ಸಿಎಫ್‌ಟಿ ಆರ್‌ಐನ ಅಮೃತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಕೇಂದ್ರ ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಇಲಾಖೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಉದ್ಘಾಟಿಸಿದರು. ಎನ್.ಕಲೈಸೆಲ್ವಿ, ಪ್ರೊ.ಗಿರಿಧರ ಪರ್ವತಂ, ಜಿತೇಂದ್ರ ಕುಮಾರ್, ಪ್ರೊ.ಚಿಂದಿ ವಾಸುದೇವಪ್ಪ ಇದ್ದರು.
ಮೈಸೂರು: ದೇಶದ ಆಹಾರ ಭದ್ರತೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಸಿಎಫ್‌ಟಿಆರ್‌ಐ ಬಾಹ್ಯಾಕಾಶಕ್ಕೆ ತೆರಳುವ ಗಗನಯಾತ್ರಿಗಳಿಗೂ ಆಹಾರ ತಯಾರಿಸುವ ಕಾರ್ಯ ಕೈಗೊಂಡಿದೆ ಎಂದು ಕೇಂದ್ರ ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಇಲಾಖೆ, ಪರಮಾಣು ಇಂಧನ ಇಲಾಖೆ ಹಾಗೂ ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಿಎಫ್‌ಟಿ ಆರ್‌ಐನ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭಾರತೀಯ ಜೈವಿಕ ತಂತ್ರಜ್ಞಾನ ಇಲಾಖೆಯೂ ಸಹ ಬಾಹ್ಯಾಕಾಶಕ್ಕೆ ತೆರಳುವ ಗಗನಯಾತ್ರಿಗಳಿಗೆ ಆಹಾರ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ತೊಡಗಿದೆ ಎಂದರು.
ಅಣುಶಕ್ತಿ ಕ್ಷೇತ್ರ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಕೇಂದ್ರ ಸರ್ಕಾರ ಆಸಕ್ತಿ ತೋರಿದ್ದು, ಇದಕೋಸ್ಕರ ಅಗತ್ಯ ತಾಂತ್ರಿಕ ಮತ್ತು ಹಣಕಾಸು ನೆರವು ನೀಡಲಿದೆ. ನವೋದ್ಯಮಗಳು ದೇಶದ ಭವಿಷ್ಯವಾಗಿದ್ದು, ಸಣ್ಣ ಪ್ರಮಾಣದಲ್ಲಿ ಆರಂಭವಾಗುವ ಉದ್ಯಮಗಳು ಜಾಗತಿಕವಾಗಿ ವಿಸ್ತರಣೆ ಹೊಂದಲು ಅವುಗಳ ಸಾಮರ್ಥ್ಯ ಹೆಚ್ಚಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಇದಕೋಸ್ಕರ ವೈಜ್ಞಾನಿಕ ಸಂಶೋಧನೆ ಹಾಗೂ ಆವಿಷ್ಕಾರಗಳಿಗೆ ಪೂರಕ ಪರಿಸರ ನಿರ್ಮಿಸಿಕೊಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಸಿಎಫ್‌ಟಿಆರ್‌ಐ ಸಂಸ್ಥೆಯು ದೇಶದ ಸುಸ್ಥಿರ ಅಭಿವೃದ್ಧಿಗೆ ಅಡಿಪಾಯವನ್ನು ಹಾಕಿಕೊಟ್ಟಿದೆ. ಸಂಸ್ಥೆಯ ಆವಿಷ್ಕಾರಗಳು ಸಾಮಾನ್ಯ ಜನರನ್ನು ತಲುಪಿಸಲು ಡಿಜಿಟಲೀಕರಣಕ್ಕೆ ಆದ್ಯತೆ ನೀಡಬೇಕು. ರೆಸಿಪಿಗಳ ಸಣ್ಣ ವಿಡಿಯೋಗಳನ್ನು ತಯಾರಿಸಬೇಕು. ರೈತರು ಹಾಗೂ ಉದ್ಯಮಿಗಳೊಂದಿಗೆ ಸಂವಾದ ನಡೆಸಬೇಕು. ಜ್ಞಾನವನ್ನು ಹಂಚಿ ಉದ್ಯಮಶೀಲತೆ ಬೆಳೆಸಬೇಕು ಎಂದು ಸಲಹೆ ನೀಡಿದರು.
ಬಹಳಷ್ಟು ದೇಶಗಳಿಗೆ ಜಾಗತಿಕ ರಾಜಕಾರಣದ ವಾತಾವರಣವು ಅನಾರೋಗ್ಯಕರವಾಗಿದೆ. ಈ ವೇಳೆ ದೇಶದ ಸಿಎಫ್‌ಟಿಆರ್‌ಐನಂಥ ಸಂಸ್ಥೆಗಳ ಕೊಡುಗೆಯಿಂದ ದೇಶದ ಆರ್ಥಿಕತೆಯು ಸದೃಢವಾಗಿದೆ. ಬಾಹ್ಯಾಕಾಶ, ಕ್ರೀಡಾ ಪೌಷ್ಟಿಕ ಆಹಾರಗಳ ಉತ್ಪಾದನೆಯಲ್ಲಿ ಕ್ರಾಂತಿ ನಡೆಸಲು ಆಹಾರೋದ್ಯಮಗಳಿಗೆ ನೆರವಾಗಬೇಕು ಎಂದರು.
ವೇದಿಕೆಯಲ್ಲಿ ಕೇಂದ್ರೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್) ಮಹಾ ನಿರ್ದೇಶಕಿ ಎನ್.ಕಲೈಸೆಲ್ವಿ, ಸಿಎಫ್‌ಟಿಆರ್‌ಐ ನಿರ್ದೇಶಕ ಪ್ರೊ.ಗಿರಿಧರ ಪರ್ವತಂ, ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ಸಲಹಾ ಮಂಡಳಿ (ಬಿಐಆರ್‌ಸಿ) ವ್ಯವಸ್ಥಾಪಕ ನಿರ್ದೇಶಕ ಜಿತೇಂದ್ರ ಕುಮಾರ್, ಆಹಾರ ವಿಜ್ಞಾನಿ ಪ್ರೊ.ಚಿಂದಿ ವಾಸುದೇವಪ್ಪ ಇದ್ದರು.
ಇನ್‌ಕ್ಯುಬೇಷನ್ ಸೆಂಟರ್ ಉದ್ಘಾಟನೆ: ಕೇಂದ್ರ ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಇಲಾಖೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಶುಕ್ರವಾರ ಸಿಎಫ್‌ಟಿಆರ್‌ಐ ಆವರಣದಲ್ಲಿ ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ಸಲಹಾ ಮಂಡಳಿ (ಬಿಐಆರ್‌ಸಿ) ಸಹಯೋಗದಲ್ಲಿ ಸ್ಥಾಪಿಸಿರುವ ಬಯೊನೆಸ್ಟ್ ಇನ್‌ಕ್ಯುಬೇಷನ್ ಸೆಂಟರ್ ಉದ್ಘಾಟಿದರು. ಜೈವಿಕ ತಂತ್ರಜ್ಞಾನ ಸಂಶೋಧನೆ ಮತ್ತು ಫುಡ್ ಬಯೊ ಪ್ರೋಸೆಸಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ನವೋದ್ಯಮಗಳ ಆರಂಭಕ್ಕೆ ಪೂರಕ ವಾತಾವರಣವನ್ನು ಕೇಂದ್ರದಲ್ಲಿ ನಿರ್ಮಿಸಲಾಗಿದೆ. ಮಾರಗೌಡನಹಳ್ಳಿಯ ಕೇಂದ್ರದ ಕ್ಯಾಂಪಸ್‌ನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹಾಸ್ಟೆಲ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
7 ಕಂಪನಿಗಳೊಂದಿಗೆ ಒಡಂಬಡಿಕೆ: ಫರಿದಾಬಾದ್‌ನ ಡಿಥ್ರೀಪಿಬಯೊ, ಬೆಂಗಳೂರಿನ ಬ್ಲೂಮ್‌ರಶ್, ಟಾಟಾ ಎಂಟರ್‌ಪ್ರೈಸಸ್‌ನ ಬಿಗ್‌ಬಾಸ್ಕೆಟ್, ಹುಬ್ಬಳ್ಳಿಯ ಎಂ.ಬಿ. ಹೊಸಮನಿ ಆ್ಯಂಡ್ ಸನ್ಸ್, ತೆಲಂಗಾಣದ ನ್ಯೂಟ್ರಿಸರ್ಕಲ್, ಬ್ಹೂಲರ್, ಟಾಟಾ ಕನ್‌ಸ್ಯೂಮರ್ ಪ್ರಾಡಕ್ಟ್ಸ್ ಕಂಪನಿಗಳು ಸಿಎಫ್‌ಟಿಆರ್‌ಐನ ತಂತ್ರಜ್ಞಾನ ಬಳಕೆಗೆ ಪ್ಪಂದಕ್ಕೆ ಸಹಿ ಹಾಕಿದವು.