶೇಷ
ಬೆಟ್ಟದಪುರ: ಬೆಟ್ಟದಪುರದ ಶ್ರೀಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಸುಗ್ಗಿ ಹಬ್ಬದ ಸಂಭ್ರಮ ಪುಟಾಣಿಗಳ ಸಮ್ಮುಖದಲ್ಲಿ ವಿಶೇಷವಾಗಿ ಕಳೆಗಟ್ಟಿತ್ತು.
ಬೆಟ್ಟದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಪ್ರತಿಯೊಬ್ಬ ಅನ್ನದಾತನು ಭೂ ತಾಯಿಯನ್ನು ನಂಬಿ ಬದುಕುವ ಶ್ರಮಕ್ಕೆ ಪ್ರತಿಫಲ ಸಿಗುವ ಈ ಕಾಲವೇ ಸುಗ್ಗಿ ಹಬ್ಬವಾಗಿದೆ. ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಬಳಕೆ ಅನಿವಾರ್ಯವಾಗಿದೆ. ಆದರೆ ಇದರಿಂದ ಬೆಳೆಯ ಗುಣಮಟ್ಟ ಮತ್ತು ಮಾನವನ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಹಳೆಯ ಬೇಸಾಯ ಪದ್ಧತಿಯನ್ನು ಉಳಿಸಬೇಕಾದ ಅನಿವಾರ್ಯತೆ ಇಂದಿಗೂ ಇದೆ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಮಾತನಾಡಿ, ಬೆಟ್ಟದಪುರ ಅಂಗನವಾಡಿ ಕೇಂದ್ರಗಳ ವತಿಯಿಂದ ಮೊದಲ ಬಾರಿಗೆ ಮಕ್ಕಳನ್ನು ಜತೆಗೂಡಿಸಿ ಸುಗ್ಗಿ ಹಬ್ಬವನ್ನು ಆಚರಿಸುತ್ತಿದ್ದಾರೆ. ರೈತರು ಮಾಡುವ ಕಸುಬುಗಳನ್ನು, ಮಕ್ಕಳಿಗೆ ತಿಳಿಸುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಎಂದರು.
ಪುಟಾಣಿ ಮಕ್ಕಳು ಅಕ್ಕಿ ಬೀಸುವುದು, ಭತ್ತ ಕುಟ್ಟುವುದು, ರಾಗಿ ಹದ ಮಾಡುವುದು, ತರಕಾರಿ ಮಾರಾಟ, ಆಟ ಸಾಮಗ್ರಿಗಳ ಮಾರಾಟ, ಬಳೆ ಮಾರಾಟವನ್ನು ಪ್ರದರ್ಶನ ಮಾಡುವ ಮೂಲಕ ಪಾಲಕರನ್ನು ರಂಜಿಸಿದರು. ರೈತರು ಉಳುಮೆ ಮಾಡಲು ಬಳಸುವ ಸಾಧನಗಳನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಇದೇ ವೇಳೆ ಎಳ್ಳು ಬೆಲ್ಲವನ್ನು ಎಲ್ಲರಿಗೂ ಹಂಚಿ ಶುಭಾಶಯ ವಿನಿಯೋಗ ಮಾಡಿಕೊಂಡರು. ಗ್ರಂಥಾಲಯದ ಮೇಲ್ವಿಚಾರಕ ಮೈಲಾರಿ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ನೀಡಿದರು.
ಬಾಲ ವಿಕಾಸ ಸಲಹಾ ಸಮಿತಿ ಅಧ್ಯಕ್ಷೆ ಸುಶ್ಮಿತಾ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ಶೀಲಾ, ಆರ್.ಜ್ಯೋತಿ, ಆಶಾ, ಸಹಾಯಕಿ ಶಾಂಭವಿ, ರಾಣಿ, ದಿವ್ಯಾ, ಪಾಲಕರಾದ ಆಶಾ, ಅಶ್ವಿನಿ, ಪಂಚಾಯಿತಿ ಸಿಬ್ಬಂದಿ ಅಣ್ಣಯ್ಯ, ದೀಪು ಸೇರಿದಂತೆ ಇತರರು ಇದ್ದರು.