ಮುಖ್ಯಮಂತ್ರಿ ಸಿದ್ದರಾಮಯ್ಯ  
ಮೈಸೂರು

ಸಿಎಂ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಮಾಡಲಿ

ಅವಿನಾಶ್ ಜೈನಹಳ್ಳಿ
ಮೈಸೂರು: ರಾಜ್ಯ ಬಜೆಟ್‌ನಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳು, ಸೊಸೈಟಿ ಮತ್ತಿತರ ಸಹಕಾರ ಸಂಸ್ಥೆಗಳಲ್ಲಿನ ರಾಜ್ಯದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಬಾರಿ ರೈತನಾಯಕ ಪ್ರೊ.ನಂಜುಂಡಸ್ವಾಮಿ ಅವರ ಶಿಷ್ಯ. ನಾನೂ ರೈತಸಂಘದಲ್ಲಿ ಇದ್ದೆ. ನನಗೂ ರೈತರ ಕಷ್ಟ ಗೊತ್ತು ಎಂದು ಅನೇಕ ಬಾರಿ ಹೇಳಿದ್ದಾರೆ. ಹಾಗಾಗಿ ಈ ಸಾಲಿನ ಬಜೆಟ್‌ನಲ್ಲಿ ರಾಜ್ಯದ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವ ಮೂಲಕ ತಾವು ನಿಜವಾಗಿಯೂ ರೈತಪರ ಎಂದು ಸಾಬೀತು ಮಾಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ಒಂದು ಕಡೆ ಅತಿವೃಷ್ಟಿ, ಮತ್ತೊಂದು ಕಡೆ ಅನಾವೃಷ್ಟಿ, ಜತೆಗೆ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ, ರೈತರು ಸಾಕಷ್ಟು ಸಂಕಷ್ಟದಲ್ಲಿ ಇದ್ದು, ಸರ್ಕಾರ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದರಿಂದ ರೈತರು ಚೇತರಿಸಿಕೊಳ್ಳಲಿದ್ದಾರೆ. ಜತೆಗೆ ಹೊಸ ಸಾಲಗಳಿಗೆ ಶೂನ್ಯ ಬಡ್ಡಿದರವನ್ನು ಜಾರಿಗೊಳಿಸಬೇಕು. ಇದರಿಂದ ರೈತರ ಆತ್ಮಹತ್ಯೆಗಳನ್ನು ತಡೆಯುವಂತಾಗುತ್ತದೆ. ಮತ್ತು ಆರ್ಥಿಕ ಸ್ಥಿರತೆ ಸಾಧ್ಯವಾಗುತ್ತದೆ ಎಂದರು.
ಲಕ್ಷಾಂತರ ಬಡ ರೈತರು ನಮೂನೆ 50, 53 ಮತ್ತು 57ರ ಅಡಿಯಲ್ಲಿ ಬಗರ್ ಹುಕುಂಭೂಮಿ ಸಕ್ರಮಗೊಳಿಸಲು ಅರ್ಜಿ ಸಲ್ಲಿಸಿ ವರ್ಷಗಳಿಂದ ಕಾಯುತ್ತಿದ್ದಾರೆ. ಅನೇಕ ವರ್ಷಗಳಿಂದ ಅರ್ಹರಿಗೆ ನ್ಯಾಯ ದೊರಕದೆ ಇರುವುದರಿಂದ, ಮುಂದಿನ ಬಜೆಟ್‌ನಲ್ಲಿ ಈ ಅರ್ಜಿಗಳ ಶೀಘ್ರ ವಿಲೇವಾರಿ, ಅರ್ಹ ರೈತರಿಗೆ ಭೂ ಹಕ್ಕು ಮಂಜೂರಾತಿ ಮತ್ತು ಬಗರ್‌ಹುಕುಂ ಡಿಜಿಟಲ್ ಪ್ರಕ್ರಿಯೆಗೆ ವಿಶೇಷ ನಿಧಿ ಮತ್ತು ಕಟ್ಟುನಿಟ್ಟಿನ ನಿರ್ದೇಶನಗಳನ್ನು ಒದಗಿಸಬೇಕು. ಇದರಿಂದ ರಾಜ್ಯದ ರೈತರ ಜೀವನೋಪಾಯ ಸುಧಾರಿಸಿ, ರಾಜ್ಯದ ಕೃಷಿ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಸಂಘದ ಸಂಚಾಲಕ ಕೆಆರ್‌ಎಸ್ ರಾಮೇಗೌಡ, ಕಾರ್ಯದರ್ಶಿ ಡಾ.ಅರುಣ್ ಕುಮಾರ್, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಶಿವಪ್ರಸಾದ್, ಉಪಾಧ್ಯಕ್ಷ ತಮ್ಮಣ್ಣೇಗೌಡ, ಪ್ರಧಾನ ಕಾರ್ಯದರ್ಶಿ ಯೋಗೇಶ್, ರಾಜೇಗೌಡ ಇದ್ದರು.