ಶ್ರೀರಂಗಪಟ್ಟಣ-ನಾಗನಹಳ್ಳಿ ಸಮೀಪ ಪಾಲಹಳ್ಳಿ ಬಳಿ ನಿಂತಿರುವ ಚೆನ್ನೆ-ಮೈಸೂರು ವಾರದ ಎಕ್ಸ್‌ಪ್ರೆಸ್ ರೈಲು.
- ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ
- ಇಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ಶ್ರೀರಂಗಪಟ್ಟಣ-ನಾಗನಹಳ್ಳಿ ಸಮೀಪ ಪಾಲಹಳ್ಳಿ ಬಳಿ ನಿಲುಗಡೆ
ಮೈಸೂರು: ಇಂಜಿನ್‌ನಲ್ಲಿ ಲೋಕೋ ವಿಫಲವಾದ ಕಾರಣ ಚೆನ್ನೈ-ಮೈಸೂರು ವಾರದ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ- 22682) ಗಾಡಿಯು ನಾಗನಹಳ್ಳಿ ಬಳಿ ನಿಂತು ಮೈಸೂರಿಗೆ ತಲುಪಲು ಎರಡು ಗಂಟೆ ವಿಳಂಬವಾಯಿತು.
ಚೆನ್ನೆ ರೈಲ್ವೆ ನಿಲ್ದಾಣದಿಂದ ಗುರುವಾರ ರಾತ್ರಿ 11.30ಕ್ಕೆ ಹೊರಟ ರೈಲು, ಶುಕ್ರವಾರ ಬೆಳಗ್ಗೆ 7.45 ಗಂಟೆಗೆ ಮೈಸೂರು ನಿಲ್ದಾಣ ತಲುಪಬೇಕಿತ್ತು. ಇಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ಶ್ರೀರಂಗಪಟ್ಟಣ-ನಾಗನಹಳ್ಳಿ ಸಮೀಪ ಪಾಲಹಳ್ಳಿ ಬಳಿ ಬೆಳಗ್ಗೆ 7.30 ಗಂಟೆಗೆ ರೈಲು ನಿಂತಿತು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ರೈಲ್ವೆ ಇಲಾಖೆ ಇಂಜಿನಿಯರಿಗ್ ವಿಭಾಗದ ತಾಂತ್ರಿಕ ಸಿಬ್ಬಂದಿ ಲೋಕೋ ವಿಫಲವಾಗಿರುವುದನ್ನು ಪತ್ತೆ ಮಾಡಿದರು. ಬಳಿಕ ಅದನ್ನು ತೆಗೆದು ವಿಪತ್ತು ನಿರ್ವಹಣೆಗೆ ಬಳಸುವ ರಿಲೀಫ್ ಲೋಕೋ ಅಳವಡಿಸಿ ರೈಲುಗಾಡಿಯನ್ನು ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಮೈಸೂರು ರೈಲ್ವೆ ನಿಲ್ದಾಣಕ್ಕೆ ಕರೆತರಲಾಯಿತು.
ಪರಿಣಾಮ ರೈಲಿನಲ್ಲಿದ್ದ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಸುಮಾರು ಎರಡು ತಾಸು ತಿಂಡಿ-ಕಾಫಿ ಇಲ್ಲದೇ ಪರದಾಡುವಂತಾಯಿತು. ಕಚೇರಿಗೆ ತೆರಳುವವರು, ತುರ್ತು ಕೆಲಸಗಳಿರುವ ಪ್ರಯಾಣಿಕರಿಗೆ ರೈಲುಗಾಡಿ ತಡವಾದ್ದರಿಂದ ತೀವ್ರ ತೊಂದರೆ ಉಂಟಾಯಿತು. ಅಲ್ಲದೇ ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಇನ್ನಿತರ ರೈಲುಗಳಿಗೂ ಇದರಿಂದ ಅಡಚಣೆಯಾಯಿತು.