ಮುದ್ದೇಗೌಡನಹುಂಡಿ ಗ್ರಾಮದ ರಾಮು ಅಪಹರಣ ಪ್ರಕರಣದ ಕುರಿತು ಮಾಹಿತಿ ಪಡೆಯುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ ತಂಡ 
ಮೈಸೂರು

ಮೈಸೂರಿನಲ್ಲಿ ಉದ್ಯಮಿ ಅಪಹರಣ : 16 ಲಕ್ಷ ರೂ. ದೋಚಿದ ಅಪಹರಣಕಾರರು

ಮೈಸೂರು: ವರುಣ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇಗೌಡನಹುಂಡಿ ಗ್ರಾಮದಲ್ಲಿ ಗುತ್ತಿಗೆದಾರರೊಬ್ಬರನ್ನು ಗುಂಪೊಂದು ಕಾರಿನಲ್ಲಿ ಅಪ ಹರಿಸಿ 16 ಲಕ್ಷ ರೂ. ನಗದು ಹಾಗೂ 30 ಗ್ರಾಂ.ಚಿನ್ನ ಪಡೆದು ಬಿಡುಗಡೆ ಮಾಡಿದ್ದಾರೆ.
ಮುದ್ದೇಗೌಡನಹುಂಡಿ ಗ್ರಾಮದ ರಾಮು ಎಂಬುವರೇ ಅಪಹರಣಕ್ಕೊಳಗಾದವರು. ಇವರು ಜುಲೈ 15ರ ರಾತ್ರಿ ತಮ್ಮ ತೋಟದ ಮನೆಯಿಂದ ಮನೆಗೆ ಸ್ಕೂಟರ್‌ನಲ್ಲಿ ಹೊರಟಿದ್ದ ಸಂದರ್ಭದಲ್ಲಿ ತಿರುವಿನ ರಸ್ತೆಯಲ್ಲಿ ನಿಂತಿದ್ದ ನಾಲ್ವರು ರಾಮು ಅವರನ್ನು ಅಡ್ಡಗಟ್ಟಿ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು. ಬಳಿಕ ಇವರನ್ನು ತೋಟದ ಮನೆಯಲ್ಲಿ ಕೂಡಿ ಹಾಕಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.
40 ಲಕ್ಷ ರೂ.ಗೆ ಡಿಮಾಂಡ್: ಕೂಡಲೇ 40 ಲಕ್ಷ ರೂ.ನೀಡಬೇಕು, ಇಲ್ಲವಾದಲ್ಲಿ ಹತ್ಯೆ ಮಾಡಲಾಗುವುದು ಎಂದು ಅಪಹರಣಕಾರರು ಎಚ್ಚರಿಕೆ ನೀಡಿದ್ದರು. ರಾತ್ರಿಪೂರ ಅಪಹರಣಕಾರರು ಹಣಕೋಸ್ಕರ ಬೇಡಿಕೆ ಇಟ್ಟರು. ಅಷ್ಟೊಂದು ಹಣ ನನ್ನ ಬಳಿ ಇಲ್ಲ ಎಂದು ರಾಮು ಮನವರಿಕೆ ಮಾಡಿಕೊಟ್ಟ ನಂತರ ಅಂತಿಮವಾಗಿ 16 ಲಕ್ಷ ರೂ. ಪಡೆಯಲು ಅಪಹರಣಕಾರರು ಒಪ್ಪಿದರು.
ಜು.16 ರಂದು ರಂದು ಬೆಳಗ್ಗೆ ಅಪಹರಣಕಾರರು ರಾಮು ಅವರ ಮೊಬೈಲ್ ಬಳಕೆ ಮಾಡಿಕೊಂಡು ಅವರ ಪತ್ನಿಗೆ ಕರೆ ಮಾಡಿ ಹಣ ಕ್ಕೆ ಬೇಡಿಕೆ ಇಟ್ಟಿದ್ದಾರೆ. ನಂತರ ರಾಮು ಪತ್ನಿಯು ಬಾಮೈದನ ಕೈಯಲ್ಲಿ ಹಣ ಕೊಟ್ಟು ಕಳುಹಿಸಿದ್ದಾರೆ. ಈ ಹಣವನ್ನು ಬಾಮೈದ ಸುತ್ತೂರು ಬಳಿಯ ಪ್ರದೇಶವೊಂದರಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ನೀಡಿದ್ದಾರೆ. ಹಣ ದೊರೆತ ಒಂದು ಗಂಟೆಯ ನಂತರ ಅಪಹರಣಕಾರರು ರಾಮುವನ್ನು ತಾವು ಅಪಹರಿಸಿದ ಜಾಗದ ಬಳಿಯಲ್ಲಿಯೇ ಬಿಟ್ಟು ಹೋಗಿದ್ದಾರೆ. ನಂತರ ರಾಮು ಅವರು ವರುಣ ಪೊಲೀಸ್ ಠಾಣೆಗೆ ದೂರು ನೀಡಿದರು. ಪ್ರಕರಣ ದಾಖಲಾದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿ ಕಲೆ ಹಾಕಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ತನಿಖೆಗೆ ಮೂರು ತಂಡ ರಚನೆ: ಅಪಹರಣ ಪ್ರಕರಣದ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಗ್ರಾಮಾಂತರ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿದ್ದಾರೆ. ಈ ತಂಡವು ಅಪಹರಣಕ್ಕೆ ಒಳಗಾದ ರಾಮು ಹಾಗೂ ನಂತರ ನಡೆದ ಬೆಳವಣಿಗೆಯನ್ನು ಮುಂದಿಟ್ಟುಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ರಾಮು ಅವರನ್ನು ನಾಲ್ವರು ಅಪಹರಣ ಮಾಡಿದ್ದರು. ಒಬ್ಬ ವ್ಯಕ್ತಿ ಹಣವನ್ನು ಸ್ವೀಕಾರ ಮಾಡಿದ್ದಾನೆ. ಈ ವ್ಯಕ್ತಿ ನಾಲ್ವರಲ್ಲಿ ಒಬ್ಬನೋ ಅಥವಾ ಐದನೇ ವ್ಯಕ್ತಿಯೋ ಎಂಬುದು ದೃಢವಾಗಿಲ್ಲ, ಈ ಕುರಿತು ತನಿಖೆ ನಡೆಯುತ್ತಿದೆ. ರಾಮು ಅವರನ್ನು ಒಂದು ಫಾರ್ಮ್ ಹೌಸ್‌ಗೆ ಕರೆದೊಯ್ಯಲಾಗಿತ್ತು. ಆ ಫಾರ್ಮ್ ಹೌಸ್‌ನಲ್ಲಿ ಈ ನಾಲ್ವರು ಆರೋಪಿಗಳು ಅಲ್ಲದೆ ಮತ್ತೆ ಇಬ್ಬರು ಇದ್ದರು. ಪ್ರಕರಣದಲ್ಲಿ 6ಕ್ಕೂ ಹೆಚ್ಚು ಜನರು ಭಾಗಿಯಾಗಿರುವ ಸಾಧ್ಯತೆ ಇದೆ.
ಅಪರಿಚಿತರಿಂದ ಅಪಹರಣ: ಅಪಹರಣಕಾರರು ಹಾಗೂ ರಾಮು ಅವರಿಗೆ ಯಾವುದೇ ಪರಿಚಯ ಇಲ್ಲ. ರಾಮು ಅವರ ಬಳಿ ಸಾಕಷ್ಟು ಹಣ ಇದೆ ಎಂಬುದನ್ನು ಅರಿತು ಇವರು ಅಪಹರಣ ನಡೆಸಿದ್ದಾರೆ. ಯಾರ ಮೇಲೂ ರಾಮು ಅವರಿಗೆ ಸಂಶಯವಿಲ್ಲ. ಹಣದ ಆಸೆಗೆ ಗುಂಪೊಂದು ಅಪಹರಣ ನಡೆಸಿದೆಯೇ ಅಥವಾ ಯಾರಾದರು ಸುಫಾರಿ ನೀಡಿ ಅಪಹರಣ ಮಾಡಿಸಿದರೇ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ. ಅಪಹಾರಣ ಕಾರರು ಸುಫಾರಿ ವಿಚಾರವನ್ನು ಸಹ ಮಾತನಾಡಿದ್ದಾರೆ. ಇದು ಅಪಹರಣಕಾರರು ತನಿಖೆಯ ದಿಕ್ಕು ತಪ್ಪಿಸಲು ಆಡಿದ ಮಾತೇ ಅಥವಾ ಆ ಮಾತಿನಲ್ಲಿ ಸತ್ಯಾಂಶ ಇದೆಯೇ ಎಂಬ ಕುರಿತು ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಮು ಬಳಿ ಸಾಕಷ್ಟು ಹಣ ಇದೆ ಎಂಬ ವಿಚಾರ ಅರಿತವರು ಅಪಹರಣ ಮಾಡಿದ್ದಾರೆ.
ಗುತ್ತಿಗೆದಾರ ರಾಮು ಅವರ ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆರೋಪಿಗಳ ಪತ್ತೆಗೆ ಮೂರು ತಂಡ ಗಳನ್ನು ರಚಿಸಲಾಗಿದೆ. ಈಗಾಗಲೇ ವಿವಿಧ ಆಯಾಮಗಳಿಂದ ತನಿಖೆ ನಡೆಯುತ್ತಿದೆ. ರಾಮು ಅವರಿಗೆ ಪರಿಚಯ ಇರುವ ಸ್ಥಳೀಯರು ಅಪಹರಣ ಮಾಡಿರುವ ಸಾಧ್ಯತೆ ಇದೆ. ಆದಷ್ಟು ಬೇಗನೇ ಆರೋಪಿಗಳನ್ನು ಪತ್ತೆ ಮಾಡಲಾಗುವುದು.
ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ