ಎಚ್.ಡಿ.ಕೋಟೆ ಪಟ್ಟಣದ ಜೂನಿಯರ್ ಕಾಲೇಜ್ ಆವರಣದಲ್ಲಿ ತಾಲೂಕು ಆದಿಕರ್ನಾಟಕ ಮಹಾಸಭ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಅಂಗವಾಗಿ ಮೆರವಣಿಗೆ ನಡೆಸಲಾಯಿತು.
ಎಚ್.ಡಿ. ಕೋಟೆ : ಬೌದ್ಧ ಧರ್ಮದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಡಾ. ಅಂಬೇಡ್ಕರ್ ಅವರ ಮೊಮ್ಮಗ ಹಾಗೂ ರಾಷ್ಟ್ರೀಯ ಬೌದ್ಧ ಮಹಾಸಭಾ ಅಧ್ಯಕ್ಷ ಭೀಮರಾವ್ ಯಶವಂತರಾವ್ ಅಂಬೇಡ್ಕರ್ ಹೇಳಿದರು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಎಚ್.ಡಿ. ಕೋಟೆ ತಾಲೂಕು ಆದಿ ಕರ್ನಾಟಕ ಮಹಾಸಭಾ ವತಿಯಿಂದ ಆಯೋಜಿಸಿದ್ದ 2570ನೇ ಗೌತಮ ಬುದ್ಧ ಜಯಂತಿ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮಾತ್ರವಲ್ಲದೆ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ, ಸಾಮಾಜಿಕ ನ್ಯಾಯ ಮತ್ತು ಸಹಬಾಳ್ವೆಗೆ ಅವಕಾಶ ನೀಡಲಾಗಿದೆ.
ಇದನ್ನು ಬಳಸಿಕೊಂಡು ದೇಶದ ಭವಿಷ್ಯ ರೂಪಿಸಬೇಕು ಎಂದರು.
ಬನವಾಡಿಯಲ್ಲಿ ನಿರ್ಮಾಣವಾಗುವ ಬೌದ್ಧ ವಿಹಾರದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ದೊರೆಯುವ ವ್ಯವಸ್ಥೆ ಕಲ್ಪಿಸಲಾಗುವುದು. ಪಾಲಕರು ತಮ್ಮ ಮಕ್ಕಳನ್ನು ಅಲ್ಲಿಗೆ ದಾಖಲಿಸಿ ಜ್ಞಾನಾರ್ಜನೆಗೆ ಅನುವು ಮಾಡಿಕೊಡಬೇಕು ಎಂದರು. ಸಮಾಜದ ಎಲ್ಲ ವರ್ಗದ ಜನರನ್ನೂ ಮುಖ್ಯವಾಹಿನಿಗೆ ತಂದು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸಹಬಾಳ್ವೆಯನ್ನು ಸ್ಥಾಪಿಸುವ ಮಹತ್ತರ ಉದ್ದೇಶವು ಸಂವಿಧಾನಕ್ಕೆ ಇದೆ.
ಸ್ವಾತಂತ್ರ್ಯಾನಂತರ ಉತ್ತರ ಭಾರತದ ಪ್ರಮುಖ ನದಿಗಳನ್ನು ದಕ್ಷಿಣ ಭಾರತದ ನದಿಗಳೊಂದಿಗೆ ಸಂಪರ್ಕಿಸುವ ಮಹತ್ವಾಕಾಂಕ್ಷೆಯ ಕನಸನ್ನೂ ಅಂಬೇಡ್ಕರ್ ಹೊಂದಿದ್ದರು ಎಂದು ತಿಳಿಸಿದರು.
ಚಾಮರಾಜನಗರದ ನಳಂದ ವಿವಿವಿಯ ಬಂತೆ ಬೋಧಿದತ್ತ ಮಾತನಾಡಿ, ಡಾ. ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತವಾಗಿ ಬದುಕುವ ಮಾರ್ಗವನ್ನು ತೋರಿದ್ದಾರೆಂದರು.
ಬನವಾಡಿ ಗ್ರಾಮದಲ್ಲಿ 75 ಎಕರೆ ಜಾಗದಲ್ಲಿ ನಿರ್ಮಾಣವಾಗಲಿರುವ ಬೌದ್ಧ ವಿಹಾರವು ಪ್ರಮುಖ ಧಾರ್ಮಿಕ ಕೇಂದ್ರವಾಗಲಿದೆ. ಶಿಕ್ಷಣ ಮತ್ತು ಸಾಮಾಜಿಕ ಪರಿವರ್ತನೆಯ ಸ್ಥಾನವಾಗಲಿದೆ ಎಂದು ತಿಳಿಸಿದರು.
ಅಂತರಸಂತೆ ಬಂತೆ ಗೌತಮಿ, ಕಲ್ಯಾಣ ಬಂತೆ, ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಶಾಸಕ ಅನಿಲ್ ಚಿಕ್ಕಮಾದು, ಆದಿ ಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಎಚ್.ಡಿ. ಶಿವರಾಜು, ಮಲ್ಲಿಕಾರ್ಜುನ ಮಲ್ಲಯ್ಯ, ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಸಿದ್ದರಾಜು, ಭೀಮನಹಳ್ಳಿ ಸೋಮೇಶ್, ಸಂದೀಪ್, ಪುಟ್ಟಮ್ಮಣಿ, ಜಯಪ್ರಕಾಶ್ ಚಿಕ್ಕಣ್ಣ, ಕೆ. ಕೃಷ್ಣನಾಯಕ, ಎಚ್.ಸಿ. ನರಸಿಂಹಮೂರ್ತಿ, ಮುದ್ದುಮಲ್ಲಯ್ಯ ಇತರರು ಇದ್ದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಇದೇ ಸಂದರ್ಭ ಅಭಿನಂದಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ್ ಭವನದಿಂದ ಮೆರವಣಿಗೆ ಹೊರಟು ಅಂಬೇಡ್ಕರ್ ಪ್ರತಿಮೆಯನ್ನು ಬೆಳ್ಳಿ ರಥದಲ್ಲಿಟ್ಟು ಜಾನಪದ ಕಲಾ ತಂಡಗಳೊಂದಿಗೆ ಜೂನಿಯರ್ ಮೈದಾನದ ವರಗೆ ಮೆರವಣಿಗೆ ಮಾಡಲಾಯಿತು.