ಯುವರಾಜ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿಚಾರಸಂಕಿರಣವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಜಮುನಾ ಪ್ರಕಾಶ್, ಪ್ರೊ.ಮಹಾದೇವ ಮೂರ್ತಿ, ಡಾ.ಸಿ. ಅನಿತಾ, ಪ್ರೊ.ಆರ್.ಶೇಖರ ನಾಯ್ಕ ಮತ್ತಿತರರು ಹಾಜರಿದ್ದರು. 
ಮೈಸೂರು

ಸ್ತನ್ಯಪಾನದಿಂದ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಳ

ಅವಿನಾಶ್ ಜೈನಹಳ್ಳಿ
ಒಳ್ಳೆಯ ಸೂಕ್ಷ್ಮ ಜೀವಾಣುಗಳು ತಾಯಿ ಹಾಲಿನಿಂದಲೇ ನವಜಾತ ಶಿಶುಗಳಿಗೆ ವರ್ಗಾವಣೆಯಾಗುತ್ತದೆ. ಇದು ಶಿಶುಗಳಿಗೆ ರೋಗ ನಿರೋಧಕ ಶಕ್ತಿಯಾಗಿ ಕೆಲಸ ನಿರ್ವಹಿಸುತ್ತದೆ. ಆದ್ದರಿಂದಲೇ ತಾಯಿಯ ಹಾಲನ್ನು ಅಮೃತಕ್ಕೆ ಸಮ ಎನ್ನಲಾಗುತ್ತದೆ ಎಂದಯ ಪ್ರೊ.ಜಮುನಾ ಪ್ರಕಾಶ್ ಅಭಿಪ್ರಾಯಪಟ್ಟರು.
ನಗರದ ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಕಾಲೇಜಿನ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ಆಹಾರ ವಿಜ್ಞಾನ ಮತ್ತು ಪೋಷಣೆಯಲ್ಲಿ ಸುಸ್ಥಿರತೆ ಮತ್ತು ಆವಿಷ್ಕಾರಗಳು ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾನವನ ಆರೋಗ್ಯದಲ್ಲಿ ಒಳ್ಳೆಯ ಸೂಕ್ಷ್ಮಜೀವಾಣುಗಳ ಪಾತ್ರ ಕುರಿತು ಉಪನ್ಯಾಸ ನೀಡಿದರು.
ಇಂತಹ ಒಳ್ಳೆಯ ಸೂಕ್ಷ್ಮ ಜೀವಾಣುಗಳು ಮಾನವನ ಜೀವಿತಾವಧಿಯಲ್ಲಿ ಆತನ ಆರೋಗ್ಯವನ್ನು ಕಾಪಾಡುವುದಕ್ಕೆ ಅವಿರತವಾಗಿ ಸೈನಿಕರ ಮಾದರಿಯಲ್ಲಿ ಶ್ರಮಿಸುತ್ತವೆ ಎಂದರು.
ದೇಹದ ಒಳಗೆ ಉತ್ಪತ್ತಿಯಾಗುವ ಕೆಟ್ಟ ಸೂಕ್ಷ್ಮ ಜೀವಾಣುಗಳು ಆಂತರ್ಯದಲ್ಲೇ ಕಾಯಿಲೆಗಳನ್ನು ಹರಡುವುದಕ್ಕೆ ಶುರು ಮಾಡುವ ಮೊದಲೇ ಒಳ್ಳೆಯ ಸೂಕ್ಷ್ಮ ಜೀವಾಣುಗಳು ಅವುಗಳ ಮೇಲೆ ದಾಳಿ ನಡೆಸಿ ನಾಶ ಮಾಡುತ್ತವೆ. ಆದ್ದರಿಂದ ಒಳ್ಳೆಯ ಸೂಕ್ಷ್ಮ ಜೀವಾಣುಗಳು ಸದೃಢವಾಗಿ ಇರಬೇಕಾದರೆ ಮಾನವರು ಉತ್ತಮವಾದ, ಖನಿಜಯುಕ್ತ, ಸತ್ವಭರಿತ ಆಹಾರ ಸೇವನೆ ಮಾಡುವುದು ಬಹಳ ಅವಶ್ಯವಾಗಿದೆ ಎಂದರು.
ಮನುಷ್ಯನ ಪಚನಕ್ರಿಯೆಯ ಮೇಲೆ ಆತನ ಆರೋಗ್ಯ ಅವಲಂಬಿತವಾಗಿದೆ. ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಿ ಅದರಲ್ಲಿನ ಎಲ್ಲ ಸತ್ವ ಕರುಳಿಗೆ ಸೇರಿ ಅಲ್ಲಿಂದ ಅವಶ್ಯಕತೆ ಇರುವ ಕಡೆಗೆ ಸಮರ್ಪಕವಾಗಿ ಸರಬರಾಜಾಗುತ್ತದೆ. ಆದರೆ ಜೀರ್ಣವೇ ಆಗದೇ ಹೋದರೆ ಅನೇಕ ಕಾಯಿಲೆಗಳು ಬರುತ್ತವೆ. ಜತೆಗೆ ಕೆಟ್ಟ ಬ್ಯಾಕ್ಟೀರಿಯಾಗಳು ಹೆಚ್ಚಳಗೊಂಡು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇದು ಕೇವಲ ದೈಹಿಕ ಆರೋಗ್ಯದ ಮೇಲಲ್ಲದೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಉತ್ತಮ ಆಹಾರ ಸೇವೆನೆ ಕಡೆಗೆ ಗಮನ ಹರಿಸುವುದು ಅಗತ್ಯ ಎಂದರು.
ಯುವರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಹಾದೇವ ಮೂರ್ತಿ, ಕರಾಮುವಿಯ ಆಹಾರ ವಿಜ್ಞಾನ ಮತ್ತು ಪೋಷಣೆ ಅಧ್ಯಯನ ವಿಭಾಗದ ಡಾ.ಸಿ.ಅನಿತಾ, ಯುವರಾಜ ಕಾಲೇಜಿನ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಮುಖ್ಯಸ್ಥ ಪ್ರೊ.ಆರ್.ಶೇಖರ ನಾಯ್ಕ ಮತ್ತಿತರರು ಹಾಜರಿದ್ದರು.