ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಹಾರನಹಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸೇವಾ ಸಮಿತಿ ಮತ್ತು ಗ್ರಾಮಸ್ಥರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಲಾಯಿತು.
- ಡಿಕೆಸಿ ಮುಖ್ಯಮಂತ್ರಿಯಾದ ಹಿನ್ನಲೆ
- ಪಟಾಕಿ ಸಿಡಿಸಿ, ಸಿಹಿ ಹಂಚಿಕೆ
ಬೆಟ್ಟದಪುರ: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲಲಿ ಗುರುವಾರ ಸಂಜೆ ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸೇವಾ ಸಮಿತಿ ಮತ್ತು ಗ್ರಾಮಸ್ಥರು ಪಟಾಕಿ ಸಿಡಿಸಿ, ಸಿಹಿ ಹಾಗೂ ಉಪಹಾರ ವಿತರಿಸಿ ಸಂಭ್ರಮ ಆಚರಿಸಿದರು.
ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸೇವಾ ಸಮಿತಿ ಅಧ್ಯಕ್ಷ ಎಚ್.ಬಿ.ಯೋಗೇಶ್‌ಗೌಡ ಮಾತನಾಡಿ, ಎಲ್ಲ ಸಮುದಾಯದವರನ್ನು ಒಂದೇ ಸಮವಾಗಿ ಕರೆದುಕೊಂಡು ಹೋಗುವುದು ಕಾಂಗ್ರೆಸ್ ಪಕ್ಷವಾಗಿದೆ. ಈ ನಿಟ್ಟಿನಲ್ಲಿ ನಲವತ್ತು ವರ್ಷಗಳ ರಾಜಕಾರಣದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿದು ಬಂದು, ಇಂದು ಮುಖ್ಯಮಂತ್ರಿಯಾಗಿರುವ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಅಧಿಕಾರಿಕ್ಕೆ ಬರುತ್ತಿದ್ದಂತೆ ಆರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಶಿವಕುಮಾರ್ ದಕ್ಷ ನಾಯಕರಾಗಿದ್ದು, ರಾಜ್ಯದ ಬೆಳವಣಿಗೆಗೆ ಪ್ರಾಮಾಣಿಕವಾಗಿ ದುಡಿಯುವ ಮೂಲಕ ಸೇವೆ ಸಲ್ಲಿಸಲಿದ್ದಾರೆ ಎಂಬ ಭರವಸೆ ಇದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಎಚ್.ಟಿ ಗೋವಿಂದೆಗೌಡ, ಕೃಷ್ಣೇಗೌಡ, ಮಂಜುನಾಥ್, ಕಾಂತರಾಜು, ಎಚ್.ಸಿ.ಮಹೇಶ್, ಎಚ್.ಸಿ.ಪ್ರಕಾಶ್, ಕೆ.ಟಿ.ನಾಗೇಂದ್ರ, ರೇವತಿಜಿತ್‌ಗೌಡ, ಐಟಿ ಮಂಜುನಾಥ್, ಎಚ್.ಆರ್.ಶ್ರೀನಿವಾಸ್, ಸರ್ಕಲ್ ರಾಜೇಗೌಡ, ಎಚ್.ಜೆ.ಸುರೇಶ, ಸೋಮಶೇಖರ್, ಕಿರಣ್, ಮನೋಜ್, ಎಚ್.ಸಿ.ಕೃಷ್ಣೇಗೌಡ, ಅನಿಲ್, ಮುತ್ತುರಾಜು ಕೆಸವಿನಕೆರೆ, ಸತೀಶ್, ಅಶೋಕ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.