ಬೆಟ್ಟದಪುರ ಸಮೀಪದ ಕಣಗಾಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಅಭಿನಂದನೆ ಸಲ್ಲಿಸಲಾಯಿತು. ಪ್ರಾಂಶುಪಾಲ ಮಹೇಶ್, ಹಿರಿಯ ಉಪನ್ಯಾಸಕ ಕೃಷ್ಣಮೂರ್ತಿ, ಉಪನ್ಯಾಸಕ ಸಂತೋಷ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಡಿ.ಕೆ ನಟೇಶ್ ಇತರರು ಇದ್ದರು.
ಬೆಟ್ಟದಪುರ: ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ನಿರಂತರ ಪರಿಶ್ರಮ ನಡೆಸಿದರೆ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕಣಗಾಲು ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಡಿ.ಕೆ .ನಟೇಶ್ ಹೇಳಿದರು.
ಬೆಟ್ಟದಪುರ ಸಮೀಪದ ಕಣಗಾಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದರಿಂದ ಇತರ ವಿದ್ಯಾರ್ಥಿಗಳಿಗೂ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ನಟೇಶ್ ಅವರು 5 ಸಾವಿರ ರೂ. ನಗದು ಬಹುಮಾನ ವಿತರಿಸಿದರು. ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಏಳು ವಿದ್ಯಾರ್ಥಿಗಳಿಗೆ ಸೇನಾಪಡೆ ಯೋಧ
ಲೋಕೇಶ್ ಕಣಗಾಲು ಟೇಬಲ್ ಲ್ಯಾಂಪ್‌ಗಳನ್ನು ನೀಡಿ ಅಭಿನಂದಿಸಿದರು. ಮತ್ತೊಬ್ಬ ಸೈನಿಕ ರಾಜೇಶ್ ರಾಜನಬಿಳಗುಲಿ ಅವರು 7 ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಪ್ರಭಾಕರಶೆಟ್ಟಿ, ಹರೀಶ್, ಸೈಯದ್ ಮಾಸ್ಟರ್, ಮಹದೇವ, ರಾಜೇಶ್,
ಲೀಲಾವತಿ, ಪ್ರಾಂಶುಪಾಲ ಮಹೇಶ್, ಹಿರಿಯ ಉಪನ್ಯಾಸಕ ಕೃಷ್ಣಮೂರ್ತಿ, ಉಪನ್ಯಾಸಕ ಸಂತೋಷ್, ಬೋಧಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಇದ್ದರು.