ಯಾದವಗಿರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಎಸ್.ಆರ್.ನಾರಾಯಣರಾವ್, ಮಹಾಮೇಧಾನಂದಾಜಿ, ಭಾರತಿ ಜಿ.ಭಟ್, ಎಚ್.ವಿ.ರಾಜೀವ್, ಬಿ.ಮಹದೇವಸ್ವಾಮಿ ಇನ್ನಿತರರಿದ್ದರು.
- ಸಾಲ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳು ಆಗದಂತೆ ನೋಡಿಕೊಳ್ಳಿ
- ಮೊದಲು ಸಾಲ ನೀಡಿ, ನಂತರ ಮಂಜೂರಾತಿ ಪಡೆಯುವುದು ನಿಯಮ ಉಲ್ಲಂಘನೆ
- ಲೆಕ್ಕ ವ್ಯವಹಾರದ ಅರಿವು
ಮೈಸೂರು: ಸಾಲಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಯ ಪೂರ್ವಾಪರ ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಆತುರದಲ್ಲಿ ಸಾಲ ಕೊಟ್ಟು ಸಹಕಾರ ಬ್ಯಾಂಕ್‌ಗಳನ್ನು ಸಂಕಷ್ಟಕ್ಕೆ ಸಿಲುಕಿಸಬಾರದು ಎಂದು ಮೈಸೂರು, ಮಂಡ್ಯ ಹಾಗೂ ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಎಸ್.ಆರ್.ನಾರಾಯಣರಾವ್ ಎಚ್ಚರಿಸಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತದ ವತಿಯಿಂದ ಯಾದವಗಿರಿಯ ಶ್ರೀ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ಸಹಕಾರಿ ಕ್ಷೇತ್ರದವರಿಗೆ ಶುಕ್ರವಾರ ಆಯೋಜಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಲ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳು ಆಗದಂತೆ ನೋಡಿಕೊಳ್ಳಬೇಕು. ಯಾವ ಕಾರಣಕ್ಕೆ ಸಾಲ ಬೇಕಾಗಿದೆ, ಆ ವ್ಯಕ್ತಿಯ ಹಿನ್ನೆಲೆ ಏನು ಎಂಬುದನ್ನು ಮೊದಲು ನೋಡಬೇಕು. ‘ಬೇಕಾಗಿರುವ ವ್ಯಕ್ತಿ’ ಎಂಬ ಕಾರಣಕ್ಕೆ ಮೊದಲು ಸಾಲ ನೀಡಿ, ನಂತರ ಮಂಜೂರಾತಿ ಪಡೆಯುವುದು ನಿಯಮ ಉಲ್ಲಂಘನೆಯಾಗುತ್ತದೆ. ಈ ರೀತಿ ಕೆಟ್ಟ ಪ್ರವೃತ್ತಿಗಳೇ ಸಹಕಾರ ಬ್ಯಾಂಕ್‌ಗಳನ್ನು ಮುಳುಗಿಸಿಬಿಡುತ್ತವೆ ಎಂದರು.
ಸಾಲದ ಅಗತ್ಯ ಗಮನಿಸಿ ತುರ್ತು ಸಭೆ ನಡೆಸಿ, ದಾಖಲೆಗಳು, ಅರ್ಜಿಗಳ ನೋಡಿದ ಮೇಲೆ ಸಾಲಕ್ಕೆ ಮಂಜೂರಾತಿ ನೀಡಬೇಕು. ನಿಯಮಾವಳಿ ಪ್ರಕಾರ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಳಿಸಬೇಕು. ಯಾವುದನ್ನೂ ಕೈಬಿಡಬಾರದು. ಇದರಿಂದ ಸಹಕಾರ ಬ್ಯಾಂಕ್‌ನಲ್ಲಿ ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದರು.
ಸಾಫ್ಟ್‌ವೇರ್ ಬಳಕೆಯಿಂದ ಸಹಕಾರಿ ಬ್ಯಾಂಕಿಂಗ್ ವಹಿವಾಟು ಸುಲಭವಾಗಿದೆ ಎಂಬುದು ನಿಜ. ಲೆಕ್ಕ ವ್ಯವಹಾರದ ಮೂಲ ವಿಷಯವನ್ನು ಸಿಬ್ಬಂದಿ ಕರಗತ ಮಾಡಿಕೊಳ್ಳಬೇಕು. ಹಿಂದಿನ ಸಿಬ್ಬಂದಿ ಕೈಬರವಣಿಗೆ ಮೂಲಕ ಎಲ್ಲ ವಹಿವಾಟುಗಳನ್ನು ಕಡತದಲ್ಲಿ ನಮೂದಿಸುತ್ತಿದ್ದರು.
ಇದರಿಂದಾಗಿ ಅವರಿಗೆ ಲೆಕ್ಕ ವ್ಯವಹಾರಗಳ ಪೂರ್ಣ ಮಾಹಿತಿ ಇರುತ್ತಿತ್ತು. ಆದರೀಗ ಹಳೇ ವ್ಯವಸ್ಥೆ ಇಲ್ಲ. ಜತೆಗೆ, ಈಗಿನವರಿಗೆ ಆಳ ಜ್ಞಾನ, ಅರಿವು ಇಲ್ಲವಾಗಿದೆ. ಎಲ್ಲ ತಂತ್ರಜ್ಞಾನದ ಮೇಲೆ ಅವಲಂಬಿತರಾಗುವುದು ಸರಿಯಲ್ಲ. ಅದು ಕೈಕೊಟ್ಟಾಗ ದೊಡ್ಡ ಸಮಸ್ಯೆಗಳು ಸೃಷ್ಟಿಯಾಗುತ್ತದೆ. ಆದ್ದರಿಂದ ಲೆಕ್ಕ ವ್ಯವಹಾರದ ಕುರಿತು ತಿಳಿದುಕೊಳ್ಳಬೇಕು ಎಂದರು.
ಸಹಕಾರಿ ಬ್ಯಾಂಕ್‌ಗಳ ಕಡತ ವಿಲೇವಾರಿ ಕುರಿತು ಸಿಬ್ಬಂದಿಗೆ ಕ್ಲಸ್ಟರ್ ಮಟ್ಟದಲ್ಲಿ ಪ್ರಾಯೋಗಿಕ ತರಬೇತಿ ನೀಡಬೇಕಾಗಿದೆ. ಈ ವಿಷಯದಲ್ಲೂ ಅನೇಕ ನ್ಯೂನತೆಗಳು ನುಸುಳುತ್ತಿವೆ. ಇದು ಆಗಬಾರದು. ಅದಕ್ಕಾಗಿ ತರಬೇತಿ ಅಗತ್ಯವಾಗಿದೆ ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತದ ನಿರ್ದೇಶಕಿ ಭಾರತಿ ಜಿ.ಭಟ್ ಮಾತನಾಡಿ, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳು ವಿಫಲದತ್ತ ಸಾಗಿವೆ. ಸಹಕಾರ ಕ್ಷೇತ್ರವೇ ಮುಂದಿನ ಭವಿಷ್ಯ. ಇದು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.
ಸಹಕಾರ ಬ್ಯಾಂಕ್‌ಗಳಿಗೆ ಮಾನವೀಯತೆ, ಸೌಹಾರ್ದತೆಯ ಸ್ಪರ್ಶವಿದೆ. ಸಾಮಾಜಿಕ ಕಳಕಳಿಯನ್ನೂ ಹೊಂದಿದೆ. ಕರೊನಾ ಕಾಲದಲ್ಲಿ ಅನೇಕ ನೆರವು ನೀಡಿರುವುದು ಇದಕ್ಕೆ ಸಾಕ್ಷಿ. ಸಹಕಾರ ಬ್ಯಾಂಕ್‌ಗಳ ಸಿಬ್ಬಂದಿ, ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಆದ್ದರಿಂದ ವ್ಯವಹಾರಿಕ ಜ್ಞಾನ, ನೈತಿಕತೆ ಮತ್ತು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಶ್ರೀರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಸಂಚಾಲಕ ಮಹಾಮೇಧಾನಂದಾಜಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತದ ಶಿಕ್ಷಣ ಸಲಹಾ ಸಮಿತಿ ಸದಸ್ಯ ಎಚ್.ವಿ.ರಾಜೀವ್, ವೃತ್ತಿಪರ ನಿರ್ದೇಶಕ ಬಿ.ಮಹದೇವಸ್ವಾಮಿ, ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ್, ಸೌಹಾರ್ದ ಅಭಿವೃದ್ಧಿ ಅಧಿಕಾರಿ ಆರ್.ಎಸ್.ಸುರೇಶ್ ಇನ್ನಿತರರಿದ್ದರು.