ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿ.ಲಕ್ಷ್ಮೀಕಾಂತರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಮಹನೀಯರು ಜಯಂತಿ ಪೂರ್ವಭಾವಿ ಸಿದ್ಧತಾ ಸಭೆ ಆಯೋಜಿಸಲಾಗಿತ್ತು. ಮಲ್ಲಿಕಾರ್ಜುನ ಬಾಲದಂಡಿ, ಡಾ. ಹರ್ಷ ಪ್ರಿಯಾವಂದನ ಇತರರು ಇದ್ದರು 
ಮೈಸೂರು

ಮಹನೀಯರು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ: ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ

ಪ್ರಮುಖ ಮುಖ್ಯಾಂಶಗಳು

  • ಚಿಂತನೆ ಹಾಗೂ ಆದರ್ಶಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದೆ
  • ಜಯಂತಿ ಅಂಗವಾಗಿ ವಿವಿಧ ಸ್ಪರ್ಧೆ, ಕಾರ್ಯಕ್ರಮ ಆಯೋಜನೆ
ಮೈಸೂರು:ಜಿಲ್ಲಾಡಳಿತದಿಂದ ಏಪ್ರಿಲ್ 5 ರಂದು ಡಾ. ಬಾಬು ಜಗಜೀವನರಾಮ್ ಹಾಗೂ ಏಪ್ರಿಲ್ 14 ರಂದು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಎಲ್ಲ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹನೀಯರು ಜಯಂತಿ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ: ಬಾಬೂ ಜಗಜೀವನರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಗಳಲ್ಲ. ಅವರ ಚಿಂತನೆ ಹಾಗೂ ಆದರ್ಶಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಸಾರ್ವಜನಿಕರು ಎರಡೂ ಜಯಂತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಏ.5 ರಂದು ಡಾ.ಬಾಬೂ ಜಗಜೀವನರಾಮ್ ಪುತ್ಥಳಿಗೆ ಹಾಗೂ ಏ.14 ರಂದು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ವೇದಿಕೆ ಕಾರ್ಯಕ್ರಮವನ್ನು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗುವುದು. ಮಾಲಾರ್ಪಣೆಯ ನಂತರ ಮಹನೀಯರ ಸಂದೇಶ ಸಾರುವ ಸ್ತಬ್ಧಚಿತ್ರದೊಂದಿಗೆ ಮೆರವಣಿಗೆ ಸಾಗಲಿದೆ. ಮೆರವಣಿಗೆಯಲ್ಲಿ ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ವಿಶೇಷ ಮೆರುಗು ನೀಡಲಿದೆ ಎಂದರು.
ಎರಡೂ ಜಯಂತಿಗಳಲ್ಲಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸುವುದು ಕಡ್ಡಾಯ. ಭಾಗವಹಿಸುವ ಅಧಿಕಾರಿಗಳಿಂದ ಹಾಜರಾತಿ ಪಡೆದುಕೊಳ್ಳುವಂತೆ ನಿರ್ದೇಶನ ನೀಡಿದರು.
ಅಂಬೇಡ್ಕರ್ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾಡಿದ ಮುಖ್ಯ ಭಾಷಣಗಳ ಭಾಗಗಳನ್ನು ಪಡೆದು ವಿದ್ಯಾರ್ಥಿಗಳಿಂದ ಅಭ್ಯಾಸ ಮಾಡಿಸಿ ಉತ್ತಮವಾಗಿರುವ 5 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅಂಬೇಡ್ಕರ್ ಜಯಂತಿ ದಿನದಂದು ಅವರ ಭಾಷಣವನ್ನು ಮರು ಪ್ರಸ್ತುತಪಡಿಸಿ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಜಯಂತಿಯ ಅಂಗವಾಗಿ ಇಬ್ಬರೂ ಮಹನೀಯರ ಸಂದೇಶಗಳುಳ್ಳ ಗಾಯನ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದರೊಂದಿಗೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕ್ರಿಕೆಟ್ ಹಾಗೂ ಥ್ರೋಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಬಾಬೂ ಜಗಜೀವನರಾಮ್ ಭವನ ನಿರ್ಮಾಣದ ಬಗ್ಗೆ ಸಂಘಟನೆಗಳು ಸಭೆಯಲ್ಲಿ ಚರ್ಚಿಸಿದಾಗ, ಜಿಲ್ಲಾಧಿಕಾರಿಗಳು ಈಗಾಗಲೇ ಭವನ ನಿರ್ಮಾಣಕ್ಕೆ 2, 3 ಸ್ಥಳಗಳನ್ನು ಗುರುತಿಸಲಾಗಿದೆ. ಏ.5 ರೊಳಗೆ ಭವನ ನಿರ್ಮಾಣಕ್ಕೆ ಸ್ಥಳ ಅಂತಿಮಗೊಳಿಸಲಾಗುವುದು ಎಂದರು.
ಅಂಬೇಡ್ಕರ್ ಭವನ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಿ ಉದ್ಘಾಟನೆಗೆ ಕ್ರಮವಹಿಸಬೇಕು ಎಂದು ಸಂಘಟನೆಗಳ ಮುಖ್ಯಸ್ಥರು ಸಭೆಯಲ್ಲಿ ಚರ್ಚಿಸಿದರು. ಜಿಲ್ಲಾಧಿಕಾರಿಗಳು ಈ ಕುರಿತಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರ ಕಾಮಗಾರಿ ಪೂರ್ಣಕ್ಕೆ ಕ್ರಮ ವಹಿಸಲಾಗುವುದು. ವಿಳಂಬ ಹಾಗೂ ಕಳಪೆ ಕಾಮಗಾರಿ ಕಂಡುಬಂದಲ್ಲಿ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಸೂರು ನಗರ ಉಪ ಪೊಲೀಸ್ ಆಯುಕ್ತೆ ಡಾ. ಹರ್ಷ ಪ್ರಿಯಾವಂದನ, ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತೆ ವೀಣಾ ಇತರರು ಇದ್ದರು.