ಮೈಸೂರು ಕನ್ನಡ ವೇದಿಕೆ ವತಿಯಿಂದ ಶನಿವಾರ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನ ಟಿಕೆಟ್ ದರ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
- ಪ್ರಾಧಿಕಾರದಿಂದ ಭಕ್ತರ ಸುಲಿಗೆ
- ಮೈಸೂರು ಕನ್ನಡ ವೇದಿಕೆ ಆರೋಪ
ಚಾಮುಂಡಿಬೆಟ್ಟದಲ್ಲಿ ಟಿಕೆಟ್ ದರ ಏರಿಕೆ ಮಾಡಿ ಭಕ್ತರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮೈಸೂರು ಕನ್ನಡ ವೇದಿಕೆಯಿಂದ ಶನಿವಾರ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ನಾಡಿನ ಅಧಿದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ದಿನನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಈಗಾಗಲೇ ದೇವಸ್ಥಾನದ ಸುತ್ತಮುತ್ತಲಿನ ಅವೈಜ್ಞಾನಿಕ ಕಾಮಗಾರಿ ವಿರುದ್ಧ ನಗರದ ಸಂಘ ಸಂಸ್ಥೆಗಳು ಧ್ವನಿ ಎತ್ತಿದ ಕಾರಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಇದೀಗ ಧಾರ್ಮಿಕ ದತ್ತಿ ಇಲಾಖೆ ಭಕ್ತರ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ವಿಶೇಷ ದರ್ಶನದ ಟಿಕೆಟ್ ದರ ಏರಿಕೆ ಮಾಡಿದೆ. ಇದು ಯಾವ ರೀತಿ ಇದೆಯೆಂದರೆ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಸಂಖ್ಯೆ ಜಾಸ್ತಿಯಾದಲ್ಲಿ ಕೆಲವರು ಬ್ಲಾಕ್ ಟಿಕೆಟ್ ಮಾಡುತ್ತಾರೆ. ಇದೇ ಮಾದರಿಯನ್ನು ಚಾಮುಂಡಿಬೆಟ್ಟದ ಪ್ರಾಧಿಕಾರ ಮಾಡುತ್ತಿರುವುದು ವಿಪರ್ಯಾಸ ಎಂದು ಕಿಡಿ ಕಾರಿದರು.
ವಿಶೇಷ ದರ್ಶನದ ದರ ಏರಿಕೆ ಮಾಡಿರುವುದು ಮಧ್ಯಮ ವರ್ಗ ಮತ್ತು ಬಡವರಿಗೆ ಹೊರೆಯಾದಂತಾಗಿದೆ. ಭಕ್ತರು ತಮ್ಮ ಕಷ್ಟ ಕಾರ್ಪಣ್ಯ ಹೇಳಿಕೊಳ್ಳಲು ದೇವಿಯ ದರ್ಶನಕ್ಕೆ ಬಂದರೆ ಟಿಕೆಟ್ ದರ ಏರಿಕೆ ಕಂಡು ದರ್ಶನಕ್ಕೆ ಹಿಂದೇಟು ಹಾಕುವಂತಾಗಿದೆ. ಧಾರ್ಮಿಕ ದತ್ತಿ ಇಲಾಖೆ ಸರ್ಕಾರದ ಗಮನಕ್ಕೆ ತಾರದೆ ದರ ಏರಿಕೆ ಮಾಡಿದೆ. ಹಿಂದಿನ ಮುಖ್ಯಮಂತ್ರಿಗಳು ಚಾಮುಂಡಿ ಬೆಟ್ಟದ ಪ್ರಾಧಿಕಾರ ಮಾಡಿರುವುದು ಯಾವ ಉದ್ದೇಶಕ್ಕೆ? ಭಕ್ತರ ಸುಲಿಗೆ ಮಾಡುವುದೆ ಇದರ ಉದ್ದೇಶವೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಪದಾಧಿಕಾರಿಗಳಾದ ನಾಲಾಬೀದಿ ರವಿ, ಗುರುಬಸಪ್ಪ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಗೋಪಿ, ಎಲ್‌ಐಸಿ ಸಿದ್ದಪ್ಪ, ಹೊಣೆಕೆರೆ ಸ್ವಾಮಿ, ಗೋವಿಂದರಾಜು ಇದ್ದರು.