ರಕ್ಷಣೆ ಮಾಡಿದ ಇಬ್ಬರು ಮಕ್ಕಳು 
ಮೈಸೂರು

ಹಾಸ್ಟೆಲ್'ನಿಂದ ಮನೆಗೆ ಕರೆದುಕೊಂಡು ಹೋಗದಿದ್ದಕ್ಕೆ ಮನನೊಂದು ರೈಲೇರಿದ್ದ ಇಬ್ಬರು ಮಕ್ಕಳ ರಕ್ಷಣೆ

ಪ್ರಮುಖ ಮುಖ್ಯಾಂಶಗಳು

  • ಬೇಸರಗೊಂಡು ರೈಲಿನಲ್ಲಿ ಟಿಕೆಟ್ ಇಲ್ಲದೆ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಇಬ್ಬರು ಮಕ್ಕಳು
  • ಶಾಲೆಯ ಕಾಂಪೌಂಡ್ ಹಾರಿ ಹೊರಬಂದು ಹುಬ್ಬಳ್ಳಿಯ ಕಡೆಗೆ ಹೋಗುವ ಉದ್ದೇಶದಿಂದ ರೈಲು ಹತ್ತಿದ್ದರು
ಮೈಸೂರು: ಹಾಸ್ಟೆಲ್‌ನಿಂದ ಪಾಲಕರು ಮನೆಗೆ ಕರೆದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ರೈಲಿನಲ್ಲಿ ಟಿಕೆಟ್ ಇಲ್ಲದೆ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಇಬ್ಬರು ಮಕ್ಕಳನ್ನು ನನ್ಹೆ ಫರಿಶ್ತೆ ಯೋಜನೆಯ ಆರ್‌ಪಿಎಫ್ ಅರಸೀಕೆರೆ ತಂಡ ರಕ್ಷಿಸಿದೆ.
ಯಶವಂತಪುರ-ವಾಸ್ಕೋ ರೈಲಿನ(17309) ಎಸ್-8 ಬೋಗಿಯಲ್ಲಿ  ಭಾನುವಾರ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು. ಈ ಕುರಿತು ಮೈಸೂರು ವಿಭಾಗೀಯ ಭದ್ರತಾ ನಿಯಂತ್ರಣ ಕೊಠಡಿಯಿಂದ ಮಾಹಿತಿ ಬಂದ ತಕ್ಷಣ, ಅರಸೀಕೆರೆ ಆರ್‌ಪಿಎಫ್ ಉಪನಿರೀಕ್ಷಕರು, ಸಿಬ್ಬಂದಿ ರೈಲಿಗೆ ತೆರಳಿ ಮಕ್ಕಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆದರು.
11 ಹಾಗೂ 12 ವರ್ಷದ ಈ ಮಕ್ಕಳು ತುಮಕೂರಿನ ಶಾಲೆಯೊಂದರ ವಸತಿ ನಿಲಯದಲ್ಲಿದ್ದು ವ್ಯಾಸಂಗ ಮಾಡುತ್ತಿದ್ದರು. ಮೊಹರಂ ರಜೆ ಹಿನ್ನೆಲೆಯಲ್ಲಿ ತಮ್ಮ ಸಹಪಾಠಿಗಳು ಮನೆಗೆ ತೆರಳಿದ್ದರೂ ಇವರ ಪಾಲಕರು ಕರೆದುಕೊಂಡು ಹೋಗಲು ಬಂದಿರಲಿಲ್ಲ. ಇದರಿಂದ ಬೇಸರಗೊಂಡ ಮಕ್ಕಳು, ಶಾಲೆಯ ಕಾಂಪೌಂಡ್ ಹಾರಿ ಹೊರಬಂದು ಹುಬ್ಬಳ್ಳಿಯ ಕಡೆಗೆ ಹೋಗುವ ಉದ್ದೇಶದಿಂದ ರೈಲು ಹತ್ತಿದ್ದಾರೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.
ಕಾನೂನು ಮತ್ತು ರಕ್ಷಣಾತ್ಮಕ ಕ್ರಮ ಅನುಸರಿಸಿ, ಮಕ್ಕಳನ್ನು ಅರಸೀಕೆರೆ ಘಟಕದ ಮೂಲಕ ಹಾಸನ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ‘ಮಕ್ಕಳ ಸಹಾಯವಾಣಿ’ ಅಧಿಕಾರಿಗಳಿಗೆ ಸೂಕ್ತ ದಾಖಲೆ ಹಾಗೂ ರೈಲ್ವೆ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಿಸಲಾಯಿತು. ಮುಂದಿನ ಆರೈಕೆ, ಸಮಾಲೋಚನೆ ಹಾಗೂ ಪುನರ್ವಸತಿ ಕ್ರಮಗಳನ್ನು ಸಂಬಂಧಿತ ಇಲಾಖೆ ಕೈಗೊಳ್ಳಲಿದೆ.
ಆರ್‌ಪಿಎಫ್ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಮಕ್ಕಳು ಸುರಕ್ಷಿತವಾಗಿದ್ದು, ಯಾವುದೇ ಅನಾಹುತ ಅಥವಾ ಅಪಾಯ ಸಂಭವಿಸುವುದನ್ನು ತಡೆಯಲು ಸಾಧ್ಯವಾಯಿತು. ಪ್ರಯಾಣಿಕರ ಸುರಕ್ಷತೆ, ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಮೈಸೂರು ವಿಭಾಗದ ಆರ್‌ಪಿಎಫ್ ಕಾರ್ಯನಿರ್ವಹಿಸುತ್ತಿದೆ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗೀರೀಶ್ ಧರ್ಮರಾಜ್ ಕಲಗೋಂಡ ತಿಳಿಸಿದ್ದಾರೆ.