ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು ಬುಧವಾರ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
ನಗರದ ಚಾಮರಾಜ ಜೋಡಿ ರಸ್ತೆಯಲ್ಲಿ ಜಮಾಯಿಸಿದ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಬೆಂಬಲಿಗರು, ನೆಚ್ಚಿನ ನಾಯಕನ ಪರವಾಗಿ ಘೋಷಣೆ ಕೂಗಿ, ವಿಜಯೋತ್ಸವ ಆಚರಿಸಿದರು.
ಸಾರಿಗೆ ಬಸ್‌ಗಳನ್ನು ತಡೆದು, ಪ್ರಯಾಣಿಕರು ಹಾಗೂ ಚಾಲಕ, ನಿರ್ವಾಹಕರಿಗೆ ಸಿಹಿ ತಿನಿಸಿದರು. ರಸ್ತೆಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು ಹಾಗೂ ಸಾರ್ವಜನಿಕರಿಗೂ ಸಿಹಿ ಹಂಚಿದರು.
ಕನಕಪುರ ಬಂಡೆ ಎಂದೇ ಖ್ಯಾತರಾಗಿರುವ ಡಿ.ಕೆ.ಶಿವಕುಮಾರ್ ರಾಜ್ಯದ ಅತ್ಯುನ್ನತ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದು ಕೋಟ್ಯಂತರ ಕಾರ್ಯಕರ್ತರಿಗೆ ಆನೆ ಬಲ ಬಂದಂತಾಗಿದೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅವರಿಗೆ ಇಡೀ ರಾಜ್ಯದ ಜನರ ಆಶೀರ್ವಾದ ಇರಬೇಕು. ಸಾರ್ವಜನಿಕರು ಸಿಹಿ ತಿಂದು ನಾಯಕನನ್ನು ಆಶೀರ್ವದಿಸಬೇಕು ಎಂದು ಬೆಂಬಲಿಗರು ಜೈಕಾರ ಮೊಳಗಿಸಿದರು.
ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಜಿ.ರಾಘವೇಂದ್ರ, ಶೇಖರ್, ಕಿರಣ್, ಎಸ್.ಎನ್.ರಾಜೇಶ್, ರವಿಚಂದ್ರ, ಚಂದ್ರು, ಲಕ್ಷ್ಮಣ, ನಾಗರಾಜು, ಮುಸಿರಾ, ಚಂದ್ರು, ಮಂಜು, ವಿನೋದ್, ಮಾಯಣ್ಣ, ಪೂಜಾರಿ ನಟರಾಜ್, ಅನಿಲ್, ಯೋಗೇಶ್ ನಾಯ್ಡು, ಹರೀಶ್, ರಾಕೇಶ್ ಸೇರಿದಂತೆ ಹಲವರು ಇದ್ದರು.