ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆಶ್ರಮದ ಸ್ವಾಮಿ ಯುಕ್ತೇಶಾನಂದಜಿ, ಸ್ವಾಮಿ ಮಹಾಮೇದಾನಂದಜಿ ಇದ್ದರು 
ಮೈಸೂರು

21ರಿಂದ ಶ್ರೀರಾಮಕೃಷ್ಣ ಆಶ್ರಮದ ಶತಮಾನೋತ್ಸವ ಆಚರಣೆ

ಪ್ರಮುಖ ಮುಖ್ಯಾಂಶಗಳು

  • 100 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಮಾರಂಭ
  • 300 ಪೌರಕಾರ್ಮಿಕರಿಗೆ ನಾರಾಯಣಪೂಜೆ
  • ವಿಶೇಷ ಅಂಚೆ ಕವರ್, ಪಿಕ್ಚರ್ ಪೋಸ್ಟ್ ಕಾರ್ಡ್, ‘ಶ್ರೀರಾಮಕೃಷ್ಣ ಆಶ್ರಮ-100 ವರ್ಷಗಳು’ ವಿಡಿಯೋ ಬಿಡುಗಡೆ
  • 300 ಸ್ವಾಮೀಜಿಗಳು, 30 ಮಾತೆಯರು, 1000 ಪ್ರತಿನಿಧಿಗಳು ಭಾಗಿ
ಮೈಸೂರು: ನಗರದಲ್ಲಿ ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಇತರ ಸೇವೆ ಸಲ್ಲಿಸುತ್ತಿರುವ ಶ್ರೀರಾಮಕೃಷ್ಣ ಆಶ್ರಮ 100 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ನ.21ರಿಂದ ನಾಲ್ಕು ದಿನ ಶತಮಾನೋತ್ಸವ ಆಚರಿಸಲಾಗುತ್ತಿದೆ.
ಯಾದವಗಿರಿಯಲ್ಲಿ 1925ರಲ್ಲಿ ಆರಂಭವಾದ ಆಶ್ರಮ ಈ ಸುಸಂದರ್ಭದಲ್ಲಿ ವಿವಿಧ ಕಾರ್ಯಕ್ರಮ ಕೈಗೊಂಡಿದೆ. 300 ಸ್ವಾಮೀಜಿಗಳು, 30 ಮಾತೆಯರು, 1000 ಪ್ರತಿನಿಧಿಗಳು, 80 ಗಣ್ಯರು, ಆಶ್ರಮದ ಹಳೇ ವಿದ್ಯಾರ್ಥಿಗಳು ಈ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. 

ಪೌರಕಾರ್ಮಿಕರಿಗೆ ನಾರಾಯಣಪೂಜೆ 

ನ.21ರಂದು ಬೆಳಗ್ಗೆ 10.15ಕ್ಕೆ 300 ಪೌರಕಾರ್ಮಿಕರಿಗೆ ನಾರಾಯಣಪೂಜೆ ಸಲ್ಲಿಸುವ ಮೂಲಕ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಾಗುತ್ತದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕಡಪ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಅನುಪಮಾನಂದಜೀ, ಹಲಸೂರು ರಾಮಕೃಷ್ಣಮಠದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದಜೀ, ಶಾಸಕ ಜಿ.ಟಿ.ದೇವೇಗೌಡ ಇನ್ನಿತರರು ಪಾಲ್ಗೊಳ್ಳುವರು ಎಂದು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶತಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ:

ಬೆಳಗ್ಗೆ 11.50ಕ್ಕೆ ಶತಮಾನೋತ್ಸವ ಸ್ಮರಣ ಸಂಚಿಕೆ, ‘ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದರು’ ಗ್ರಂಥ, ಆಶ್ರಮದ ಇತಿಹಾಸ, ಪರಿಷ್ಕೃತ ಗ್ರಂಥದ ಬಿಡುಗಡೆ ಮಾಡಲಾಗುತ್ತದೆ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಶ್ರೀರಾಮಕೃಷ್ಣ ಆಶ್ರಮದ ಚೆನ್ನೈ ಅಧ್ಯಕ್ಷ ಸ್ವಾಮಿ ಸತ್ಯಜ್ಞಾನಾನಂದಜೀ, ವೆಂಕಟಾಪುರದ ಅಧ್ಯಕ್ಷ ಸ್ವಾಮಿ ಅಮೂರ್ತಾನಂದಜೀ, ಮೈಸೂರು ಮಾಜಿ ಅಧ್ಯಕ್ಷ ಸ್ವಾಮಿ ಆತ್ಮವಿದಾನಂದಜೀ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಮಧ್ಯಾಹ್ನ 3.30ಕ್ಕೆ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಅಂಚೆ ಕವರ್, ಪಿಕ್ಚರ್ ಪೋಸ್ಟ್ ಕಾರ್ಡ್, ‘ಶ್ರೀರಾಮಕೃಷ್ಣ ಆಶ್ರಮ-100 ವರ್ಷಗಳು’ ವಿಡಿಯೋ ಬಿಡುಗಡೆಗೊಳಿಸಲಾಗುತ್ತದೆ.  ರಾಮಕೃಷ್ಣಮಠ, ರಾಮಕೃಷ್ಣ ಮಿಷನ್, ಬೇಲೂರು ಮಠದ ಅಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಊಟಿ ರಾಮಕೃಷ್ಣಮಠದ ಸ್ವಾಮಿ ರಾಘವೇಶಾನಂದಜಿ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಇನ್ನಿತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಜೀವನ ಸಂದೇಶದ ಕುರಿತು ಫಲಕಗಳ ಕಿಟ್ ಬಿಡುಗಡೆಗೊಳಿಸಲಾಗುತ್ತದೆ. ಬೇಲೂರು ಮಠದ ಸಹಾಯಕ ಪ್ರಧಾನ ಕಾರ್ಯದರ್ಶಿ ಸ್ವಾಮಿ ಬಲಭದ್ರಾನಂದಜೀ ಸಾನ್ನಿಧ್ಯ ವಹಿಸುವರು. ಸಂಸದ ತೇಜಸ್ವಿ ಸೂರ್ಯ, ಮಾಜಿ ಸಂಸದ ಪ್ರತಾಪ್ ಸಿಂಹ ಪಾಲ್ಗೊಳ್ಳುವರು. ಯುಕೆ, ಐರ‌್ಲೆಂಡ್, ಬೆಂಗಳೂರು, ಖಾನಪುರ, ಹೈದರಾಬಾದ್‌ನಲ್ಲಿರುವ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ ಎಂದು ಹೇಳಿದರು.

ವಿವೇಕ ಯಾತ್ರೆ

ನ.22ರಂದು ಬೆಳಗ್ಗೆ 10ಕ್ಕೆ ವಿವೇಕ ಯಾತ್ರೆ ನಡೆಯಲಿದೆ. ಸದ್ವಿದ್ಯಾ ಪಾಠಶಾಲೆಯಿಂದ ಹೊರಡುವ ಇದು ವಿವೇಕಸ್ಮಾರಕ, ದೇವರಾಜ ಅರಸು ರಸ್ತೆ, ದಿವಾನ್ಸ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳು ಸಾಗಲಿದ್ದು, ಸ್ವಾಮೀಜಿಗಳು, ಅತಿಥಿಗಳು ಹೆಜ್ಜೆ ಹಾಕಲಿದ್ದಾರೆ. ಲಕ್ನೋ ರಾಮಕೃಷ್ಣ ಮಠದ ಸ್ವಾಮಿ ಮುಕ್ತಿನಾಥಾನಂದಜೀ, ಕಾಮಾರಪುಕರದ ಸ್ವಾಮಿ ಲೋಕೋತ್ತರಾನಂದಜೀ ಸೇರಿದಂತೆ ಇನ್ನಿತರರು ಪಾಲ್ಗೊಳ್ಳುವರು ಎಂದರು. 
ಮಧ್ಯಾಹ್ನ 2.45ಕ್ಕೆ ಆಶ್ರಮದಿಂದ ನಡೆಯುವ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಬೇಲೂರು ಮಠದ ಸಹಾಯಕ ಪ್ರಧಾನ ಕಾರ್ಯದರ್ಶಿ ಸ್ವಾಮಿ ಸತ್ಯೇಶಾನಂದಜೀ, ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಭಾಗಿಯಾಗಲಿದ್ದಾರೆ ಎಂದರು.
ಸಂಜೆ 6.30ಕ್ಕೆ ಶ್ರೀರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿಗಳಿಂದ ಹೊನಲು ಬೆಳಕಿನ ಪ್ರದರ್ಶನ ಏರ್ಪಡಿಸಲಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನೀತಿ ಆಯೋಗದ ಸಿಇಒ ಬಿ.ವಿ.ಆರ್.ಸುಬ್ರಹ್ಮಣ್ಯಂ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಶ್ರೀರಾಮಕೃಷ್ಣ ಆಶ್ರಮದ- 100 ವರ್ಷಗಳ ಸಾಕ್ಷೃಚಿತ್ರ ಪ್ರಸ್ತುತಿ

ನ.22ರಂದು ರಾತ್ರಿ 8ಕ್ಕೆ ರಾಮಕೃಷ್ಣ ವಿದ್ಯಾಶಾಲೆಯ ಶೈಕ್ಷಣಿಕ ಸೇವೆಯ ಅವಲೋಕನ ಮತ್ತು ರಾಮಕೃಷ್ಣ-ವಿವೇಕಾನಂದ ಭಾವಧಾರೆಗೆ ಮೈಸೂರು ರಾಜಮನೆತನದ ಕೊಡುಗೆ ಕುರಿತು ಅಧಿವೇಶನ ನಡೆಯಲಿದ್ದು, ‘ಶ್ರೀರಾಮಕೃಷ್ಣ ಆಶ್ರಮದ- 100 ವರ್ಷಗಳ ಸಾಕ್ಷೃಚಿತ್ರ ಪ್ರಸ್ತುತ ಪಡಿಸಲಾಗುತ್ತದೆ. ಮೈಸೂರು ಮಹಾರಾಜರಿಗೆ, ದಿವಾನ್ ಶೇಷಾದ್ರಿ ಅಯ್ಯರ್‌ರಿಗೆ ಸ್ವಾಮಿ ವಿವೇಕಾನಂದರು ಬರೆದಿರುವ ಪತ್ರಗಳನ್ನು ಪ್ರದರ್ಶಿಸಲಾಗುತ್ತದೆ ಎಂದರು.
ನ.23ರಂದು ಬೆಳಗ್ಗೆ 6.15ಕ್ಕೆ ರಾಮಕೃಷ್ಣನಗರದಲ್ಲಿರುವ ರಾಮಕೃಷ್ಣಪರಮಹಂಸರ ವೃತ್ತದಲ್ಲಿ ಉಷಾಕೀರ್ತನೆ ನಡೆಯಲಿದ್ದು, ಭಜನೆ, ಧ್ಯಾನ, ಆರತಿ, ಪ್ರಸಾದ ವಿತರಣೆ ಇರಲಿದೆ. ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಬೆಳಗ್ಗೆ 9ಕ್ಕೆ ಸಂತ ಸಮಾಗಮವಾಗಲಿದೆ. 
ರಾಮಕೃಷ್ಣಮಠ, ರಾಮಕೃಷ್ಣ ಮಿಷನ್, ಬೇಲೂರು ಮಠದ ಅಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ, ಮಥುರಾದ ಉದಾಸೀನ್ ಕಾರ್ಷ್ಣಿ ಆಶ್ರಮದ ಪೀಠಾಧೀಶ ಸ್ವಾಮಿ ಗುರುಶರಣಾನಂದಜೀ ಮಹಾರಾಜ್ ಸಾನ್ನಿಧ್ಯ ವಹಿಸುವರು.  ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ, ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಉಪನ್ಯಾಸ ನೀಡುವರು ಎಂದು ನುಡಿದರು.
ಮಧ್ಯಾಹ್ನ 3ಕ್ಕೆ ನಡೆಯುವ ಸಾಹಿತ್ಯ ಸೇವೆ, ಆಶ್ರಮದ ಕನ್ನಡ ಪ್ರಕಟಣೆಗಳು, ವಿವೇಕಪ್ರಭ ಮಾಸಪತ್ರಿಕೆಯ ಬೆಳ್ಳಿ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರು ಬಸವನಗುಡಿಯ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ನಿತ್ಯಾಸ್ಥಾನಂದಜೀ, ಕೇಂದ್ರ ಸಚಿವ ವಿ.ಸೋಮಣ್ಣ ಪಾಲ್ಗೊಳ್ಳವರು. ಸಂಜೆ 6ಕ್ಕೆ ಶ್ರೀರಾಮಕೃಷ್ಣ, ಶ್ರೀಶಾರದಾದೇವಿ, ಸ್ವಾಮಿ ವಿವೇಕಾನಂದರ ಕುರಿತು ವಿಚಾರಸಂಕಿರಣ ನಡೆಯಲಿದೆ ಎಂದರು. 

ಸಮರ್ಪಣ ಸಮಾವೇಶ 

ನ.24ರಂದು ಬೆಳಗ್ಗೆ 9ಕ್ಕೆ ಸಮರ್ಪಣ ಸಮಾವೇಶ ಏರ್ಪಡಿಸಿದ್ದು, ಶ್ರೀರಾಮಕೃಷ್ಣರಿಗೆ ನೂರು ವರ್ಷಗಳ ಸತತ ಸೇವೆಯ ಸಾಂಕೇತಿಕ ಸಮರ್ಪಣೆ ಇದಾಗಿದೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಸಂಜೆ 5.30ಕ್ಕೆ ವಿವೇಕ ಗಾಥಾ ನಡೆಯಲಿದ್ದು, ಸ್ವಾಮಿ ವಿವೇಕಾನಂದ ಜೀವನ ಮತ್ತು ಸಂದೇಶವನ್ನು ಆಧರಿಸಿದ ಬಹುಮಾಧ್ಯಮ ಸಾಂಸ್ಕೃತಿಕ ಕಾರ್ಯಕ್ರಮ ಇದಾಗಿದೆ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಆಶ್ರಮದ  ಸ್ವಾಮಿ ಯುಕ್ತೇಶಾನಂದಜಿ, ಸ್ವಾಮಿ ಮಹಾಮೇದಾನಂದಜಿ, ಪ್ರಾಂಶುಪಾಲ ಟಿ.ಕೆ.ಚಂದ್ರಶೇಖರ್, ನಿವೃತ್ತ ಪ್ರಾಂಶುಪಾಲ ಎಸ್.ಬಾಲಾಜಿ, ಶಾಲೆಯ ಆಡಳಿತಾಧಿಕಾರಿ ಪ್ರೊ.ಚಂದ್ರಶೇಖರ್, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅರುಣ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ಡಿಸೆಂಬರ್‌ನಲ್ಲಿ ವಿವೇಕ ಸ್ಮಾರಕ ಉದ್ಘಾಟನೆ

ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಕೇಂದ್ರ ಮತ್ತು ವಿವೇಕ ಸ್ಮಾರಕ ಉದ್ಘಾಟನೆ ಡಿಸೆಂಬರ್‌ನಲ್ಲಿ ನಡೆಯಲಿದೆ. ಈಗಾಗಲೇ ಕಟ್ಟಡ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ ಎಂದು ಸ್ವಾಮಿ ಮುಕ್ತಿದಾನಂದ ತಿಳಿಸಿದರು.