ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ
- ಪಿತ್ರಾರ್ಜಿತ ಆಸ್ತಿ ಉಳಿಸಿಕೊಳ್ಳಲು ಸೋದರ ಅಳಿಯನ ಕೊಲೆಗೆ 37 ಲಕ್ಷ ರೂ. ಸುಪಾರಿ ನೀಡಿದ್ದ
- ಆಸ್ತಿಯಲ್ಲಿ ಪಾಲು ಕೊಡಲು ಒಪ್ಪದ ಮಾವ ತಗಾದೆ ತೆಗೆದಿದ್ದ
ಮೈಸೂರು:ಆಸ್ತಿ ವಿವಾದದ ಹಿನ್ನಲೆಯಲ್ಲಿ ಸೋದರ ಮಾವನೇ ಅಳಿಯನ ಕೊಲೆಗೆ ಸುಪಾರಿ ನೀಡಿದ್ದು, ಎರಡು ಬಾರಿಗೆ ಹತ್ಯೆಗೆ ಮುಂದಾಗಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಪಿತ್ರಾರ್ಜಿತ ಆಸ್ತಿ ಉಳಿಸಿಕೊಳ್ಳಲು ಸೋದರ ಅಳಿಯನ ಕೊಲೆಗೆ 37 ಲಕ್ಷ ರೂ. ಸುಪಾರಿ ನೀಡಿದ್ದ ಸೋದರ ಮಾವ ಹಾಗೂ ಕೃತ್ಯದಲ್ಲಿ ಪಾಲ್ಗೊಂಡಿದ್ದ ಆರು ಜನರನ್ನು ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಿರಿಯಾಪಟ್ಟಣದ ಬೆಟ್ಟದಪುರದ ರಾಜು ಅಲಿಯಸ್ ಸೌದೆ ರಾಜು, ಸಹಕಾರ ನೀಡಿದ್ದ ಸುಳ್ಯ ತಾಲೂಕಿನ ಕೆ.ಪಿ.ಶಫಿ, ಪಿರಿಯಾಪಟ್ಟಣದ ಮೀರ್‌ಹುಸೇನ್ ಅಲಿ, ಹುಣಸೂರಿನ ನಯಾಜ್ ಅಹ್ಮದ್, ಮೈಸೂರಿನ ಹಬೀದ್ ಪಾಷ, ಅಯಾಜ್ ಪಾಷ, ಅಮೀನುಲ್ಲಾ ಬಂಧಿತರು. ರಾಜು, ಆತನ ತಮ್ಮ ಹಾಗೂ ತಂಗಿ ಮಗ ಪ್ರವೀಣ್‌ಕುಮಾರ್ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದು ಹೇಳಿದರು.
ಮರದ ವ್ಯಾಪಾರಿಯಾಗಿರುವ ಆರೋಪಿ ರಾಜು ಬಳಿ ಇರುವ ಆಸ್ತಿಯಲ್ಲಿ ತಮಗೂ ಪಾಲು ಬರಬೇಕು ಎಂದು ಆತನ ತಂಗಿ ಮಗ ಪ್ರವೀಣ್ಕುಮಾರ್ ತಾಯಿಯ ಪರವಾಗಿ ಕೋರ್ಟ್ ಮೊರೆ ಹೋಗಿದ್ದರು. ಆದರೆ ಆಸ್ತಿಯಲ್ಲಿ ಪಾಲು ಕೊಡಲು ಒಪ್ಪದ ರಾಜು ತಗಾದೆ ತೆಗೆದಿದ್ದ. ಆಸ್ತಿಯನ್ನು ತನ್ನ ಬಳಿಯೇ ಉಳಿಸಿಕೊಳ್ಳಬೇಕಾದರೆ ಆಸ್ತಿ ವಿಚಾರವಾಗಿ ಕ್ಯಾತೆ ತೆಗೆದಿರುವ ಪ್ರವೀಣ್ ಕುಮಾರ್‌ನನ್ನು ಕೊಲೆ ಮಾಡಿದರೆ ಸಾಕು ಎಂದು ನಿರ್ಧರಿಸಿದ ರಾಜು, ವರ್ಷದ ಹಿಂದೆ 7 ಲಕ್ಷ ರೂ. ಸುಪಾರಿ ನೀಡಿ ಸುಳ್ಯದ ಶಫಿಗೆ ಅಪಘಾತದ ಮೂಲಕ ಪ್ರವೀಣ್ ಕುಮಾರ್‌ನನ್ನು ಕೊಲೆ ಮಾಡಲು ಹೇಳಿದ್ದನೆನ್ನಲಾಗಿದೆ. ಆದರೆ ಪ್ರವೀಣ್ ಪ್ರಾಣಾಪಾಯದಿಂದ ಪಾರಾಗಿದ್ದರು. ಪೊಲೀಸರೂಸಹ ಇದನ್ನು ರಸ್ತೆ ಅಪಘಾತವೆಂದೇ ನಂಬಿದ್ದರು ಎಂದು ಹೇಳಿದರು.
ಇದಾದ ಬಳಿಕ ಕಳೆದ ಏ.13 ರಂದು ಪ್ರವೀಣ್ ಕುಮಾರ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು. ಅಷ್ಟರಲ್ಲಿ ಅದೇ ಮಾರ್ಗದಲ್ಲಿ ವಾಹನ ಬಂದ ಪರಿಣಾಮ ದುಷ್ಕರ್ಮಿಗಳು ಪರಾರಿಯಾಗಿದ್ದರು. ಘಟನೆ ಸಂಬಂಧ ಗಾಯಾಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಪೊಲೀಸರು, ಪ್ರವೀಣ್ ಕುಮಾರ್ ಅವರ ಸೋದರ ಮಾವ ಸೌದೆ ರಾಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಏಳು ಲಕ್ಷ ರೂ.ಗೆ ಸುಪಾರಿ ನೀಡಿ ರಸ್ತೆ ಅಪಘಾತದ ಮೂಲಕ ಸಾಯಿಸಲು ಯತ್ನಿಸಿ ವಿಫಲನಾಗಿದ್ದ ಸೌದೆ ರಾಜು, ಮತ್ತೆ ಆಸ್ತಿ ಉಳಿಸಿಕೊಳ್ಳಲೆಂದು 30 ಲಕ್ಷ ರೂ. ನೀಡಿ ಮೈಸೂರಿನ ರೌಡಿ ಶೀಟರ್‌ಗಳನ್ನು ಸಂಪರ್ಕಿಸಿ ಕೊಲೆಗೆ ಮಾಸ್ಟರ್‌ಪ್ಲಾನ್ ಮಾಡಿದ್ದ. ಆದರೆ ಎರಡನೇ ಪ್ರಯತ್ನದಲ್ಲಿಯೂ ಸಹ ವಿಫಲನಾಗುವ ಮೂಲಕ ಜೈಲು ಪಾಲಾಗಿದ್ದಾನೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಳಿಕ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಪಿರಿಯಾಪಟ್ಟಣ ಠಾಣೆ ಇನ್‌ಸ್ಪೆಕ್ಟರ್ ಎಂ.ವಿ.ಗೋವಿಂದ ರಾಜು, ಎಸ್‌ಐಗಳಾದ ಬಿ.ಎಚ್.ಜಗದೀಶ್, ಬೈಲಕುಪ್ಪೆ ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಕೆ.ದೀಪಕ್, ಬೆಟ್ಟದಪುರ ಎಸ್‌ಐ ಡಿ.ಎನ್.ಅಜಯ್ ಕುಮಾರ್, ಎಸ್‌ಐ ರವಿಕುಮಾರ್, ಸಿಬ್ಬಂದಿ ಲಿಂಗರಾಜಪ್ಪ, ಕೆ.ಎಚ್.ಮಧುಕುಮಾರ್, ರವೀಶ್, ಪ್ರಭಾಕರ್, ಎನ್.ಟಿ.ಮಹದೇವ, ಬಸವರಾಜು, ರುದ್ರೇಶ್, ಸುರೇಶ್, ಈರಣ್ಣ, ಪುನೀತ್, ಅಣ್ಣಯ್ಯ, ಮೋಹಿನ್ ಯಲಗೊಂಡ, ವಸಂತ್‌ಕುಮಾರ್ ಇತರರು ಇದ್ದರು.