ಶ್ರೀ ಸತ್ಯಪ್ರಮೋದತೀರ್ಥ ಸ್ವಾಮೀಜಿ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಚಾಲನೆ ನೀಡಿದರು.  
ಮೈಸೂರು

ಮೈಸೂರು ದಿಗ್ವಿಜಯಕ್ಕೆ ವಿಧ್ಯುಕ್ತ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಉತ್ತರಾದಿ ಮಠದಿಂದ ಬೃಹತ್ ಧಾರ್ಮಿಕ ಮೆರವಣಿಗೆ
  • ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಅಧಿಕ ಮಾಸೋತ್ಸವ
ಅಧಿಕ ಜ್ಯೇಷ್ಠ ಮಾಸೋತ್ಸವದ ಅಂಗವಾಗಿ ನಗರದ ಉತ್ತರಾದಿ ಮಠ 33 ದಿನಗಳ ಕಾಲ ಆಯೋಜನೆ ಮಾಡಿರುವ ವಿಶೇಷ ಕಾರ್ಯಕ್ರಮ ಸರಣಿ ‘ಮೈಸೂರು ದಿಗ್ವಿಜಯ’ ಪ್ರಯುಕ್ತ ಬೃಹತ್ ಧಾರ್ಮಿಕ ಮೆರವಣಿಗೆ ನೆರವೇರಿತು.
ವಿವಿಧ ಕಲಾತಂಡದ ಮೆರವಣಿಗೆ ಮೂಲಕ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ನಗರದ ಮಹಾರಾಜ ಕಾಲೇಜು ಮೈದಾನದಿಂದ ಅಗ್ರಹಾರದ ಧನ್ವಂತರಿ ಕ್ಷೇತ್ರ ಉತ್ತರಾದಿ ಮಠದ ವರೆಗೆ ಹಲವು ಕಲಾತಂಡಗಳೊಂದಿಗೆ ಪಲ್ಲಕ್ಕಿ ಸಹಿತ ಮೆರವಣಿಗೆ ಗಮನ ಸೆಳೆಯಿತು.
ಗಜರಾಜನ ಕಲಾಕೃತಿಯ ರಥದ ಮೇಲೆ ಅಯೋಧ್ಯ ಬಾಲರಾಮ ವಿಗ್ರಹಕ್ಕೆ, ರಥದ ಮೇಲೆ ಶ್ರೀ ಸತ್ಯಪ್ರಮೋದ ತೀರ್ಥ ಸ್ವಾಮೀಜಿ ಪ್ರತಿಕೃತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ನಾದಸ್ವರ, ವೀರಗಾಸೆ, ಚಂಡೆ, ನಗಾರಿ, ಕೀಲು ಕುದುರೆ, ಬೊಂಬೆ ವೇಷ, ಕಂಸಾಳೆ ಹಾಗೂ ವಿವಿಧ ಭಜನಾ ಮಂಡಳಿಗಳ ಕಲಾ ಪ್ರದರ್ಶನ ಜನಮನ ರಂಜಿಸಿತು.
ಈ ಸಂದರ್ಭ ಶಾಸಕ ಟಿ.ಎಸ್. ಶ್ರೀವತ್ಸ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್‌ಕುಮಾರ್, ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಡಿ.ಟಿ.ಪ್ರಕಾಶ್ ,ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ, ಸಮಾಜ ಸೇವಕರಾದ ರಘುರಾಮ ವಾಜಪೇಯಿ, ಎಸ್.ಭುಜಂಗ, ವಿಶ್ವ ಹಿಂದೂ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಕಾಮತ್, ಎಸ್.ಬಿ.ವಾಸುದೇವಮೂರ್ತಿ, ಉದ್ಯಮಿ ಅನಂತ್ ನಾಗರಾಜ್, ಉತ್ತರಾದಿ ಮಠದ
ಜಯತೀರ್ಥ ವಿದ್ಯಾಪೀಠದ ಕುಲಪತಿ ಪಂಡಿತ ಗುತ್ತಲ ರಂಗಾಚಾರ್ಯ, ಮೈಸೂರು ಶಾಖೆ ವ್ಯವಸ್ಥಾಪಕ ಅನಿರುದ್ಧಾಚಾರ್ಯ ಪಾಂಡುರಂಗಿ ಇತರರು ಭಾಗವಹಿಸಿದ್ದರು.
ಸಂದೇಶ: ಜೀವನದಲ್ಲಿ ಎದುರಾಗುವ ಸಕಲ ವಿಘ್ನಗಳಿಂದ ಪಾರಾಗಲು ಜ್ಞಾನ ಕಾರ್ಯಗಳೇ ಪರಿಹಾರ ಎಂದು ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು. ಅಗ್ರಹಾರದ ವಿಶ್ವೇಶ್ವರ ದೇಗುಲ ಆವರಣದ ಬೃಹತ್ ವೇದಿಕೆಯಲ್ಲಿ ಅನುಗ್ರಹ ಸಂದೇಶ ನೀಡಿದ ಅವರು, ಪುಣ್ಯ ಸಂಪಾದನೆಗೆ ಅಧಿಕ ಮಾಸ ಪ್ರಶಸ್ತ ಕಾಲವಾಗಿದೆ ಎಂದರು.
ಭಗವಂತ ಶ್ರೇಷ್ಠವಾದ ಮಾನವ ಜನ್ಮ ನೀಡಿದ್ದಾನೆ. ಸುಂದರವಾದ ವಿಶ್ವವನ್ನೇ ನಮಗೆ ಉಚಿತ ಕೊಡುಗೆಯಾಗಿ ನೀಡಿದ್ದಾನೆ. ಕೃಪಾಸಾಗರನಾದ ವಿಶ್ವೇಶ್ವರನ ಕಾರುಣ್ಯ ಅರಿತುಕೊಂಡು ಸತ್ಕಾರ್ಯಗಳನ್ನು ಮಾಡಿ ಎಂದು ಸಂದೇಶ ನೀಡಿದರು.
ಗುರುಗಳ ಮೂಲಕ ನಮಗೆ ದೇವರು ಕೃಪೆ ಮಾಡಲಿ ಎಂದು ಪ್ರಾರ್ಥಿಸೋಣ. 33 ದಿನವೂ ಗರಿಷ್ಠವಾಗಿ ಸತ್ಕಾರ್ಯ ಮಾಡಲು ಸಂಕಲ್ಪ ಮಾಡೋಣ ಎಂದರು.