ಬೆಟ್ಟದಪುರ ಸಮೀಪದ ಹರದೂರಿನಲ್ಲಿ ಶ್ರೀ ದೊಡ್ಡಮ್ಮ ತಾಯಿಯ ರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹರದೂರು ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ದೊಡ್ಡಮ್ಮ ತಾಯಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೈವಶಕ್ತಿಯಿಂದ ನೆರವೇರಿತು.
ಗ್ರಾಮದಲ್ಲಿ ದೇವಿಯ ರಥೋತ್ಸವ ಹಿನ್ನೆಲೆ ಸಕಲ ಸಿದ್ಧತೆ ಮಾಡಿಕೊಳ್ಳಲಾಯಿತು. ಬೆಳಗ್ಗೆ ರಥದ ಮೇಲೆ ಕಲಶ ಪ್ರತಿಷ್ಠಾಪನೆ ಮಾಡಲಾಯಿತು. ಇದಲ್ಲದೆ ಕಳೆದ ಒಂದು ತಿಂಗಳಿಂದ ವಿವಿಧ ಪೂಜೆಗಳನ್ನು ನೆರವೇರಿಸುವ ಮೂಲಕ ಹಬ್ಬಕ್ಕೆ ಬೇಕಾದ ದೇವಿಯ ಅನುಗ್ರಹ ಪಡೆದುಕೊಳ್ಳಲಾಯಿತು. ರಾತ್ರಿ ಸಲ್ಲುವ ಶುಭಲಗ್ನದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ದೇಗುಲದಿಂದ ಪಲ್ಲಕ್ಕಿ ಉತ್ಸವ ಮೇಲೆ ತಂದು, ರಥದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ರಥದ ಮೇಲೆ ದೇವಿಯ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ, ಗ್ರಾಮದ ಮುಖ್ಯರಸ್ತೆಯಲ್ಲಿ ರಥವನ್ನು ಎಳೆಯುವ ಮೂಲಕ ಭಕ್ತರು ಭಕ್ತಿಯನ್ನು ಸಮರ್ಪಣೆ ಮಾಡಿದರು.
ರಥೋತ್ಸವ ಸಂದರ್ಭ ದೇವಿಗೆ ಜೈಕಾರವನ್ನು ಕೂಗುವ ಹಾಗೂ ವಿವಿಧ ರೀತಿಯಲ್ಲಿ ಹರಕೆಯನ್ನು ತಿಳಿಸುವ ಮೂಲಕ ಪೂಜೆ ಸಲ್ಲಿಸಿದರು. ಇನ್ನಾ ಗ್ರಾಮದ ಯುವ ಸಮೂಹ ಸಂಪ್ರದಾಯಿಕ ತಮಟೆಗೆ ಹಾಗೂ ಡಿಜೆ ಸದ್ದಿಗೆ ಕುಣಿಯುವ ಮೂಲಕ ಸಂಭ್ರಮಿಸಿದರು. ಇದೇ ವೇಳೆ ದೂರದ ಗ್ರಾಮಗಳಿಂದ ಆಗಮಿಸಿದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ಹಬ್ಬದ ಹಿನ್ನೆಲೆ ಗ್ರಾಮದ ಪ್ರಮುಖ ಬೀದಿಗಳು, ಮುಖ್ಯರಸ್ತೆ, ದೇಗುಲಗಳು ದೀಪಲಂಕಾರಗಳಿಂದ ಕಂಗೊಳಿಸುತ್ತಿತ್ತು.