ಕಣಗಾಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಡಿ.ಕೆ.ನಟೇಶ್ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರ ವಿತರಣೆ ಮಾಡಿದರು.  
ಮೈಸೂರು

ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ನಗದು ಬಹುಮಾನ

ಪ್ರಮುಖ ಮುಖ್ಯಾಂಶಗಳು

  • ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಡಿ.ಕೆ.ನಟೇಶ್ ಘೋಷಣೆ
ಬೆಟ್ಟದಪುರ: ಕಣಗಾಲು ಗ್ರಾಮದ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಐದು ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ಕಣಗಾಲು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಡಿ.ಕೆ.ನಟೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಸರಸ್ಪತಿ ಪೂಜೆ ಹಾಗೂ ಪರೀಕ್ಷೆ ಪ್ರವೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳು ದೂರದ ಊರಿನ ಕಾಲೇಜುಗಳಿಗೆ ಸೇರದೆ, ಇದೇ ಕಾಲೇಜಿಗೆ ದಾಖಲಾಗಬೇಕು. ಕಣಗಾಲು ಕಾಲೇಜುಗೆ ಹಲವಾರು ವರ್ಷಗಳಿಂದ ತನ್ನದೇ ಹೆಸರು ಇದೆ. ಈ ಭಾಗದ ವಿದ್ಯಾರ್ಥಿಗಳು ಇಲ್ಲಿಯೇ ವಿದ್ಯಾಭ್ಯಾಸ ಮಾಡುವ ಮೂಲಕ ಕಾಲೇಜನ್ನು ಬೆಳೆಸಬೇಕು. ಅಲ್ಲದೆ, ಸಿಗುವಂತಹ ಸವಲತ್ತುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ, ಕಾಲೇಜಿಗೆ ಫಲಿತಾಂಶವನ್ನು ತರುವ ನಿಟ್ಟಿನಲ್ಲಿ ಓದಿರಿ. ಪರೀಕ್ಷೆ ಸಂದರ್ಭದಲ್ಲಿ ಯಾವುದೇ ಭಯ ಪಡದೆ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕು. ಧೈರ್ಯದಿಂದ ಪರೀಕ್ಷೆ ಬರೆಯಿರಿ ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸೈಯದ್, ಪ್ರಾಂಶುಪಾಲ ಮಹೇಶ್ ಇತರರು ಇದ್ದರು.