ಬಂಧನ 
ಮೈಸೂರು

ಎರಡು ವರ್ಷದ ನಂತರ ಸರಗಳ್ಳನ ಬಂಧನ

ಮೈಸೂರು: ಸರಗಳ್ಳನೊಬ್ಬನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ ಶೇರ್ ಖಾನ್ (38) ಬಂಧಿತ ಆರೋಪಿ. ಮೈಸೂರಿನ ಕುವೆಂಪುನಗರದಲ್ಲಿ ವಾಸವಾಗಿದ್ದ ಈತ 2024ರಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಸಿದು ಪರಾರಿಯಾಗಿದ್ದ. ಬೈಕಿನ ನಂಬರ್ ಪ್ಲೇಟ್ ಬದಲಿಸಿಕೊಂಡು ಸುತ್ತಾಡುತ್ತಿದ್ದ ಈತನನ್ನು ಬುಧವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿಜಯನಗರ ಪೊಲೀಸರು ತಿಳಿಸಿದರು.
2024ರ ಸೆ.25ರಂದು ಮಧ್ಯಾಹ್ನ ಹಿನಕಲ್ ನಿವಾಸಿ ಶ್ರೀವಲ್ಲಿ ಎಂಬುವರು ಕೆಲಸ ಮುಗಿಸಿ ಸಿಟಿ ಬಸ್‌ನಲ್ಲಿ ಸಂಕ್ರಾಂತಿ ಸರ್ಕಲ್ ಹತ್ತಿರ ಬಂದು, ಬಸ್ ಇಳಿದು ಹಿನಕಲ್‌ಗೆ ಹೋಗುವ ಸಲುವಾಗಿ ವಿಜಯನಗರ 2ನೇ ಹಂತದ ಹೊಯ್ಸಳ ಸರ್ಕಲ್ ಹತ್ತಿರ ನಡೆದುಕೊಂಡು ಹೋಗುವಾಗ ಈತ ತನ್ನ ಕೈಚಳಕ ತೋರಿದ್ದ.
ಬೈಕ್‌ನಲ್ಲಿ ತನ್ನ ಸಹಚರನೊಂದಿಗೆ ಬಂದು ಶ್ರೀವಲ್ಲಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂನ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಶ್ರೀವಲ್ಲಿ ಅವರು ನೀಡಿದ ದೂರಿನನ್ವಯ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರ ಕಣ್ತಪ್ಪಿಸಿಕೊಂಡು ತಿರುಗುತ್ತಿದ್ದ ಈತ ಇದೀಗ ಸಿಕ್ಕಿ ಬಿದಿದ್ದಾನೆ.