ಸರಗೂರು ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಮುಂಭಾಗ ಪ್ರತಿಭಟನೆ ನಡೆಸಿದ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ಪದಾಧಿಕಾರಿಗಳು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.  
ಮೈಸೂರು

ಕಾಯ್ದೆ ಜಾರಿಯಾದ ದಿನವೇ ಜೀತ ಕಾರ್ಮಿಕ ನಿರ್ಮೂಲನಾ ದಿನ ಆಚರಿಸಿ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದಿಂದ ಒತ್ತಾಯ
ಸರಗೂರು: ಜೀತಪದ್ಧತಿ ರದ್ದತಿ ಕಾನೂನು ಬಂದ ದಿನವಾದ ಅಕ್ಟೋಬರ್ 25ರಂದೇ ಜೀತ ಕಾರ್ಮಿಕ ನಿರ್ಮೂಲನಾ ದಿನ ಆಚರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದಿಂದ ಶನಿವಾರ ಪಟ್ಟಣ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಜೀತ ಪದ್ಧತಿ ಕಾರ್ಮಿಕ ನಿರ್ಮೂಲನಾ ದಿನಾಚರಣೆ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿರುವ ಗೆಜೆಟ್ ಸುತ್ತೋಲೆೆಯನ್ನು ರದ್ದುಪಡಿಸಬೇಕು, ಜೀತವಿಮುಕ್ತರ ಪುನರ್ವಸತಿಗೆ ಮಾರಕವಾಗಿರುವ ಎಸ್‌ಒಪಿ ಕಾಯ್ದೆಯನ್ನು ಕೂಡಲೇ ರದ್ದು ಮಾಡಬೇಕು, 2008ರ ಕ್ರಿಯಾ ಯೋಜನೆಯ ಪ್ರಕಾರ ಜೀತವಿಮುಕ್ತರಿಗೆ ಸಮಗ್ರ ಪುನರ್ವಸತಿ ಕಲ್ಪಿಸಬೇಕು, ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾ ಮತ್ತು ಉಪ-ವಿಭಾಗ ಮಟ್ಟದ ಜಾಗೃತಿ ಸಮಿತಿ ಸಭೆಗಳನ್ನು ಕಡ್ಡಾಯಗೊಳಿಸಬೇಕು,
 ಜೀತವಿಮುಕ್ತರ ಸಮಗ್ರ ಪುನರ್ವಸತಿಗೆ ಸರ್ಕಾರ ಈ ಸಾಲಿನ ಬಜೆಟ್ ನಲ್ಲಿ 500 ಕೋಟಿ ರೂ. ಅನುದಾನ ಮೀಸಲಿಡಬೇಕು, 2014 ರಿಂದ 2024 ರವರೆಗೆ ಬಿಡುಗಡೆಯಾಗಿ ಪುನರ್ವಸತಿ ಸಿಗದೆ ಕಂಗಾಲಾಗಿರುವ ಸರಗೂರು ತಾಲೂಕಿನ 131 ಜನರಿಗೆ ಶೀಘ್ರ ಪರಿಹಾರ, ಪುನರ್ವಸತಿ ಕಲ್ಪಿಸಬೇಕು, ಸರಗೂರು ತಾಲೂಕಿನ 28 ಜನರಿಗೆ ಮಾಶಾಸನ ಕೊಡಿಸಿಕೊಡಬೇಕು, 2015ನೇ ಸಾಲಿನಲ್ಲಿ ಬಿಡುಗಡೆ ಹೊಂದಿರುವ ಸರಗೂರು ತಾಲೂಕಿನ 15 ಜನರಿಗೆ ತಾತ್ಕಾಲಿಕ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಗ್ರೇಟ್ 2 ತಹಸೀಲ್ದಾರ್ ಪರಶಿವಮೂರ್ತಿ ಅವರಿಗೆ ಸಲ್ಲಿಸಲಾಯಿತು.
ಒಕ್ಕೂಟದ ತಾಲೂಕು ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷರಾದ ಸವಿತಾ ದೇವಲಾಪುರ , ತಾಲೂಕು ಸಂಚಾಲಕ ಶಿವರಾಜು, ಹೋಬಳಿ ಸಂಚಾಲಕ ನಟರಾಜು, ಶ್ರೀನಿವಾಸ, ಒಕ್ಕೂಟದ ಮುಖಂಡರಾದ  ಮೊಳೆಯೂರು ಕಾವಲ್ ನಾಗೇಂದ್ರ, ಪುಟ್ಟರಾಚಯ್ಯ ಕೊತ್ತೇಗಾಲ, ಮಂಜು ಕೊತ್ತೇಗಾಲ, ನಿಂಗರಾಜನಾಯಕ, ನಿಂಗಯ್ಯ, ಸುನಂದಾ, ನಾರಾಯಣ ನಾಯಕ, ಸವಿತಾ, ದಸಂಸ (ಅಂಬೇಡ್ಕರ್ ವಾದ) ತಾ ಸಂಚಾಲಕ ಕೂಡಗಿ ಗೋವಿಂದರಾಜು ಇತರರು ಇದ್ದರು.