ವಿ.ಎಸ್.ಉಗ್ರಪ್ಪ 
ಮೈಸೂರು

ಆಯೋಧ್ಯೆಯ ಶ್ರೀರಾಮಮಂದಿರದ ಹುಂಡಿಹಗರಣ ಸಿಬಿಐ ವಿಚಾರಣೆ ನಡೆಯಲಿ: ವಿ.ಎಸ್.ಉಗ್ರಪ್ಪ

ಪ್ರಮುಖ ಮುಖ್ಯಾಂಶಗಳು

  • ಹುಂಡಿ ಹಣ ಕಳವು ಪ್ರಕರಣದಲ್ಲಿ ದೇಶದ ಘನತೆಗೆ ಕುಂದುಂಟಾಗಿದೆ
  • ಕೇವಲ ಹಣ ಎಣಿಕೆ ಮಾಡುವವರನ್ನು ಬಂಧಿಸದೆ ಟ್ರಸ್ಟಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು
ಮೈಸೂರು:ಅಯೋಧ್ಯೆಯ ಶ್ರೀರಾಮ ಮಂದಿರ ಹುಂಡಿ ಹಣ ಕಳವು ಪ್ರಕರಣದ ತನಿಖೆಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ನಡೆಸಬೇಕು. ಅಲ್ಲದೆ ವಿಚಾರಣೆಯನ್ನು ಸಿಬಿಐಗೆ ವಹಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.
ಶ್ರೀರಾಮಚಂದ್ರ ಎಂದರೆ ಈ ದೇಶದ ಅಸ್ಮಿತೆ. ಈ ದೇಶದ ಸ್ವಾಭಿಮಾನ, ಸಾಮರಸ್ಯದ ಸಂಕೇತ. ಇಂತಹ ರಾಮನ ದೇವಸ್ಥಾನವನ್ನು ಲೂಟಿ ಮಾಡಲು ಆಧುನಿಕ ಆಲಿಬಾಬ ಮತ್ತು 40 ಕಳ್ಳರನ್ನು ಕಂಡಂತೆ ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಕೇವಲ ಹಣ ಏಣಿಕೆ ಮಾಡುವ 8 ಮಂದಿಯನ್ನು ಎಸ್‌ಐಟಿಯಿಂದ ಬಂಧಿಸಿ, 11 ಜನ ಟ್ರಸ್ಟಿಗಳನ್ನು ಮುಟ್ಟದೆ ಇರುವುದರಿಂದ ಈ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಹುಂಡಿ ಹಣ ಕಳವು ಪ್ರಕರಣದಲ್ಲಿ ದೇಶದ ಘನತೆಗೆ ಕುಂದುಂಟಾಗಿದೆ. ಹಾಗಾಗಿ ದೇಶದ ಘನತೆಯನ್ನು ಎತ್ತಿ ಹಿಡಿಯಲು ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಬೇಕು. ಅಲ್ಲದೆ ಸುಪ್ರೀಂ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು, ಆರ್‌ಎಸ್‌ಎಸ್‌ನ ಸಹ ಸಂಚಾಲಕರು, ವಿಶ್ವ ಹಿಂದೂ ಪರಿಷತ್‌ನವರೂ ಸಹ ಬಾಯಿ ಬಿಡುತ್ತಿಲ್ಲ ಎಂದು ಆರೋಪಿಸಿದರು.
ಈ ಹುಂಡಿ ಹಣ ಲೂಟಿಯಿಂದ ರಾಮನ ಬಗ್ಗೆ ಗೌರವ ಇಟ್ಟುಕೊಂಡಿರುವಂತಹ ಸಮಸ್ತ ಜನತೆಗೆ ಆಘಾತವಾಗಿದೆ. ಇಡೀ ವಿಶ್ವದಲ್ಲಿ ರಾಮ ಹಾಗೂ ಕೃಷ್ಣನ ಬಗ್ಗೆ ಪೂಜ್ಯ ಭಾವನೆ ಇದೆ. ನಮ್ಮ ದೇಶದ ರಾಮಾಯಣ ಮತ್ತು ಮಹಾಭಾರತದ ಬಗ್ಗೆ ನೋಡುತ್ತಿದ್ದಾರೆ. ಇಂದು ಈ ದೇವಸ್ಥಾನದಲ್ಲೇ ಲೂಟಿ ಆಗಿದೆ ಎಂದು ತಿಳಿದ ಮೇಲೆ ಪ್ರಪಂಚ ನಮ್ಮ ಬಗ್ಗೆ ಏನೆಂದು ತಿಳಿದುಕೊಳ್ಳಬಹುದು. ಈ ಲೂಟಿಯಿಂದ ರಾಮಾಯಣ ಹಾಗೂ ರಾಮನಿಗೆ, ಆತನ ವಿಚಾರ, ದೇಶಕ್ಕೆ ಅಪಚಾರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆಧುನಿಕ ರಾಮಭಕ್ತರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಆರ್‌ಎಸ್‌ಎಸ್‌ನ ಪ್ರಮುಖರು, ಸರಸಂಚಾಲಕರು ಹಾಗೂ ವಿಶ್ವ ಹಿಂದೂ ಪರಿಷತ್‌ನ ಪ್ರಮುಖರು ಸೇರಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಾಪಿಸಿದರು. ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಗಳು ಟ್ರಸ್ಟಿಗಳಾಗಿದ್ದಾರೆ. ಆದರೆ ಈಗ ಹುಂಡಿ ಕಳ್ಳತನದ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ನಂಜುಂಡಸ್ವಾಮಿ, ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ, ಮುಖಂಡರಾದ ಕೆ.ಮಹೇಶ್, ಮಹಾದೇವ್, ಜಾಕೀರ್ ಪಾಷಾ ಇತರರು ಇದ್ದರು.