ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊಠಡಿಗಳು ಕರ್ತವ್ಯದ ವೇಳೆಯಲ್ಲಿಯೇ ಬೀಗ ಹಾಕಿರುವುದು.  
ಮೈಸೂರು

ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಪಿರಿಯಾಪಟ್ಟಣ ತಾಲೂಕಿನ ಜನರಿಗೆ ಸಮರ್ಪಕವಾಗಿ ಸಿಗದ ಸೇವೆ
  • ದುಸ್ಥಿತಿಯಲ್ಲಿ ಎಕ್ಸರೇ ಯಂತ್ರ, ಔಷಧಗಳ ಕೊರತೆ
ಪಿರಿಯಾಪಟ್ಟಣ: ಸಮರ್ಪಕವಾಗಿ ತಜ್ಞ ವೈದ್ಯರು ಲಭ್ಯ ಇಲ್ಲ, ಔಷಧಗಳ ಕೊರತೆ ಮತ್ತು ಯಂತ್ರೋಪಕರಣಗಳು ಬಳಕೆ ಆಗದೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಯ ತಾಣವಾಗಿದೆ.
100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ಇದಾಗಿದ್ದು 15ಕ್ಕೂ ಹೆಚ್ಚು ತಜ್ಞ ವೈದ್ಯರ ಅಗತ್ಯವಿದೆ. ನಿತ್ಯ 500 ರಿಂದ 600 ರೋಗಿಗಳು ತಪಾಸಣೆಗೆ ಆಸ್ಪತ್ರೆಗೆ ಬರುತ್ತಾರೆ. ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೂ ಆಸ್ಪತ್ರೆಯಲ್ಲಿ ಲಭ್ಯವಿರಬೇಕಾದ ತಜ್ಞ ವೈದ್ಯರು ಬೆಳಗ್ಗೆ 10 ಗಂಟೆ ಬಳಿಕವೇ ಬರುತ್ತಾರೆ. ಮಧ್ಯಾಹ್ನ 3.30ರ ನಂತರ ಆಸ್ಪತ್ರೆಯಲ್ಲಿ ಸಿಗುವುದೇ ಇಲ್ಲ. ಇದರ ನಡುವೆ ನಿತ್ಯ ಕನಿಷ್ಠ ಮೂರರಿಂದ ನಾಲ್ಕು ವೈದ್ಯರು ವಿವಿಧ ಕಾರಣಗಳನ್ನು ನೀಡಿ ಗೈರಾಗಿರುತ್ತಾರೆ. ಕೆಲವು ವೈದ್ಯರು ಶಸ್ತ್ರಚಿಕಿತ್ಸೆಯ ಕಾರಣ ನೀಡಿ ಆಪರೇಷನ್ ಥಿಯೇಟರ್‌ಗಳಿಗೆ ಹೋದರೆ ಸಂಜೆವರೆಗೂ ಕೊಠಡಿಗಳಿಗೆ ಬರುವುದೇ ಇಲ್ಲ ಎಂಬುದು ಸಾರ್ವಜನಿಕರ ಅಳಲಾಗಿದೆ.
ಆಸ್ಪತ್ರೆಗೆ ಬರುವ ಸಾರ್ವಜನಿಕರು ಕಡೆಗೂ ಹರಸಾಹಸ ಮಾಡಿ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದು ಔಷಧ ಪಡೆಯಲು ಕೌಂಟರ್‌ಗೆ ತೆರಳಿದರೆ ವೈದ್ಯರು ಬರೆಯುವ ನಾಲ್ಕು ಔಷಧಗಳಲ್ಲಿ ಅಲ್ಲಿ ಒಂದೆರಡು ಔಷಧಗಳು ಮಾತ್ರ ಲಭ್ಯವಿರುತ್ತವೆ. ಇನ್ನುಳಿದ ಔಷಧಗಳನ್ನು ಪಡೆಯಲು ಮೆಡಿಕಲ್ ಸ್ಟೋರ್‌ಗಳಿಗೆ ಹೋಗುವ ಅನಿವಾರ್ಯ ಪರಿಸ್ಥಿತಿ ಬಂದಿದೆ.
ಕೆಟ್ಟು ನಿಂತಿರುವ ಎಕ್ಸರೇ ಮಷಿನ್
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬರುವವರು ಬಡವರು ಹಾಗೂ ಮಧ್ಯಮ ವರ್ಗದ ಜನರೇ ಅಧಿಕ. ಬಹುತೇಕ ಉಚಿತವಾಗಿ ದೊರೆಯುತ್ತದೆ ಎಂಬ ವಿಶ್ವಾಸದಲ್ಲಿ ಇಲ್ಲಿಗೆ ಬಂದರೆ ನಾಲ್ಕು ತಿಂಗಳಿಂದ ಎಕ್ಸರೇ ಮಷಿನ್ ಕೆಟ್ಟು ನಿಂತಿದ್ದರೂ ಇದುವರೆಗೂ ದುರಸ್ತಿಯಾಗದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೈ, ಕಾಲು, ಮೂಳೆ ಮುರಿತ, ಸ್ನಾಯು ಸೆಳೆತ ಸೇರಿದಂತೆ ಪ್ರಮುಖ ಸಮಸ್ಯೆಗಳಿಗೆ ಎಕ್ಸರೇ ಅಗತ್ಯವಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇವಲ 50 ರೂ.ಗಳಿಗೆ ಎಕ್ಸರೇ ಲಭ್ಯವಿದ್ದರೆ, ಖಾಸಗಿ ಸೆಂಟರ್‌ಗಳಲ್ಲಿ 500-600 ರೂ. ನೀಡಲೇಬೇಕು. ನೋವಿನಿಂದ ನರಳುತ್ತ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಚಿತ ಚಿಕಿತ್ಸೆಯೂ ಲಭ್ಯವಿಲ್ಲದೆ ಖಾಸಗಿ ಕೇಂದ್ರಗಳಿಗೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿಯೂ ಇದೆ.
ಅಲ್ಟ್ರಾ ಸ್ಕ್ಯಾನಿಂಗ್ ಹಳೆಯದು
ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗ ಇರುವ ಅಲ್ಟ್ರಾ ಸ್ಕ್ಯಾನಿಂಗ್ ಮಷಿನ್ ತುಂಬ ಹಳೆಯದಾಗಿದೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಇಲ್ಲದ ಕಾರಣ ಈ ಆಸ್ಪತ್ರೆಗೆ ಮಂಜೂರಾಗಿದ್ದ ಅಲ್ಟ್ರಾ ಸ್ಕ್ಯಾನಿಂಗ್ ಮಷಿನ್‌ನನ್ನು ಮೈಸೂರಿನ ಆಸ್ಪತ್ರೆಯೊಂದಕ್ಕೆ ನೀಡಲಾಗಿತ್ತು. ಬಳಿಕ ಅದೇ ಮಷಿನ್‌ನನ್ನು ಈ ಆಸ್ಪತ್ರೆಗೆ ತರಲಾಗಿದ್ದು ರೋಗಿಗಳ ತಪಾಸಣೆಯ ನಂತರ ಸ್ಕ್ಯಾನಿಂಗ್ ರಿಪೋರ್ಟ್ ನೀಡುವ ಸಂದರ್ಭದಲ್ಲಿ ಪಿಚ್ಚರ್ ರಿಪೋರ್ಟ್ ನೀಡಲು ಸಾಧ್ಯವಾಗದೆ ಕೈಯಲ್ಲಿಯೇ ಬರೆದು ಕೊಡಲಾಗುತ್ತಿದೆ. ಇದರಿಂದಾಗಿ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಹೋಗುವ ಸಂದರ್ಭದಲ್ಲಿ ಮತ್ತೊಮ್ಮೆ ಅಲ್ಟ್ರಾ ಸ್ಕ್ಯಾನಿಂಗ್ ತಪಾಸಣೆಗೆ ಒಳಪಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಇದರಿಂದಾಗಿ ತಾಲೂಕಿನ ಜನರು ತೊಂದರೆ ಅನುಭವಿಸುವಂತಾಗಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಆರೋಗ್ಯ ಇಲಾಖೆ ಮೇಲಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಕೂಡಲೇ ಗಮನ ಹರಿಸಬೇಕೆಂಬುದು ಸಾರ್ವಜನಿಕರ ಕೋರಿಕೆಯಾಗಿದೆ.
ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಕ್ಸರೇ ಮಷಿನ್ ನಾಲ್ಕೈದು ತಿಂಗಳಿನಿಂದ ದುರಸ್ತಿಯಾಗದೆ ಕೆಟ್ಟು ನಿಂತಿದೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳು ಖಾಸಗಿ ಎಕ್ಸರೇ ಕೇಂದ್ರಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಇದೆ. ಆಸ್ಪತ್ರೆಯಲ್ಲಿ ನಿಗದಿತ ಸಮಯದಲ್ಲಿ ತಜ್ಞ ವೈದ್ಯರ ಲಭ್ಯತೆ ಇಲ್ಲದಿರುವುದರಿಂದ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಸ್ವಾಮಿಗೌಡ ನಿವೃತ್ತ ಚಾಲಕ, ಕೆಎಸ್‌ಆರ್‌ಟಿಸಿ, ಪಿರಿಯಾಪಟ್ಟಣ
ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಅಲ್ಟ್ರಾ ಸ್ಕ್ಯಾನಿಂಗ್ ಮಷಿನ್ ಅನುಪಯುಕ್ತ ಸ್ಥಿತಿಯಲ್ಲಿ ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ಐವತ್ತು ರೂ.ಗೆ ಪಡೆಯಬಹುದಾದ ಚಿಕಿತ್ಸೆಯನ್ನು ಇದೀಗ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ದುಬಾರಿ ದರ ತೆರಬೇಕಾದ ಅನಿವಾರ್ಯತೆ ಇದೆ. ಕಳೆದ 8-10 ವರ್ಷಗಳಿಂದ ಹಳೆಯ ಸ್ಕ್ಯಾನಿಂಗ್ ಮಷಿನ್‌ನನ್ನೇ ತಪಾಸಣೆಗೆ ಬಳಸುತ್ತಿದ್ದು ರೋಗಿಗಳು ನಿಖರವಾದ ವರದಿ ಪಡೆಯಲು ಸಾಧ್ಯವಾಗುತ್ತಿಲ್ಲ.
ಇಮ್ತಿಯಾಜ್ ಅಹಮದ್ ಮಸೀದಿ ಬೀದಿ ನಿವಾಸಿ, ಪಿರಿಯಾಪಟ್ಟಣ
ಆಸ್ಪತ್ರೆಯಲ್ಲಿರುವ ಎಕ್ಸರೇ ಮಷಿನ್ 14 ವರ್ಷಗಳಷ್ಟು ಹಳೆಯದಾಗಿದ್ದು ದುರಸ್ತಿಪಡಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇದೆ. ಈಗ 37 ಲಕ್ಷ ರೂ.ವೆಚ್ಚದ ಡಿಜಿಟಲ್ ಎಕ್ಸರೇ ಮಷಿನ್‌ನನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಚರ್ಮರೋಗ ತಜ್ಞರನ್ನು ಹೊರತುಪಡಿಸಿ ಉಳಿದೆಲ್ಲ ತಜ್ಞ ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ, ಹೊಸ ಅಲ್ಟ್ರಾ ಸ್ಕ್ಯಾನಿಂಗ್ ಮಷಿನ್ ಅಳವಡಿಸುವಂತೆ ಇಲಾಖೆ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಡಾ.ವಿಜಯ್‌ಕುಮಾರ್ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ, ಪಿರಿಯಾಪಟ್ಟಣ