ಬನ್ನೂರಿನ ಇತಿಹಾಸ ಪ್ರಸಿದ್ದ ಹೇಮಾದ್ರಾಂಬ ದೇವಿಯ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಸಾಂಪ್ರಾದಾಯಿಕ ಆಚರಣೆಯೊಂದಿಗೆ ಹೇಮಾದ್ರಂಭ ದೇವಿಯ ರಥೋತ್ಸವ ಸಂಪನ್ನ. 
ಮೈಸೂರು

ಹೇಮಾದ್ರಾಂಬ ದೇವಿಯ ರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • ಸಾಂಪ್ರದಾಯಿಕ ಆಚರಣೆಯೊಂದಿಗೆ ವಿಜೃಂಭಣೆಯಿಂದ ಸಂಪನ್ನ
ಬನ್ನೂರು: ತಲಕಾಡು ಗಂಗರಸರ ನೆಲೆಬೀಡಾಗಿದ್ದು, ವಹ್ನಿಪುರವೆಂದೇ ಪ್ರಖ್ಯಾತಗೊಂಡು ವ್ಯಾಸರಾಯರಿಂದ ಪೂಜಿಸಲ್ಪಟ್ಟ ಇತಿಹಾಸ ಪ್ರಸಿದ್ಧ ಶ್ರೀ ಹೇಮಾದ್ರಾಂಬ ದೇವಿಯ ರಥೋತ್ಸವ ಭಾನುವಾರ ಸಾಂಪ್ರದಾಯಿಕ ಆಚರಣೆಯೊಂದಿಗೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಮುಂಜಾನೆಯಿಂದಲೇ ದೇವಾಲಯದಲ್ಲಿ ವಿವಿಧ ಹೋಮ ಹವನಗಳು ನಡೆದು ಕಳಶ ಪೂಜೆಯು ಪೂರ್ಣಗೊಂಡಿತು. ನಂತರ ರಥ ಸಾಗುವ ಬೀದಿಗಳನ್ನು ಪರಿಶುದ್ಧಗೊಳಿಸಿ ಹೇಮಾದ್ರಂಭ ದೇವಿಯನ್ನು ದೇವಾಲಯದಿಂದ ಹೊರತಂದು ರಥದ ಸುತ್ತ ಪ್ರದಕ್ಷಿಣೆ ಮಾಡಿ, ಬಣ್ಣ ಬಣ್ಣದ ಪತಾಕೆಗಳು, ವಿವಿಧ ಬಾವುಟಗಳು, ವಿವಿಧ ಹೂಗಳಿಂದ ಅಲಂಕಾರಗೊಂಡಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರ ಹಷೋದ್ಘಾರ ಹಾಗೂ ಹೇಮಾದ್ರಾಂಬ ಚೌಕ ಎನ್ನುವ ಕೂಗಿನ ಮೂಲಕ ಡೋಲು ನಗಾರಿ, ಮಂಗಳಕರ ವಾಧ್ಯದ ಮೆರವಣಿಗೆಯಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು.
ರಥವು ಸಾಗುವ ತೇರಿನ ಬೀದಿ ಹಾಗೂ ದೊಡ್ಡಂಗಡಿ ಬೀದಿಗಳಲ್ಲಿ ಆಕರ್ಷಕ ರಂಗೋಲಿ ಮೂಲಕ ರಥಕ್ಕೆ ಸ್ವಾಗತಕೋರಲಾಯಿತು. ನವ ದಂಪತಿಗಳು ಹಣ್ಣು ದವನ ಎಸೆದು ಪುನೀತರಾದರು. ಯುವಕರ ನೃತ್ಯ ಸಾರ್ವಜನಿಕರನ್ನು ಸೆಳೆದರೆ, ಪೂಜಾ ಕುಣಿತ ಹಾಗೂ ವೀರಗಾಸೆ ಕುಣಿತ ಆಕರ್ಷಣೀಯವಾಗಿತ್ತು. ಅಲ್ಲಲ್ಲಿ ಮಜ್ಜಿಗೆ ಪಾನಕ ನಿಡುವ ವ್ಯವಸ್ಥೆಯನ್ನು ಭಕ್ತರು ಹಮ್ಮಿಕೊಂಡಿದ್ದರು. ದೇವಾಲಯದ ಬಳಿಯಲ್ಲಿಯೂ ಪ್ರಸಾದ ವಿತರಣೆ ನಡೆಯಿತು.