ಮಕ್ಕಳ ಸಹಾಯವಾಣಿ-1098 
ಮೈಸೂರು

ದೂರು ಕೊಟ್ಟು ರಕ್ಷಣೆ ಪಡೆದ ಮಕ್ಕಳು!

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಸಹಾಯವಾಣಿ-1098ಗೆ ನೆರವಿನ ಮೊರೆ
  • ಪ್ರಸಕ್ತ ಸಾಲಿನಲ್ಲಿ ಶೇ.60ರಷ್ಟು ಚಿಣ್ಣರಿಂದಲೇ ಕರೆ
  • ದೂರು ಕೊಟ್ಟ ಶೇ.60ರಷ್ಟು ಮಕ್ಕಳು
  • ಭಿಕ್ಷಾಟನೆ ಕೇಸ್‌ಗಳೇ ಹೆಚ್ಚು:
  • ಶೋಷಣೆಗೆ ಒಳಗಾದರೆ ತಕ್ಷಣ ಮಕ್ಕಳ ಸಹಾಯವಾಣಿ-1098ಗೆ ಕರೆ ಮಾಡಿ

ಮಂಜುನಾಥ ತಿಮ್ಮಯ್ಯ ಮೈಸೂರು

ಜಿಲ್ಲೆಯಲ್ಲಿ ಸಂಕಷ್ಟ ಹಾಗೂ ಸವಾಲಿನಲ್ಲಿರುವ ಮಕ್ಕಳು ಸ್ವಯಂ ಪ್ರೇರಣೆಯಿಂದ ದೂರು ನೀಡುವ ಮೂಲಕ ಧೈರ್ಯ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಮಕ್ಕಳ ಸಹಾಯವಾಣಿ-1098ಗೆ ಬರುವ ದೂರುಗಳ ಸಂಖ್ಯೆ ಹೆಚ್ಚಾಗುತ್ತಿವೆ...!
ಎಲ್ಲ ಸರ್ಕಾರಿ, ಅರೆ ಸರ್ಕಾರಿ, ಸೇವಾ ಸಂಸ್ಥೆಗಳ ಕಟ್ಟಡಗಳ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಸಲು ರಾಜ್ಯ ಸರ್ಕಾರದ ಸೂಚನೆ ನೀಡಿದೆ. ಇದರಿಂದ ಮಕ್ಕಳ ವಲಯದಲ್ಲಿ ಅರಿವು ಮೂಡಿದೆ. ಇದರ ಫಲವಾಗಿ ತಮಗೆ ತೊಂದರೆಯಾದರೆ ದೂರು ನೀಡಲು ಅಪ್ರಾಪ್ತರು ಮುಂದೆ ಬರುತ್ತಿದ್ದಾರೆ. ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಸಾರ್ವಜನಿಕರು ಸಹ ದೂರು ನೀಡಿ ಚಿಣ್ಣರ ಹಿತರಕ್ಷಣೆಗೆ ಕೈಜೋಡಿಸಿದ್ದಾರೆ.

ಕಟ್ಟಡಗಳ ಮೇಲೆ ಸಂಖ್ಯೆ ಪ್ರದರ್ಶನ:

ಮಕ್ಕಳ ಹಕ್ಕುಗಳ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅನುಷ್ಠಾನಗೊಂಡಿರುವ ಮಿಷನ್ ವಾತ್ಸಲ್ಯ ಯೋಜನೆಯು ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣೆಯ ಆದ್ಯತೆ ಸಾಧಿಸುವ ಮಾರ್ಗವಾಗಿದೆ. ತೊಂದರೆಯಲ್ಲಿರುವ ಮಕ್ಕಳ ಹಿತರಕ್ಷಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ಇಂತಹ ಮಕ್ಕಳ ಗುರುತಿಸುವಿಕೆ, ಸಂಕಷ್ಟ ಸ್ಥಿತಿಯಲ್ಲಿ ಮಾಹಿತಿ ಹಂಚಿಕೊಳ್ಳಲು ಹಾಗೂ ಪುನರ್ವಸತಿ ಸೇವೆ ಕಲ್ಪಿಸುವಲ್ಲಿ ಮಕ್ಕಳ ಸಹಾಯವಾಣಿ-1098 ಮಹತ್ವದ ಪಾತ್ರ ವಹಿಸಿದೆ. ಈ ಸಂಖ್ಯೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದರೆ ಬಾಲ್ಯವಿವಾಹ, ಬಾಲಕಾರ್ಮಿಕತೆ ಸಂಕಷ್ಟದಲ್ಲಿನ ಮಕ್ಕಳ ರಕ್ಷಣೆ ಸೇರಿದಂತೆ ವಿವಿಧ ರೀತಿಯ ಮಕ್ಕಳ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸಾಧ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳು, ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಸೇವಾ-ಸಂಸ್ಥೆಗಳು ಸೇರಿದಂತೆ ಎಲ್ಲ ಕಟ್ಟಡಗಳ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಶಾಶ್ವತ ಫಲಕದಲ್ಲಿ ಪ್ರದರ್ಶಿಸಲು ಇತ್ತೀಚಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ ಪ್ರಯೋಗ ಫಲ ಕೊಟ್ಟಿದೆ.

ಬೆಳಗಿದ ಅರಿವಿನ ಜ್ಯೋತಿ:

ಈ ಅರಿವಿನ ಜ್ಯೋತಿ ಮಕ್ಕಳ ಮನವನ್ನು ತಟ್ಟಿದೆ. ತಮ್ಮ ರಕ್ಷಣೆಗಾಗಿ ಇವರು ಮಕ್ಕಳ ಸಹಾಯವಾಣಿಯ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ದೂರುಗಳ ಸಂಖ್ಯೆ ಅಧಿಕವಾಗುತ್ತಿದೆ. ಜಿಲ್ಲೆಯಲ್ಲಿ ನಿತ್ಯ 10ಕ್ಕಿಂತ ಹೆಚ್ಚು ದೂರುಗಳು ದಾಖಲಾಗುತ್ತಿವೆ. ಭಿಕ್ಷಾಟನೆ, ಬಾಲ್ಯವಿಹಾರ, ಶಾಲೆ ಬಿಡಿಸುವುದು, ಪಾಲಕರಿಂದ ಮಕ್ಕಳ ನಿಂದನೆ ಪ್ರಕರಣಗಳು ಹೀಗೆ ವಿವಿಧ ವಿಷಯಗಳ ಕುರಿತು ದೂರುಗಳು ಬರುತ್ತಿವೆ.
ಇವುಗಳನ್ನು ದಾಖಲಿಸಿ ಸಂಬಂಧಪಟ್ಟ ಇಲಾಖೆ, ಪೊಲೀಸರ ಸಹಾಯದಿಂದ ಮಕ್ಕಳಿಗೆ ರಕ್ಷಣೆ ಒದಗಿಸಲಾಗುತ್ತಿದೆ. ಅವರ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗುತ್ತದೆ. ಬಾಲ್ಯವಿವಾಹ, ಬಾಲಕಾರ್ಮಿಕ, ಪೋಕ್ಸೋದಂತಹ ಪ್ರಕರಣಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ದೂರು ಕೊಟ್ಟ ಶೇ.60ರಷ್ಟು ಮಕ್ಕಳು

ವರ್ಷದಿಂದ ವರ್ಷಕ್ಕೆ ದೂರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೂರು ವರ್ಷದ ಅಂಕಿ-ಅಂಶ ಗಮನಿಸಿದರೆ 2023-24ನೇ ಸಾಲಿನಲ್ಲಿ 710 ದೂರುಗಳು ದಾಖಲಾಗಿದ್ದರೆ, 2024-25ನೇ ಸಾಲಿನಲ್ಲಿ 918 ದೂರುಗಳು ಬಂದಿವೆ. ಪ್ರಸ್ತಕ 2025-26ರಲ್ಲಿ ಈವರೆಗೆ 727 ದೂರುಗಳು ವರದಿಯಾಗಿವೆ. ಈ ಸಾಲು ಮುಗಿಯಲು ಇನ್ನೂ 4 ತಿಂಗಳು ಬಾಕಿ ಇರುವುದರಿಂದ ದೂರುಗಳ ಸಂಖ್ಯೆ ಒಂದು ಸಾವಿರ ದಾಟುವ ಸಾಧ್ಯತೆ ಇದೆ.
ಕ್ರಮವಾಗಿ ಮೂರು ವರ್ಷದಲ್ಲಿ ಶೇ.40, ಶೇ. 50 ಮತ್ತು ಶೇ.60ರಷ್ಟು ಮಕ್ಕಳು ಖುದ್ದು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ಕೊಟ್ಟಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಮಕ್ಕಳು ಈ ರೀತಿಯ ದೃಢ ನಿರ್ಧಾರ ಕೈಗೊಳ್ಳುತ್ತಿರುವುದರಿಂದ ಅವರನ್ನು ರಕ್ಷಿಸಲು ಸಹಕಾರಿಯಾಗಿದೆ. ತ್ವರಿತ ಕಾರ್ಯಾಚರಣೆ, ಕಾನೂನಿನ ಕ್ರಮಕ್ಕೂ ನೆರವಾಗಿದೆ ಎಂಬುದು ವಿಶೇಷ.
2023-24ನೇ ಸಾಲಿನಲ್ಲಿ ವಿವಿಧ ಸಮಸ್ಯೆಯಲ್ಲಿ ಸಿಲುಕಿರುವ 47 ಮಕ್ಕಳು ಆಪ್ತ ಸಮಾಲೋಚನೆಗಾಗಿ ದೂರು ನೀಡಿದ್ದಾರೆ. ನಾಪತ್ತೆ ಆಗಿದ್ದ 12 ಮಕ್ಕಳನ್ನು ಮೈಸೂರು ನಗರ ಭಾಗದಲ್ಲಿ ಸಂರಕ್ಷಣೆ ಮಾಡಲಾಗಿದೆ. 87 ಶಾಲೆ ಬಿಟ್ಟ ಮಕ್ಕಳು, 94 ಭಿಕ್ಷಾಟನೆ, ಪಾಲನೆ, ಪೋಷಣೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಸುಮಾರು 470 ಪ್ರಕರಣ ದಾಖಲಾಗಿದೆ.
2024-25ನೇ ಸಾಲಿನಲ್ಲಿ ದಾಖಲಾಗಿರುವ 918 ಪ್ರಕರಣಗಳಲ್ಲಿ ಆಪ್ತ ಸಮಾಲೋಚನೆ- 44 , ಶಾಲೆ ಬಿಟ್ಟ ಮಕ್ಕಳು- 59, ಶಾಲೆಯಲ್ಲಿನ ಇತರ ಸಮಸ್ಯೆಗಳು-102, ಸಿಕ್ಕಿರುವ ಮಕ್ಕಳು-49, ಭಿಕ್ಷಾಟನೆ- 48, ಪಾಲನೆ, ಪೋಷಣೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ 616 ಪ್ರಕಣಗಳು ವರದಿಯಾಗಿವೆ. 2025-26ರಲ್ಲಿ 727 ದೂರುಗಳ ಕರೆಗಳು ಬಂದಿವೆ. ಅದರಲ್ಲಿ ಆಪ್ತ ಸಮಾಲೋಚನೆ-49, ಶಾಲೆ ಬಿಟ್ಟ ಮಕ್ಕಳು-60, ಇತರ ಶಾಲಾ ಸಮಸ್ಯೆ-84, ಭಿಕ್ಷಾಟನೆ-81, ಸಿಕ್ಕಿರುವ ಮಕ್ಕಳು-33, ಪಾಲನೆ ಪೋಷಣೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ 420 ಪ್ರಕರಣ ದಾಖಲಾಗಿವೆ.

ಭಿಕ್ಷಾಟನೆ ಕೇಸ್‌ಗಳೇ ಹೆಚ್ಚು:

ದೂರುಗಳ ಪೈಕಿ ಭಿಕ್ಷಾಟನೆ ಪ್ರಕರಣಗಳೇ ಅಧಿಕವಾಗಿವೆ. ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮೈಸೂರು ಭಿಕ್ಷಾಟನೆಗೆ ಹೇಳಿಮಾಡಿಸಿದಂತಹ ತಾಣವಾಗಿದೆ. ಅನ್ಯ ಜಿಲ್ಲೆಗಳಿಂದ ಇಲ್ಲಿಗೆ ಕುಟುಂಬಗಳು ವಲಸೆ ಬರುತ್ತಿವೆ. ಪಾಲಕರು ಪ್ಲಾಸ್ಟಿಕ್, ಬಲೂನ್ ಸೇರಿದಂತೆ ಇನ್ನಿತರ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ.
ಅವರ ಮಕ್ಕಳನ್ನು ಭಿಕ್ಷಾಟನೆಗೆ ಹಚ್ಚುತ್ತಿದ್ದಾರೆ. ಗ್ರಾಮಾಂತರ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆ, ಪ್ರೇಕ್ಷಣೀಯ ತಾಣಗಳ ಎದುರು ಭಿಕ್ಷಾಟನೆ ಮಾಡುವ ಮಕ್ಕಳು ಕಣ್ಣಿಗೆ ಬೀಳುತ್ತಿದ್ದಾರೆ. ಇವರನ್ನು ವಿವಿಧ ಇಲಾಖೆಯ ಅಧಿಕಾರಿಗಳು ಹಿಡಿದು ಪುನರ್ವಸತಿ ಕಲ್ಪಿಸಿಕೊಟ್ಟರೂ, ಅಲ್ಲಿಯಿಂದ ತಪ್ಪಿಸಿಕೊಂಡು ಬಂದು ಮತ್ತೆ ಭಿಕ್ಷಾಟನೆಯಲ್ಲಿ ಸಕ್ರಿಯವಾಗುತ್ತಿರುವುದು ತಲೆನೋವಿನ ಸಂಗತಿಯಾಗಿದೆ.

ಬಾಲ್ಯವಿಹಾರ ತಡೆದ ಬಾಲಕಿಯರು

ಬಹಳಷ್ಟು ಬಾಲಕಿಯರೇ ತಮ್ಮ ಬಾಲ್ಯವಿವಾಹದಿಂದ ರಕ್ಷಣೆ ಪಡೆದುಕೊಂಡಿದ್ದಾರೆ. ಮಕ್ಕಳ ಸಹಾಯವಾಣಿ ದೂರು ನೀಡಿ ತಮ್ಮ ವಿವಾಹ ನಿಶ್ಚಯವಾಗಿರುವ ಕುರಿತು ಧೈರ್ಯದಿಂದ ಹೇಳಿದ್ದಾರೆ. ಈ ದೂರು ಆಧರಿಸಿ ತಕ್ಷಣ ಕಾರ್ಯಪ್ರವೃತ್ತರಾಗುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಪೊಲೀಸರು, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ಮಾಡಿ ಬಾಲ್ಯ ವಿವಾಹ ತಡೆದು ಅಪ್ರಾಪ್ತೆಯನ್ನು ಸಂರಕ್ಷಣೆ ಮಾಡಿದ್ದಾರೆ.
ಜತೆಗೆ ಬಲವಂತವಾಗಿ ಮದುವೆ ಮಾಡಲು ಮುಂದಾದ ಪಾಲಕರು, ಸಂಬಂಧಪಟ್ಟವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದು ಸಾಧ್ಯವಾಗಿದ್ದು ಬಾಲಕಿಯರಿಂದಲೇ ಎಂಬುದು ಮೆಚ್ಚುವ ಸಂಗತಿ. ಬಾಲ್ಯ ವಿವಾಹದಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲೇ 3ನೇ ಸ್ಥಾನದಲ್ಲಿದೆ. ಬೆಂಗಳೂರು, ಬೆಳಗಾವಿ ನಂತರ ಮೈಸೂರು ಜಿಲ್ಲೆ ಬಾಲಕಿಯರ ವಿವಾಹದಲ್ಲಿ ಮುಂಚೂಣಿಯಲ್ಲಿದೆ ಎಂಬುದು ಆತಂಕಕಾರಿ ಸಂಗತಿ.

ಶೋಷಣೆಗೆ ಒಳಗಾದರೆ ತಕ್ಷಣ ಮಕ್ಕಳ ಸಹಾಯವಾಣಿ-1098ಗೆ ಕರೆ ಮಾಡಿ

18 ವರ್ಷದೊಳಗಿನ ಮಕ್ಕಳು ಸಂಕಷ್ಟ, ತೊಂದರೆ, ದೈಹಿಕ/ ಮಾನಸಿಕ ಶಿಕ್ಷೆ, ಹಿಂಸೆ, ನಿರ್ಲಕ್ಷ್ಯ, ತಾರತಮ್ಯ, ಲೈಂಗಿಕ ಆಧಾರಿತ ಯಾವುದೇ ರೀತಿಯ ಶೋಷಣೆಗೆ ಒಳಗಾದರೆ ತಕ್ಷಣ ಮಕ್ಕಳ ಸಹಾಯವಾಣಿ-1098ಗೆ ಕರೆ ಮಾಡಬಹುದಾಗಿದೆ.
ಅಲ್ಲದೆ ಯಾವುದೇ ಮಕ್ಕಳು ಓಡಿಹೋದರೆ, ಕಾಣೆಯಾದರೆ, ಕಳ್ಳ ಸಾಗಾಣಿಕೆಗೆ ಒಳಪಟ್ಟರೆ, ದೌರ್ಜನ್ಯಕ್ಕೆ ಒಳಗಾದರೆ, ಜೀತ ಪದ್ಧತಿಯಲ್ಲಿದ್ದರೆ, ಬಾಲ-ಕಿಶೋರ ಕಾರ್ಮಿಕ ಪದ್ಧತಿಯಲ್ಲಿದ್ದರೆ, ಬಾಲ್ಯ ವಿವಾಹದ ಸಿದ್ಧತೆ ಅಥವಾ ಬಾಲ್ಯವಿವಾಹ ನಡೆಸಿದ್ದಲ್ಲಿ ದೂರು ನೀಡಬಹುದು.
ಜತೆಗೆ ಭಿಕ್ಷಾಟನೆಯಲ್ಲಿದ್ದರೆ, ಬೀದಿಯಲ್ಲಿದ್ದರೆ, ನಿರಂತರ ಶಾಲೆಗೆ ಗೈರು ಹಾಜರಾದರೆ, ಯಾವುದೇ ವಿಪತ್ತಿಗೆ ಒಳಗಾದರೆ, ಪೋಷಣೆ, ರಕ್ಷಣೆಯ ಅಗತ್ಯವಿದ್ದರೆ, ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದರೆ ಸಂರಕ್ಷಣೆಗಾಗಿ ಸಹ ದೂರು ನೀಡಬಹುದಾಗಿದೆ. ಹೀಗೆ ದೂರು ನೀಡಿದವರ ಹೆಸರು ಬಹಿರಂಗವಾಗುವುದಿಲ್ಲ.
"

ಮಕ್ಕಳ ಅಭಿವೃದ್ಧಿ ಮತ್ತು ಬೆಳವಣಿಗೆಗಾಗಿ ರಕ್ಷಣೆ ನೀಡುವುದು ಪ್ರಾಥಮಿಕ ಜವಾಬ್ದಾರಿಯಾಗಿದೆ. ಪಾಲನೆ, ಪೋಷಣೆ ಮತ್ತು ರಕ್ಷಣೆ ಅಗತ್ಯ ಇರುವ ಮಕ್ಕಳಿಗೆ ಪುನರ್ವಸತಿ ಮತ್ತು ಕುಟುಂಬದೊಂದಿಗೆ ಬೆಳೆಯಲು ಅಗತ್ಯ ಕ್ರಮ ವಹಿಸಲಾಗುತ್ತಿದೆ.

"

ಸಂಕಷ್ಟಕ್ಕೆ ಒಳಗಾಗುವ 18 ವರ್ಷದೊಳಗಿರುವ ಯಾವುದೇ ಮಗು ಅಥವಾ ಮಗುವಿನ ಪರವಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ-1098ಕ್ಕೆ ಕರೆ ಮಾಡಿ ದೂರು ನೀಡಬೇಕು. ಮಗುವಿಗಾಗಿ ಮಾಡುವ ಒಂದು ಕರೆ ಮಗುವಿನ ಭವಿಷ್ಯವನ್ನು ಬದಲಾಯಿಸಬಹುದು.