ಸರಗೂರು ತಾಲೂಕಿನ ಚಿಕ್ಕದೇವಮ್ಮ ಬೆಟ್ಟಕ್ಕೆ ಹೋಗುವ ರಸ್ತೆ ಕಬಿನಿ ಬಲದಂಡೆ ನಾಲೆ ಸೇತುವೆ 
ಮೈಸೂರು

ವರ್ಷನ ನಂತರ ಸೇತುವೆ ನಿರ್ಮಾಣಕ್ಕೆ ಮುಹೂರ್ತ

ಎ. ಆರ್. ರಘುರಾಮ

ಸರಗೂರು:

ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಿಕ್ಕದೇವಮ್ಮನ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಕಬಿನಿ ಬಲದಂಡೆ ನಾಲೆಯ ಮೇಲಿನ ಸೇತುವೆ ಕುಸಿದು ಬಿದ್ದು ಒಂದು ವರ್ಷ ಕಳೆದ ನಂತರ ಸರ್ಕಾರ ಹಾಗೂ ಕಬಿನಿ ಜಲಾಶಯದ ಉಪವಿಭಾಗದ ಅಧಿಕಾರಿಗಳು ಸೇತುವೆ ನಿರ್ಮಾಣದತ್ತ ಗಮನಹರಿಸಿರುವುದು ನಾಗರಿಕರಲ್ಲಿ ಸಂತಸ ತಂದಿದೆ.

ಸೇತುವೆ ಕುಸಿದಿದ್ದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿ, ಚಿಕ್ಕದೇವಮ್ಮನ ಬೆಟ್ಟಕ್ಕೆ ತೆರಳುವ ಭಕ್ತರು ಪರ್ಯಾಯ ಮಾರ್ಗ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಶೇಷವಾಗಿ ಜಾತ್ರೆ, ಅಮಾವಾಸ್ಯೆ ಸೇರಿದಂತೆ ಧಾರ್ಮಿಕ ವಿಶೇಷ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಟ್ಟಕ್ಕೆ ಆಗಮಿಸುವುದರಿಂದ ಸಂಪರ್ಕ ಸೇತುವೆಯ ಸಮಸ್ಯೆ ಮತ್ತಷ್ಟು ಗಂಭೀರವಾಗಿತ್ತು.
ಈ ಕುರಿತು ಕಳೆದ ಜುಲೈ 31ರಂದು ವಿಜಯವಾಣಿ ಪತ್ರಿಕೆಯಲ್ಲಿ ‘ಸೇತುವೆ ಕುಸಿದು ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ’ ಎಂಬ ವರದಿ ಪ್ರಕಟವಾಗಿತ್ತು. ವರದಿಯು ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದಿದ್ದು, ಇದೀಗ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ.

ಚಿಕ್ಕದೇವಮ್ಮನ ಬೆಟ್ಟವು ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು, ಸುತ್ತಮುತ್ತಲಿನ ಗ್ರಾಮಗಳು ಮಾತ್ರವಲ್ಲದೆ ವಿವಿಧ ಭಾಗಗಳಿಂದಲೂ ಭಕ್ತರು ಆಗಮಿಸುತ್ತಾರೆ. ಇಂತಹ ಪ್ರಮುಖ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ದೀರ್ಘಕಾಲದಿಂದ ಹಾಳಾಗಿದ್ದರೂ ಕಾಮಗಾರಿ ಆರಂಭವಾಗದಿರುವ ಬಗ್ಗೆ ಸಾರ್ವಜನಿಕರು

ವಿಜಯವಾಣಿ ಪತ್ರಿಕೆ ವರದಿಯಿಂದ ಅಧಿಕಾರಿಗಳ ಗಮನ ಸೆಳೆಯಲು ಸಾಧ್ಯವಾಗಿದ್ದು, ಇದೀಗ ಕಾಮಗಾರಿ ಆರಂಭಿಸಲು ಮುಂದಾಗಿರುವುದು ಸಂತಸ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.

ತ್ವರಿತವಾಗಿ ಪೂರ್ಣಗೊಳಿಸಲು ಆಗ್ರಹ
ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ, ಕಾಮಗಾರಿ ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ತ್ವರಿತವಾಗಿ ಆರಂಭಿಸಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸೇತುವೆ ನಿರ್ಮಾಣದ ಅಗತ್ಯದ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಕಾಮಗಾರಿ ಆರಂಭವಾಗಿರಲಿಲ್ಲ. ಇದೀಗ ವಿಜಯವಾಣಿ ಪತ್ರಿಕೆಯ ವರದಿಯ ನಂತರ ಅಧಿಕಾರಿಗಳು ಸ್ಪಂದಿಸಿ ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ಸಂಗತಿ.ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಿ, ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕು.
ಲಂಕೆ ರಮೇಶ್
ಗ್ರಾಪಂ ಮಾಜಿ ಉಪಾಧ್ಯಕ್ಷ
ಚಿಕ್ಕದೇವಮ್ಮನ ಬೆಟ್ಟವು ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಪ್ರತಿನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಭಕ್ತರ ಸುರಕ್ಷತೆ ಮತ್ತು ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸೇತುವೆ ನಿರ್ಮಾಣ ಪೂರ್ಣಗೊಂಡರೆ ಹಲವು ವರ್ಷಗಳಿಂದ ಎದುರಾಗಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
ಚಿನ್ನಸ್ವಾಮಿ
ಡಿ.ದಡದಹಳ್ಳಿ ಗ್ರಾಮಸ್ಥ .
.