ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಉಪಹಾರ ವಿತರಿಸುವ ನೂತನ ಸೇವಾ ಕಾರ್ಯದ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕಿ ಡಾ. ಪುಷ್ಪಾವತಿ ಮಾತನಾಡಿದರು. ಜಿ.ಪಂ. ಸಿಇಒ ಯುಕೇಶ್ ಕುಮಾರ್, ಇಸ್ಕಾನ್ ಸಂಸ್ಥೆಯ ಶ್ರೀ ಸ್ತೋಕ ಕೃಷ್ಣ ಸ್ವಾಮೀಜಿ ಹಾಗೂ ಇತರರು ಇದ್ದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯು ಅಕ್ಷಯ ಪಾತ್ರೆ ಫೌಂಡೇಷನ್ ಸಹಯೋಗದೊಂದಿಗೆ ವಾಕ್ ಮತ್ತು ಶ್ರವಣ ದೋಷವುಳ್ಳವರು ಚಿಕಿತ್ಸೆಗಾಗಿ ಸಂಸ್ಥೆಗೆ ಆಗಮಿಸಿದಾಗ ಅವರಿಗೆ ಬೆಳಗಿನ ಉಪಹಾರ ವಿತರಿಸುವ ನೂತನ ಸೇವಾ ಕಾರ್ಯವನ್ನು ಪಂಚವಟಿ ಕ್ಯಾಂಪಸ್‌ನ ಕುಟೀರ ಆವರಣದಲ್ಲಿ ಆರಂಭಿಸಿದ್ದು, ಮಂಗಳವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಚಾಲನೆ ನೀಡಿದರು.
ಇಸ್ಕಾನ್ ಸಂಸ್ಥೆಯ ಶ್ರೀ ಸ್ತೋಕ ಕೃಷ್ಣ ಸ್ವಾಮೀಜಿ ಮಾತನಾಡಿ, ಅಕ್ಷಯ ಪಾತ್ರೆ ಫೌಂಡೇಷನ್ ಸಂಸ್ಥೆಯು ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಮಧ್ಯಾಹ್ನದ ಊಟ ನೀಡುವ ಜತೆಗೆ, ಸಮಾಜದ ಹಿಂದುಳಿದ ಹಾಗೂ ವಿಶೇಷ ಅಗತ್ಯವುಳ್ಳ ಜನರಿಗೂ ತನ್ನ ಸೇವಾ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ ಎಂದು ಹೇಳಿದರು.
ಪ್ರಸ್ತುತ ಇಸ್ಕಾನ್ ಸಂಸ್ಥೆಯಿಂದ ಸುಮಾರು 20,000ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ತಲುಪಿಸಲಾಗುತ್ತಿದೆ. ಇದು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಅಕ್ಷಯ ಪಾತ್ರ ಫೌಂಡೇಷನ್ ಸಂಸ್ಥೆಗಳ ಜಂಟಿ ಯೋಜನೆಯಾಗಿದೆ. ಈ ಯೋಜನೆಯ ಯಶಸ್ಸಿನ ಜತೆಗೆ ಸಮಾಜದ ಬಡ ಹಾಗೂ ಅಂಧ, ವಿಶೇಷ ಚೇತನ ವ್ಯಕ್ತಿಗಳಿಗೂ ನೆರವಾಗುವ ಹಲವು ನೂತನ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಸಂಸ್ಥೆಯು ಮುಂಬರುವ ದಿನಗಳಲ್ಲಿ ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಎದುರು ನೋಡುತ್ತಿದ್ದು, ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳಿಗೆ ಮತ್ತು ಸಮಾಜದ ಅಗತ್ಯವಿರುವ ವರ್ಗಕ್ಕೆ ನಿರಂತರವಾಗಿ ನೆರವಾಗಲು ಬದ್ಧವಾಗಿದೆ ಎಂದರು.
ಅಖಿಲ ಭಾರತ ವಾಕ್‌ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ. ಪುಷ್ಪಾವತಿ ಮಾತನಾಡಿ, ಈ ಸಂಸ್ಥೆಗೆ ಬರುವ ಮಕ್ಕಳು ಹಾಗೂ ಅವರ ಪಾಲಕರ ಅಗತ್ಯತೆಗಳನ್ನು ಅರ್ಥೈಸಿಕೊಂಡು, ಅವರಿಗೆ ಬೆಳಗಿನ ವೇಳೆಯಲ್ಲಿ ಪೌಷ್ಟಿಕ ಹಾಗೂ ತಾಜಾ ತಿಂಡಿ ತಲುಪಿಸಲು ಚಿಂತಿಸಿದ ಸಂದರ್ಭದಲ್ಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ವಿಶೇಷ ಕಾಳಜಿ ವಹಿಸಿ ಅಕ್ಷಯ ಪಾತ್ರ ಪೌಂಡೇಷನ್ ಜತೆಯಲ್ಲಿ ಚರ್ಚಿಸಿ ಬೆಳಗಿನ ಉಪಹಾರ ಒದಗಿಸಲು ಸಹಕರಿಸಿದ್ದಾರೆ ಎಂದರು.