ನಂಜನಗೂಡಿನ ಕಲ್ಯಾಣ ಮಂಟಪದಲ್ಲಿ ಸಿಕ್ಕಿದ ಚಿನ್ನದ ಮಾಂಗಲ್ಯ ಸರ ಸೇರಿದಂತೆ ದಾಖಲೆಗಳ ಪರ್ಸ್‌ಅನ್ನು ಮಹದೇವಮ್ಮ ಅವರ ಪುತ್ರನಿಗೆ ಉದ್ಯಮಿ ಚಿನ್ನಪ್ಪ ನೀಡಿದರು.
- ನಂಜನಗೂಡಿನಲ್ಲಿ ಕಳೆದುಕೊಂಡಿದ್ದ ಮಹಿಳೆ
ನಂಜನಗೂಡು: ನಗರದ ಕಲ್ಯಾಣ ಮಂಟಪದ ಆವರಣದಲ್ಲಿ ಸಿಕ್ಕಿದ ಪರ್ಸ್ ಅನ್ನು ಉದ್ಯಮಿಯೊಬ್ಬರು ವಾರಸುದಾರ ಮಹಿಳೆಯನ್ನು ಪತ್ತೆ ಹಚ್ಚಿ ಅವರಿಗೆ ತಲುಪಿಸಿದ್ದಾರೆ.
ನಗರದ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಂಬಂಧಿಕರ ಮದುವೆ ಮುಗಿಸಿಕೊಂಡು ಎಚ್.ಡಿ.ಕೋಟೆ ಇಂದಿರಾನಗರದ ನಿವಾಸಿ ಮಹದೇವಮ್ಮ ಅವರು ಕಲ್ಯಾಣ ಮಂಟಪದ ಆವರಣದಲ್ಲಿ ನಿಲ್ಲಿಸಿದ್ದ ಬಸ್ ಹತ್ತುವಾಗ ತನ್ನ ಕರವಸ್ತ್ರದಲ್ಲಿ ಸುತ್ತಿಕೊಂಡಿದ್ದ ಪರ್ಸ್ ಬಿಟ್ಟು ಬಸ್ ಏರಿ ಊರಿಗೆ ಹೋಗಿದ್ದರು.
ಇದೇ ಮದುವೆಗೆ ಆಗಮಿಸಿದ್ದ ನಗರದ ಕಾಮಧೇನು ಎಂಟರ್‌ಪ್ರೈಸಸ್‌ನ ಉದ್ಯಮಿ ಚಿನ್ನಪ್ಪ ಅವರು ಆವರಣದಲ್ಲಿ ಬಿದ್ದಿದ್ದ ಕರವಸ್ತ್ರ ಸುತ್ತಿದ ಪರ್ಸ್ ಗಮನಿಸಿ ಅದನ್ನು ತೆಗೆದು ನೋಡಿದಾಗ ಅದರಲ್ಲಿ ಚಿನ್ನದ ಮಾಂಗಲ್ಯ ಸರ ಹಾಗೂ ಸ್ವಲ್ಪ ಹಣ ಇತ್ತು. ಜತೆಗೆ ಕೆಲವು ರಸೀದಿಗಳು, ವಿಳಾಸ ಇತ್ತು. ಚಿನ್ನಪ್ಪ ಅವರು ಮೊಬೈಲ್‌ನಲ್ಲಿ ಸಂಪರ್ಕಿಸಿದಾಗ ಪರ್ಸ್ ಕಳೆದುಕೊಂಡಿದ್ದ ಮಹದೇವಮ್ಮ ಅವರ ಮಗ ಬಂದು ತೆಗೆದುಕೊಂಡು ಹೋದರು. ಚಿನ್ನದ ಮಾಂಗಲ್ಯ ಸರ ಸೇರಿದಂತೆ ಹಲವು ದಾಖಲಾತಿಗಳು ಇದ್ದವು. ಪ್ರಾಮಾಣಿಕವಾಗಿ ಪರ್ಸ್ ಹಿಂದಿರುಗಿಸಿದ ಚಿನ್ನಪ್ಪ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.