ಪಿರಿಯಾಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯ ದೇವಸ್ಥಾನದ ಹೊರನೋಟ.
- ಶ್ರೀ ಚಂದ್ರಮೌಳೀಶ್ವರ ಸ್ವಾಮಿ
- ಮೆಲ್ಲಹಳ್ಳಿ ಗೇಟ್‌ನಿಂದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗೆ ತೆರಳುವ ರಸ್ತೆ ಬದಿಗೆ
*ಆರ್ಥಿಕ, ಆರೋಗ್ಯ ಸಮಸ್ಯೆಗಿದೆ ಇಲ್ಲಿ ಮುಕ್ತಿ
*ಪಿರಿಯಾಪಟ್ಟಣದಲ್ಲಿರುವ ಭಕ್ತಿಯ ತಾಣ
ಬೇಡಿ ಬರುವವರ ಕೈ ಹಿಡಿದು ಕಾಪಾಡುವ ಮೂಲಕ ಪಿರಿಯಾಪಟ್ಟಣದ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ಭಕ್ತರ ಪಾಲಿನ ಆರಾಧ್ಯ ದೈವವಾಗಿ ನೆಲೆ ನಿಂತಿದ್ದಾನೆ.
ಪಟ್ಟಣದ ಮೆಲ್ಲಹಳ್ಳಿ ಗೇಟ್‌ನಿಂದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗೆ ತೆರಳುವ ರಸ್ತೆ ಬದಿಗೆ ಹೊಂದಿಕೊಂಡಂತಿರುವ ವಿಶಾಲವಾದ ಜಮೀನಿನಲ್ಲಿ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯ ದೇವಸ್ಥಾನವಿದೆ. ಸುಮಾರು 800 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ದೇವಾಲಯ ಇದಾಗಿದ್ದು, ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿದೆ.
ಕೌಟುಂಬಿಕ, ಆರ್ಥಿಕ, ಆರೋಗ್ಯ ಸಮಸ್ಯೆಗಳು ಎದುರಾದಾಗ ಇಲ್ಲಿಗೆ ಬಂದು ಶ್ರೀ ಚಂದ್ರಮೌಳೇಶ್ವರ ಸ್ವಾಮಿಯನ್ನು ನಂಬಿ ಬೇಡಿಕೊಂಡ ನೂರಾರು ಭಕ್ತರು ತಮ್ಮ ಸಮಸ್ಯೆಗಳಿಂದ ವಿಮುಕ್ತರಾಗಿ ಉತ್ತಮ ಜೀವನ ನಡೆಸುತ್ತಿರುವ ಉದಾಹರಣೆಗಳು ಇಲ್ಲಿ ಸಾಕಷ್ಟಿದೆ. ಸ್ವಾಮಿಯ ಆಶೀರ್ವಾದದಿಂದ ಯಶಸು ಕಂಡಿರುವ ಹಲವು ಭಕ್ತರು ತಮ್ಮ ಯಾವುದೇ ಶುಭ ಕಾರ್ಯ ಮತ್ತು ಹೊಸತುಗಳಿಗೆ ಮೊದಲ ಆಶೀರ್ವಾದವನ್ನು ಇಲ್ಲಿಂದಲೇ ಪಡೆಯುವ ವಾಡಿಕೆ ಇದೆ. ಈಶ್ವರನ ಪೂಜೆಗೆ ಅತ್ಯಂತ ಶ್ರೇಷ್ಠವಾದ ಬಿಲ್ವಪತ್ರೆ ಮರ ದೇವಾಲಯಕ್ಕೆ ಹೊಂದಿಕೊಂಡಂತೆ ತಾನಾಗಿಯೇ ಬೆಳೆದಿರುವುದು ಇಲ್ಲಿನ ವಿಶೇಷ.
ದೇವಾಲಯದ ಇತಿಹಾಸ: ದೇವಾಲಯದ ವಿನ್ಯಾಸವನ್ನು ಗಮನಿಸಿದಲ್ಲಿ ಗಂಗರು ಮತ್ತು ಚೋಳರ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿರಬಹುದು ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. 150 ಕ್ಕೂ ಹೆಚ್ಚು ವರ್ಷಗಳ ಹಿಂದೆ ಬಹುತೇಕ ಸುತ್ತಮುತ್ತ ಅರಣ್ಯ ಪ್ರದೇಶದಿಂದ ಕೂಡಿದ್ದ ಪಿರಿಯಾಪಟ್ಟಣದ ಹೊರ ಭಾಗದಲ್ಲಿರುವ ಈ ದೇವಾಲಯಕ್ಕೆ ಸಾರ್ವಜನಿಕರ ಭೇಟಿ ವಿರಳವಾಗಿತ್ತು. ಪಟ್ಟಣದ ದೊಡ್ಡ ಬೀದಿ ನಿವಾಸಿಗಳಾದ ಮುಳ್ಳೂರು ಮಲ್ಲಯ್ಯ ಕುಟುಂಬಸ್ಥರು ಈ ದೇವಸ್ಥಾನದಲ್ಲಿ ಪೂಜೆ ನಡೆಸುತ್ತಿದ್ದ ಇತಿಹಾಸವಿದ್ದು ಇದೀಗ ಕಳೆದ 75 - 80 ವರ್ಷಗಳಿಂದ ಮೂಲತಃ ಚಾಮರಾಜನಗರ ಜಿಲ್ಲೆಯ ದೇವನೂರು ಮಠದಿಂದ ಇಲ್ಲಿ ಬಂದು ನೆಲೆಸಿರುವ ಬಸವಯ್ಯ ಕುಟುಂಬಸ್ಥರು ಇಲ್ಲಿನ ಪೂಜೆ ನೆರವೇರಿಸುತ್ತಿದ್ದಾರೆ.
ದೇವಾಲಯದ ಗರ್ಭಗುಡಿಯಲ್ಲಿ ಉದ್ಭವ ಶಿವಲಿಂಗವಿದ್ದು, ಎದುರು ಬದಿಯಲ್ಲಿ ನಂದಿಯು ಶಿವನ ಕಾವಲಿಗೆ ಇರುವಂತಿದೆ. ಬೃಹತ್ ಗಾತ್ರದ ಕಲ್ಲು ಕಂಬಗಳು ಮತ್ತು ಚಪ್ಪಡಿ ಕಲ್ಲುಗಳಿಂದ ದೇವಾಲಯ ನಿರ್ಮಿಸಲಾಗಿದ್ದು ನೆಲಹಾಸು ಸಹ ಚಪ್ಪಡಿಯದ್ದೇ ಆಗಿದೆ. ಗರ್ಭಗುಡಿಯಲ್ಲಿ ನಾಲ್ಕೈದು ಜನರು ನಿಂತು ಪೂಜೆ ಸಲ್ಲಿಸಬಹುದಾದಷ್ಟು ಜಾಗವಿದ್ದರೆ ಗರ್ಭಗುಡಿಯ ಮುಂಭಾಗದ ಆವರಣದಲ್ಲಿ 10 ರಿಂದ 15 ಜನರಷ್ಟೇ ನಿಲ್ಲಲು ಅವಕಾಶವಿದೆ. ದೇವಾಲಯಕ್ಕೆ ಹೊಂದಿಕೊಂಡಂತೆ ಸುಮಾರು 8 ಎಕರೆ ವಿಶಾಲವಾದ ದೇವಸ್ಥಾನದ ಜಾಗವಿದ್ದು ಪುರೋಹಿತರಾದ ಬಸವಯ್ಯ ಕುಟುಂಬಸ್ಥರು ಇಲ್ಲಿ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಪ್ರತಿ ಸೋಮವಾರ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಅಭಿಷೇಕ ಪೂಜೆ ನಡೆಯಲಿದ್ದು ಶುಕ್ರವಾರ ವಿಶೇಷ ಪೂಜೆ ಇರುತ್ತದೆ. ನಿತ್ಯ ಬೆಳಗ್ಗೆ ಮತ್ತು ಸಂಜೆ ದೇವಾಲಯದಲ್ಲಿ ದೀಪ ಹಚ್ಚಿ ಪೂಜೆ ನೆರವೇರಿಸಲಾಗುತ್ತಿದೆ. ಹಿಂದಿನ ಕಾಲದಲ್ಲಿ ಅರಣ್ಯ ಪ್ರದೇಶದೊಳಗೆ ಈ ದೇವಾಲಯವಿದ್ದುದ್ದರಿಂದ ಕಾಡು ಬಸವೇಶ್ವರ ಸ್ವಾಮಿಯೂ ಇಲ್ಲಿ ನೆಲೆಸಿದ್ದು ಪ್ರತ್ಯೇಕ ಮಂಟಪ ನಿರ್ಮಿಸಲಾಗಿದೆ. ದೇವಾಲಯದ ಮುಂಭಾಗದ ಆವರಣದಲ್ಲಿಯೇ ಪುರೋಹಿತರ ಕುಟುಂಬಸ್ಥರು ವಾಸಿಸುತ್ತಿದ್ದು ಯಾವುದೇ ಸಂದರ್ಭದಲ್ಲಿಯೂ ಹೋಗಿ ದೇವರ ದರ್ಶನ ಮಾಡಿ ಬರಬಹುದಾಗಿದೆ.
ಹಬ್ಬ ಹರಿದಿನಗಳಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿದ್ದರೆ ಇನ್ನುಳಿದಂತೆ ಸಾಮಾನ್ಯ ದಿನಗಳಲ್ಲಿ ವಿರಳವಾಗಿರುತ್ತದೆ. ಹಲವು ವರ್ಷಗಳಿಂದ ಕಾರ್ತಿಕ ಮಾಸದ ಕಡೆಯ ಸೋಮವಾರ ಮತ್ತು ಅಮಾವಾಸ್ಯೆಯಂದು ಇಲ್ಲಿ ವರ್ಷದ ಜಾತ್ರೆ ನಡೆಯುತ್ತಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಚಂದ್ರಮೌಳೇಶ್ವರ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ತೆರಳುತ್ತಾರೆ, ಮಹಾಶಿವರಾತ್ರಿ ಹಬ್ಬದಲ್ಲಿಯೂ ನೂರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುವುದು ಸಾಮಾನ್ಯವಾಗಿದೆ. ಆ ವಿಶೇಷ ದಿನಗಳಲ್ಲಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಈ ದೇವಾಲಯದ ಜನಪ್ರಿಯತೆ ಹೆಚ್ಚುತ್ತಿದ್ದು ಮಹಿಳೆಯರು ಮಕ್ಕಳಾದಿಯಾಗಿ ಹಬ್ಬ ಹರಿದಿನ ಮತ್ತು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ಆಶೀರ್ವಾದವನ್ನು ಪಡೆದು ಕೃತಾರ್ಥರಾಗುತ್ತಿದ್ದಾರೆ.
ವರ್ಷದಿಂದ ವರ್ಷಕ್ಕೆ ತನ್ನ ಭಕ್ತರ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತಿರುವ ಚಂದ್ರಮೌಳೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಪ್ರಸ್ತುತ ಜೀರ್ಣೋದ್ಧಾರದ ಅಗತ್ಯವಿದ್ದು ಮೂಲಸೌಲಭ್ಯಗಳೊಂದಿಗೆ ದೇವಾಲಯದ ಪ್ರಾಂಗಣ ಅಭಿವೃದ್ಧಿಯಾದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಪಟ್ಟಣದ ಹೊರಭಾಗದಲ್ಲಿರುವ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ನಮ್ಮ ಪೂರ್ವಜರು ಪೂಜೆ ನೆರವೇರಿಸುತ್ತಿದ್ದರು. ಈಗ ಬಸವಯ್ಯ ಕುಟುಂಬಸ್ಥರು ದೇವಾಲಯದ ನಿರ್ವಹಣೆ ಮಾಡುತ್ತಿದ್ದು ದೇವಸ್ಥಾನಕ್ಕೆ ಸೇರಿರುವ ಸುಮಾರು ಎಂಟು ಎಕರೆ ಜಮೀನನ್ನು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ನೂರು ವರ್ಷಗಳ ಹಿಂದೆ ಈ ಪ್ರದೇಶ ಬಹುತೇಕ ಅರಣ್ಯದಿಂದ ಕೂಡಿತ್ತು. ಇದೀಗ ಸುತ್ತಮುತ್ತ ಮನೆ ಮತ್ತು ಬಡಾವಣೆಗಳು ನಿರ್ಮಾಣಗೊಳ್ಳುತ್ತಿವೆ. ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಈ ದೇವಾಲಯದ ಜೀರ್ಣೋದ್ಧಾರಕ್ಕೆ ಸರ್ಕಾರ ಕ್ರಮ ವಹಿಸಬೇಕಿದೆ.
ಮಲ್ಲ ಶೆಟ್ರು ದೊಡ್ಡ ಬೀದಿ ನಿವಾಸಿ, ಪಿರಿಯಾಪಟ್ಟಣ
ಸರಿಸುಮಾರು 800 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಚಂದ್ರಮೌಳೀಶ್ವರ ಸ್ವಾಮಿಯ ದೇವಾಲಯಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಸ್ವಾಮಿಯ ಸನ್ನಿಧಾನಕ್ಕೆ ಬಂದು ಭಕ್ತಿಯಿಂದ ಬೇಡಿಕೊಂಡ ಭಕ್ತರನ್ನು ಸ್ವಾಮಿ ಎಂದಿಗೂ ಕೈ ಬಿಟ್ಟಿಲ್ಲ. ಕಾರ್ತಿಕ ಮಾಸದ ದೀಪಾವಳಿ ಮತ್ತು ಶಿವರಾತ್ರಿ ಹಬ್ಬದ ಸಂದರ್ಭಗಳಲ್ಲಿ ವಿಶೇಷ ಪೂಜೆ ಮತ್ತು ಜಾತ್ರಾ ಮಹೋತ್ಸವ ನಡೆಯಲಿದ್ದು, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ಸೋಮವಾರ ಮತ್ತು ಶುಕ್ರವಾರ ಅಭಿಷೇಕ ಪೂಜೆ ನೆರವೇರಿಸಲಾಗುತ್ತದೆ.
ವಿನಯ್ ಶೇಖರ್ ಪ್ರಧಾನ ಅರ್ಚಕ, ಚಂದ್ರಮೌಳೀಶ್ವರ ಸ್ವಾಮಿ ದೇವಾಲಯ