ವಿವಿಧ ಹೂವುಗಳಿಂದ ಚಾಮುಂಡಿ ಅಮ್ಮನವರ ವಿಗ್ರಹವನ್ನು ನಕ್ಷತ್ರ ಆಕಾರದಲ್ಲಿ ಅಲಂಕಾರ ಮಾಡಲಾಗಿತ್ತು.
ನಗರದಲ್ಲಿ ಮುಂಜಾನೆಯಿಂದ ಜಿಟಿ ಜಿಟಿ ಮಳೆಯ ನಡುವೆಯೇ ಸಹಸ್ರಾರು ಭಕ್ತರು ನಾಡದೇವತೆ ಕಪಿಲಾ ತೀರ ನಿವಾಸಿನಿ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದರು.
ಆಷಾಢ ಮಾಸದ ಕೊನೆಯ ಶುಕ್ರವಾರ ಮುಂಜಾನೆಯಿಂದಲೇ ನಗರದಲ್ಲಿ ಮೋಡಕವಿದ ವಾತಾವರಣದ ಜತೆಗೆ ಆಗಾಗ ಜಿಟಿ ಜಿಟಿ ಸುರಿಯುತ್ತಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯನ್ನು ಕಣ್ತುಂಬಿಕೊಂಡರು.
ಅಮ್ಮನವರಿಗೆ ಮುಂಜಾನೆ 3.30 ರಿಂದಲೇ ಹಾಲು, ಬೆಣ್ಣೆ, ತುಪ್ಪ, ಮೊಸರು ಅರಿಶಿನ ಕುಂಕುಮ, ಗಂಧ, ಪಂಚಾಮೃತ, ಇತರ ಶುದ್ಧ ದ್ರವ್ಯಗಳಿಂದ ಅಭಿಷೇಕ ನಡೆಸಲಾಯಿತು. ನಂತರದಲ್ಲಿ ಅಮ್ಮನವರ ವಿಗ್ರಹವನ್ನು ವಿವಿಧ ಬಗೆಯ ಪುಷ್ಪಗಳಿಂದ ನಕ್ಷತ್ರ ಅಲಂಕಾರದಲ್ಲಿ ಶೃಂಗರಿಸಲಾಗಿತ್ತು.
ನೂರಾರು ಗೃಹಿಣಿಯರು ಬೆಲ್ಲ ಹಾಗೂ ನಿಂಬೆಹಣ್ಣಿ ದೀಪದ ಅರತಿ ಬೆಳಗಿ ತಮ್ಮ ಇಷ್ಟಾರ್ಥ ನೆರವೇರಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ನಂತರದಲ್ಲಿ ಪರಸ್ಪರ ಅರಿಶಿನ ಕುಂಕುಮ ಮಡಿಲು ಅಕ್ಕಿ ಹಾಗೂ ಬಾಗಿನ ವಿನಿಯೋಗ ಮಾಡಿಕೊಂಡರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಅಮ್ಮನವರ ದರ್ಶನ ಪಡೆಯಲು ಸಾಧ್ಯವಾಗದ ಭಕ್ತರು ನಂಜನಗೂಡಿನ ಕಡೆ ಮುಖ ಮಾಡಿ ಪಟ್ಟಣದಲ್ಲಿ ಇರುವ ಚಾಮುಂಡೇಶ್ವರಿಯ ದರ್ಶನ ಪಡೆದರು.
ಭಕ್ತರಿಗೆ ಶುದ್ಧ ಕುಡಿಯುವ ನೀರು, ತಾತ್ಕಾಲಿಕ ಶೌಚಗೃಹ, ಮಳೆಯಿಂದ ರಕ್ಷಣೆ ಪಡೆಯಲು ಶಾಮಿಯಾನದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರಿಗೆ ದೇವಾಲಯದ ವತಿಯಿಂದ ಪ್ರಸಾದ ಹಾಗೂ ಬಾದಾಮಿ ಹಾಲಿನ ವ್ಯವಸ್ಥೆ ಮಾಡಲಾಗಿತ್ತು.
ದೇವಾಲಯದ ಪ್ರಧಾನ ಅರ್ಚಕ ವೈದ್ಯನಾಥ ದೀಕ್ಷಿತ್ ಮಾತನಾಡಿ, ಈ ಬಾರಿ ನಂಜನಗೂಡಿನ ಚಾಮುಂಡೇಶ್ವರಿ ದೇವಾಲಯಕ್ಕೆ ಅಪಾರ ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು ತಾಯಿಯ ಕೃಪೆಗೆ ಪ್ರಾತರಾಗಿದ್ದಾರೆ ಎಂದರು.
ಶ್ರೀಕಂಠೇಶ್ವರ ದೇವಾಲಯದ ಧರ್ಮದರ್ಶಿ ಗೋಪಾಲಕೃಷ್ಣ, ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡ ಪ್ರವೀಣ್, ವಸಂತ್, ಚಾಮುಂಡೇಶ್ವರಿ ದೇವಾಲಯದ ನೌಕರ ರವಿಕುಮಾರ್, ಇನ್ನು ಅನೇಕ ಭಕ್ತ ವೃಂದ ಆಷಾಢ ಮಾಸದ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.