ಸರಗೂರು ತಾಲೂಕಿನ ಇಟ್ನ ಗ್ರಾಮದಿಂದ ಅಮ್ಮನವರ ಉತ್ಸವ ಮೂರ್ತಿ ಚಿಕ್ಕದೇವಮ್ಮ ಬೆಟ್ಟಕ್ಕೆ ತೆರಳಿತು. 
ಮೈಸೂರು

ಚಿಕ್ಕದೇವಮ್ಮ ಜಾತ್ರಾ ಮಹೋತ್ಸವ ಸಂಪನ್ನ

ಪ್ರಮುಖ ಮುಖ್ಯಾಂಶಗಳು

  • ಹಾಲುಗಡು, ಇಟ್ನ ಗ್ರಾಮ
  • ಮೂರು ದಿನಗಳ ಕಾಲ
ಸರಗೂರು: ತಾಲೂಕಿನ ಹಾಲುಗಡು, ಇಟ್ನ ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆದ ಚಿಕ್ಕದೇವಮ್ಮನವರ ಜಾತ್ರಾ ಮಹೋತ್ಸವ ಶನಿವಾರ ಸಂಪನ್ನಗೊಂಡಿತು.
ಚಂದ್ರಮಾನ ಯುಗಾದಿ ಹಬ್ಬದ ಪ್ರಯುಕ್ತ ಗುರುವಾರ ಚಿಕ್ಕದೇವಮ್ಮನ ಬೆಟ್ಟದಿಂದ ಅಮ್ಮನವರ ಉತ್ಸವಮೂರ್ತಿಯನ್ನು ತಂದು ಹಾಲುಗಡುವಿನ ಜಪ್ಪದಕಟ್ಟೆಯಲ್ಲಿ ಪೂಜಿಸಲಾಯಿತು. ನಂತರ ಭಕ್ತರು ಜಪ್ಪದಕಟ್ಟೆಯಲ್ಲಿನ ಚಿಕ್ಕದೇವಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ, ತಾಯಿ ದರ್ಶನ ಪಡೆದು ಹರಕೆ ತೀರಿಸಿದರು. ನಂತರ ಅಮ್ಮನವರನ್ನು ಗೂಳಿ ಹಾಗೂ ಹಾಲಿನ ಮಂಟಪದಲ್ಲಿ ಪೂಜಿಸಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ಹಾಲುಗಡುವಿನಿಂದ ಇಟ್ನ ಗ್ರಾಮಕ್ಕೆ ಕರೆತಂದು ಮಠದ ಹೊಲದ ಮಂಟಪದಲ್ಲಿ ಪೂಜಿಸಲಾಯಿತು. ನಂತರ ಚಿಕ್ಕದೇವಮ್ಮನವರನ್ನು ಕುದುರೆ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಯಿತು.
ಇದಕ್ಕೂ ಮುನ್ನ ಕಪಿಲಾ ನದಿಯಲ್ಲಿ ಚಿಕ್ಕದೇವಮ್ಮನವರಿಗೆ ಕಪಿಲ ನದಿಯಲ್ಲಿ ತೀರ್ಥ ಉತ್ಸವ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನ ನೆರವೇರಿಸಲಾಯಿತು. ಕಪಿಲಾ ನದಿ ಸಮೀಪ ಅನ್ನ ಸಂತರ್ಪಣೆ ಮಾಡಲಾಯಿತು. ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಜೆಡಿಎಸ್ ಮುಖಂಡ ಕೆ.ಎಂ.ಕೃಷ್ಣನಾಯಕ, ಸರ್ವೇ ರಾಜಣ್ಣ ಟ್ರಸ್ಟ್ ಅಧ್ಯಕ್ಷ ಎಸ್.ವಿ.ವೆಂಕಟೇಶ್, ಮಮತಾ ವೆಂಕಟೇಶ್, ಉದ್ಯಮಿ ಎನ್.ಬೆಳತೂರು ನಿಂಗರಾಜು ಇತರರಿದ್ದರು.