ಮೂಗೂರು ಗ್ರಾಮದ ಪೊಲೀಸ್ ಉಪ ಠಾಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ಜಾತ್ರಾ ಮಹೋತ್ಸವದ ಶಾಂತಿ ಸಭೆಯಲ್ಲಿ ಇನ್‌ಸ್ಪೆಕ್ಟರ್ ಧನಂಜಯ್ ಮಾತನಾಡಿದರು. 
ಮೈಸೂರು

ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಿಸಿ

ಮೂಗೂರು: ಜನವರಿ 3ರಿಂದ 7ರವರೆಗೆ ನಡೆಯುವ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಶಾಂತಿ, ಸೌಹಾರ್ದತೆಯಿಂದ ಆಚರಿಸುವಂತೆ ಇನ್‌ಸ್ಪೆಕ್ಟರ್ ಧನಂಜಯ್ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಗ್ರಾಮದ ಪೊಲೀಸ್ ಉಪ ಠಾಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ಜಾತ್ರಾ ಮಹೋತ್ಸವದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಲ್ಲಿ ಸೌಹಾರ್ದತೆ ಎದ್ದು ಕಾಣುತ್ತಿದೆ. ಎಲ್ಲ ಸಮುದಾಯದ ಜನತೆ ಭೇದ ಭಾವವಿಲ್ಲದೆ ಎಲ್ಲರೂ ಸೌಹಾರ್ದತೆಯಿಂದ ಆಚರಣೆ ಮಾಡುವಂತೆ ಕೋರಿದರು.
ಸಭೆಯಲ್ಲಿ ಬಲ್ಲಯ್ಯ ಮಾತನಾಡಿ, ಬಂಡಿ ಉತ್ಸವದ ಸಂದರ್ಭದಲ್ಲಿ ಎತ್ತುಗಳ ನಿಲುಗಡೆಗೆ ಪರ್ಯಾಯ ಸ್ಥಳವನ್ನು ವ್ಯವಸ್ಥೆ ಹಾಗೂ ಪೂಜೆಗೆ ಆಗಮಿಸುವ ಮಹಿಳೆಯರಿಗೆ ದೇಗುಲಕ್ಕೆ ಹೋಗಲು ಅನುವು ಮಾಡಿಕೊಡಬೇಕು. ಕಳೆದ ವರ್ಷ ರಥೋತ್ಸವದ ವೇಳೆ ನಡೆದ ಘಟನೆಯಲ್ಲಿ ಭಾಗಿಯಾಗಿದ್ದವರ ಮೇಲಿನ ಮೊಕದಮ್ಮೆಯನ್ನು ಖುಲಾಸೆ ಮಾಡಿಕೊಡಬೇಕೆಂದು ಕೇಳಿಕೊಂಡರು. ಬಂಡಿಯ ರುದ್ರಾಕ್ಷಿ ಮಂಟಪ ಹಾಗೂ ರಥೋತ್ಸವದ ಮೇಲೆ ಕೆಲವೇ ಮಂದಿಗೆ ಮಾತ್ರ ಅವಕಾಶ ನೀಡಬೇಕು. ಜಾತ್ರೆಯ ಉತ್ಸವದ ವೇಳೆ ಯಾವುದೇ ಚಿತ್ರ ನಟರ ಭಾವಚಿತ್ರದ ಬಾವುಟ ಪ್ರದರ್ಶನ ನಿಷೇಧಿಸಿ, ಭಕ್ತರಿಗೆ ಕಿರಿಕಿರಿಯನ್ನುಂಟು ಮಾಡುವ ಪುಂಡರ ಮೇಲೆ ನಿಗಾ ವಹಿಸಬೇಕು. 5 ದಿನವೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿದರು.
ಗ್ರಾಮದ ಮುಖಂಡರ ಮನವಿಯನ್ನು ಆಲಿಸಿದ ಇನ್‌ಸ್ಪೆಕ್ಟರ್ ಧನಂಜಯ್ ಮಾತನಾಡಿ, ಗ್ರಾಮದ ಆಯಾಯ ಸಮುದಾಯದ ಮುಖಂಡರು ಜವಾಬ್ದಾರಿ ವಹಿಸಿಕೊಂಡು ಅತಿರೇಕವಾಗಿ ಪುಂಡಾಟಿಕೆಯಲ್ಲಿ ತೊಡಗಿದ ಯುವಕರಿಗೆ ಕಡಿವಾಣ ಹಾಕಬೇಕು. ಜಾತ್ರೆಯಲ್ಲಿ ಜನಸಾಮಾನ್ಯರಿಗೆ ಕರ್ಕಸ ಶಬ್ದದಿಂದ ಕಿರಿಕಿರಿ ಉಂಟುಮಾಡುವ ಪೀಪಿ ಸಾಮಗ್ರಿಗಳನ್ನು ನಿಷೇಧಿಸಬೇಕು. ಕಳೆದ ಬಾರಿ ರಥೋತ್ಸವದ ವೇಳೆ ಉಂಟಾದ ಅಹಿತಕರ ಘಟನೆಗಳು ಮರು ಕಳಿಸದಂತೆ ಧಾರ್ಮಿಕ ಆಚರಣೆಗೆ ಧಕ್ಕೆ ಬಾರದ ರೀತಿಯಲ್ಲಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಎಂ.ಡಿ.ಲೋಕೇಶ್, ಎಂ.ಪಿ.ನಾಗರಾಜ್, ಪಾರುಪತ್ತೇಗಾರ ಎಂ.ಬಿ.ಸಾಗರ್, ಮುಖಂಡರಾದ ಎಂ.ಆರ್.ಸುಂದರ್, ಎಂ.ಪಿ.ಮರಿಸ್ವಾಮಿ, ಪುಟ್ಟಮಾದಯ್ಯ, ಉಪನ್ಯಾಸಕ ಕುಮಾರಸ್ವಾಮಿ ದೇವರಾಜು, ನಾಗಸಂದ್ರ, ಮಹದೇವಸ್ವಾಮಿ, ಸತೀಶ್, ಜಯಶಂಕರ ಮೂರ್ತಿ, ಚೌಲ್ಟ್ರಿ ಮಹೇಶ್, ಡೇರಿ ನಾಗೇಂದ್ರ, ಕೃಷ್ಣ ಸ್ವಾಮಿ, ಮೆಡಿಕಲ್ ಬಾಲು ಇತರರು ಇದ್ದರು.