ನ್ಯೂರೋ ಹೆಲ್ತ್ ಕಮ್ಯುನಿಟಿ ಮೀಟ್
- ಮಣಿಪಾಲ್ ಆಸ್ಪತ್ರೆಯ ತಜ್ಞರ ಕರೆ
ನರವೈಜ್ಞಾನಿಕಕ್ಕೆ ಸಂಬಂಧಿಸಿದ ಕಾಯಿಲೆಗಳು ಆರಂಭಿಕ ಹಂತದಲ್ಲಿ ಕಾಣಿಸಿಕೊಂಡಾಗ, ಅವುಗಳ ಲಕ್ಷಣಗಳನ್ನು ಹೆಚ್ಚಿನವರು ನಿರ್ಲಕ್ಷಿಸುತ್ತಾರೆ. ನಿರಂತರವಾದ ತಲೆನೋವು, ಆಗಾಗ ಬರುವ ಮೂರ್ಛೆ/ಸೆಳೆತ, ಹಠಾತ್ ಪ್ರಜ್ಞೆ ತಪ್ಪುವುದು, ದೃಷ್ಟಿ ಮಂಜಾಗುವುದು, ಕೈ-ಕಾಲುಗಳಲ್ಲಿನ ದೌರ್ಬಲ್ಯ, ನೆನಪಿನ ಶಕ್ತಿ ಕುಂದುವುದು ಅಥವಾ ನಡವಳಿಕೆಯಲ್ಲಿನ ಬದಲಾವಣೆಗಳನ್ನು ಸಾಮಾನ್ಯವಾಗಿ ಅತಿಯಾದ ಒತ್ತಡ, ಆಯಾಸ ಅಥವಾ ತಾತ್ಕಾಲಿಕ ಆರೋಗ್ಯ ಸಮಸ್ಯೆಗಳೆಂದು ತಪ್ಪಾಗಿ ಭಾವಿಸಲಾಗುತ್ತದೆ.
ಆದರೆ, ಈ ಲಕ್ಷಣಗಳು ಕೆಲವೊಮ್ಮೆ ಗಂಭೀರವಾದ ನರದ ಕಾಯಿಲೆಗಳ ಆರಂಭಿಕ ಮುನ್ಸೂಚನೆ ಆಗಿರಬಹುದು. ಇದನ್ನು ತಿಳಿದುಕೊಳ್ಳದೆ ನಿರ್ಲಕ್ಷಿಸುವುದು ದೊಡ್ಡ ತಪ್ಪಾಗಬಹುದು. ಇವುಗಳಿಗೆ ಸಕಾಲಿಕ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ. ಇಂತಹ ಎಚ್ಚರಿಕೆಯ ಲಕ್ಷಣಗಳ ಬಗ್ಗೆ ಅರಿವು ಮೂಡಿಸುವುದು, ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಿ ಉತ್ತಮ ಚಿಕಿತ್ಸೆಯ ಫಲಿತಾಂಶಗಳನ್ನು ಕಂಡುಕೊಳ್ಳಲು ಅತ್ಯಂತ ಸಹಾಯಕವಾಗುತ್ತದೆ.
ಇದೇ ಉದ್ದೇಶದಿಂದ, ಮೈಸೂರಿನ ಮಣಿಪಾಲ್ ಆಸ್ಪತ್ರೆಯು ಭಾನುವಾರ 'ನ್ಯೂರೋ ಹೆಲ್ತ್ ಕಮ್ಯುನಿಟಿ ಮೀಟ್' ಅನ್ನು ಆಯೋಜಿಸಿತ್ತು. ಬ್ರೈನ್ ಟ್ಯೂಮರ್ ಮತ್ತು ತಲೆನೋವು ಸಮಸ್ಯೆಗಳ ಕುರಿತು ಹೆಚ್ಚು ಗಮನ ಹರಿಸಿದ್ದ ಈ ಜಾಗೃತಿ ಕಾರ್ಯಕ್ರಮದಲ್ಲಿ ರೋಗಿಗಳು, ಅವರ ಕುಟುಂಬದವರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಮಣಿಪಾಲ್ ಆಸ್ಪತ್ರೆ ಮೈಸೂರಿನ ಆಸ್ಪತ್ರೆ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ. ಜೆ. , ಡಾ. ಉಪೇಂದ್ರ ಶೆಣೈ, ಚೀಫ್ ಆಫ್ ಮೆಡಿಕಲ್ ಸರ್ವಿಸಸ್, ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ಕಾರ್ಯಕ್ರಮವನ್ನು ಮೈಸೂರು ಮಣಿಪಾಲ್ ಆಸ್ಪತ್ರೆಯ ಡಾ. ಮಕ್ಸೂದ್ ಅಹ್ಮದ್ ಎ. ಆರ್., ಸೀನಿಯರ್ ಕನ್ಸಲ್ಟೆಂಟ್ - ನ್ಯೂರೋಸರ್ಜನ್ (ಸೆರೆಬ್ರೊವಾಸ್ಕುಲರ್ ಮತ್ತು ಎಂಡೋವಾಸ್ಕುಲರ್), ಡಾ. ವೇಣುಗೋಪಾಲ್ ಕೃಷ್ಣ, ಸೀನಿಯರ್ ಕನ್ಸಲ್ಟೆಂಟ್ - ನ್ಯೂರಾಲಜಿ, ಡಾ. ಸುಚರಿತಾ ಎಂ. ವಿ. ಕನ್ಸಲ್ಟೆಂಟ್ - ನ್ಯೂರಾಲಜಿ ಹಾಗೂ ಡಾ. ಹೆಚ್. ಎಸ್. ಮೊಹಮ್ಮದ್ ಸೊಹ್ರಾಬ್, ಅಸೋಸಿಯೇಟ್ ಕನ್ಸಲ್ಟೆಂಟ್ - ನ್ಯೂರೋಸರ್ಜರಿ ಅವರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಮಕ್ಸೂದ್ ಅಹ್ಮದ್ ಎ. ಆರ್. ಅವರು, ಬ್ರೈನ್ ಟ್ಯೂಮರ್‌ಗಳು ಎಲ್ಲಾ ವಯೋಮಾನದವರ ಮೇಲೂ ಪರಿಣಾಮ ಬೀರಬಹುದು ಮತ್ತು ಇಂತಹ ರೋಗಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ವಿವರಿಸಿದರು. “ಬಹಳಷ್ಟು ರೋಗಿಗಳು ಆರಂಭದಲ್ಲಿ ನಿರಂತರವಾದ ತಲೆನೋವು, ಸೆಳೆತ, ಪ್ರಜ್ಞೆ ತಪ್ಪುವುದು, ದೈಹಿಕ ದೌರ್ಬಲ್ಯ, ದೃಷ್ಟಿ ದೋಷ, ದೇಹದ ಸಮತೋಲನದಲ್ಲಿ ಸಮಸ್ಯೆ ಅಥವಾ ನಡವಳಿಕೆಯಲ್ಲಿ ಬದಲಾವಣೆಯನ್ನು ಅನುಭವಿಸುತ್ತಾರೆ. ದುರದೃಷ್ಟವಶಾತ್, ಈ ರೋಗಲಕ್ಷಣಗಳನ್ನು ಕೆಲವೊಮ್ಮೆ ನಿರ್ಲಕ್ಷಿಸಲಾಗುತ್ತದೆ ಅಥವಾ ಇತರೆ ಸಣ್ಣಪುಟ್ಟ ಕಾರಣಗಳೆಂದು ಭಾವಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಯಮಿತ ತಪಾಸಣೆ ಮಾಡಿಸುವುದರಿಂದ, ಚಿಕಿತ್ಸಾ ಆಯ್ಕೆಗಳು ಹೆಚ್ಚು ಪರಿಣಾಮಕಾರಿಯಾಗಿರುವ ಹಂತದಲ್ಲಿಯೇ ಬ್ರೈನ್ ಟ್ಯೂಮರ್‌ಗಳನ್ನು ಗುರುತಿಸಲು ಪ್ರಮುಖ ಪಾತ್ರ ವಹಿಸುತ್ತದೆ.” ಎಂದು ಅವರು ಹೇಳಿದರು.
ಬ್ರೈನ್ ಟ್ಯೂಮರ್‌ನ ವಿವಿಧ ಪ್ರಕಾರಗಳು, ರೋಗನಿರ್ಣಯದ ವಿಧಾನಗಳು, ಶಸ್ತ್ರಚಿಕಿತ್ಸೆ, ರೇಡಿಯೇಶನ್ ಥೆರಪಿ ಮತ್ತು ಕೀಮೋಥೆರಪಿಯಂತಹ ಚಿಕಿತ್ಸಾ ಆಯ್ಕೆಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು. ಜೊತೆಗೆ, ಅನೇಕ ರೋಗಿಗಳ ಬದುಕುಳಿಯುವ ಪ್ರಮಾಣ ಮತ್ತು ಜೀವನದ ಗುಣಮಟ್ಟ ಸುಧಾರಿಸಿರುವ ನ್ಯೂರೋಸರ್ಜಿಕಲ್ ಆರೈಕೆಯಲ್ಲಿನ ಮಹತ್ವದ ಬೆಳವಣಿಗೆಗಳ ಬಗ್ಗೆಯೂ ಅವರು ವಿವರಿಸಿದರು. ರೋಗದ ಗುಣಮುಖತೆಯಲ್ಲಿ ಜಾಗೃತಿ ಮತ್ತು ಆರಂಭಿಕ ವೈದ್ಯಕೀಯ ಸಮಾಲೋಚನೆಯೇ ಅತ್ಯಂತ ಪ್ರಮುಖ ಕಾರಣಗಳಾಗಿವೆ ಎಂದು ಅವರು ಒತ್ತಿಹೇಳಿದರು.
ನರಗಳಿಗೆ ಸಂಬಂಧಿಸಿದ ಕಾಯಿಲೆಗಳ ನೈಜ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ವೀಕ್ಷಕರಿಗೆ ಅನುಕೂಲವಾಗುವಂತೆ, ಮೈಸೂರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬ್ರೈನ್ ಟ್ಯೂಮರ್‌ನಿಂದ ಗುಣಮುಖರಾಗಿದ್ದ 38 ವರ್ಷದ ಸೌಮ್ಯ ಅವರ ಅನುಭವವನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಾಯಿತು. ಅನೇಕ ಬಾರಿ ಸೆಳೆತ ಹಾಗೂ ಪ್ರಜ್ಞೆ ತಪ್ಪುವ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ, ಪರೀಕ್ಷೆಯ ಬಳಿಕ ಇಂಟ್ರಾವೆಂಟ್ರಿಕ್ಯುಲರ್ ಬ್ರೈನ್ ಟ್ಯೂಮರ್ ಇರುವುದು ಪತ್ತೆಯಾಗಿತ್ತು. ನಂತರ ಅವರು ಡಾ. ಮಕ್ಸೂದ್ ಅಹ್ಮದ್ ಎ. ಆರ್. ಅವರ ತಂಡದ ನೇತೃತ್ವದಲ್ಲಿ ಗಂಭೀರವಾದ ನ್ಯೂರೋಸರ್ಜಿಕಲ್ ಶಸ್ತ್ರಚಿಕಿತ್ಸೆಗೆ ಒಳಗಾದರು. ಅವರ ಚಿಕಿತ್ಸೆ ಮತ್ತು ಚೇತರಿಕೆಯ ಭಾಗವಾಗಿ, ನಂತರ ಅವರನ್ನು ಕ್ರೇನಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಇದರಿಂದಾಗಿ ಅವರು ಯಾವುದೇ ನ್ಯೂರೋಲಾಜಿಕಲ್ ದೋಷಗಳಿಲ್ಲದೆ ಉತ್ತಮವಾಗಿ ಗುಣಮುಖರಾಗಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಆರಂಭದಲ್ಲೇ ನರರೋಗ ಕಾಯಿಲೆಯ ಲಕ್ಷಣಗಳನ್ನು ಗುರುತಿಸುವ ಮತ್ತು ತಡಮಾಡದೆ ತಜ್ಞರ ಆರೈಕೆಯನ್ನು ಪಡೆಯುವ ಅಗತ್ಯವನ್ನು ಎತ್ತಿತೋರಿಸಿದರು.
ತಲೆನೋವಿನ ಸಮಸ್ಯೆಗಳ ಕುರಿತು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಡಾ. ವೇಣುಗೋಪಾಲ್ ಕೃಷ್ಣ ಅವರು, ತಲೆನೋವು ಎಂಬುದು ಅತ್ಯಂತ ಸಾಮಾನ್ಯ ನರವೈಜ್ಞಾನಿಕ ಸಮಸ್ಯೆಗಳಲ್ಲೊಂದು, ಆದರೆ ಎಚ್ಚರಿಕೆಯ ಕೆಲವು ಮುನ್ಸೂಚನೆಗಳು ಕಂಡುಬಂದಾಗ ತಕ್ಷಣವೇ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ಹೇಳಿದರು. "ಹಲವು ರೀತಿಯ ತಲೆನೋವುಗಳು ಅಪಾಯಕಾರಿಯಾಗಿರುವುದಿಲ್ಲ, ಆದರೆ ಕೆಲವು ತಲೆನೋವುಗಳು ಗಂಭೀರವಾದ ನರಸಂಬಂಧಿ ಕಾಯಿಲೆಗಳನ್ನು ಸೂಚಿಸಬಹುದು. ಹಠಾತ್ತಾಗಿ ಬರುವ ತೀವ್ರ ತಲೆನೋವು, ಅತಿಯಾದ ಸುಸ್ತು ಮತ್ತು ತಲೆನೋವು, ಮಾತನಾಡಲು ಕಷ್ಟವಾಗುವುದು, ದೃಷ್ಟಿ ಬದಲಾವಣೆಗಳು, ಸೆಳೆತ ಅಥವಾ ದಿನಕಳೆದಂತೆ ಹೆಚ್ಚಾಗುವ ತಲೆನೋವುಗಳನ್ನು ಎಂದಿಗೂ ನಿರ್ಲಕ್ಷಿಸಬಾರದು," ಎಂದು ಅವರು ಎಚ್ಚರಿಸಿದರು.
ಇದೇ ವೇಳೆ ಮೈಗ್ರೇನ್, ಮಾನಸಿಕ ಒತ್ತಡದಿಂದ ಬರುವ ತಲೆನೋವು ಮತ್ತು ಇತರೆ ವೈದ್ಯಕೀಯ ಸ್ಥಿತಿಗಳಿಂದ ಉಂಟಾಗುವ ಎರಡನೇ ಹಂತದ ತಲೆನೋವುಗಳು ಸೇರಿದಂತೆ ವಿವಿಧ ರೀತಿಯ ತಲೆನೋವುಗಳ ಕುರಿತು ಅವರು ಚರ್ಚಿಸಿದರು. ಸ್ವಯಂ ಚಿಕಿತ್ಸೆಯ ವೈದ್ಯರ ಸಲಹೆ ಇಲ್ಲದೆ ಔಷಧಿ ತೆಗೆದುಕೊಳ್ಳುವುದರಿಂದ ಆಗುವ ಅಪಾಯಗಳನ್ನು ಅವರು ಒತ್ತಿಹೇಳಿದರು, ಆಗಾಗ ಕಾಡುವ ಅಥವಾ ಅಸಾಮಾನ್ಯವಾದ ತಲೆನೋವನ್ನು ಅನುಭವಿಸುವ ವ್ಯಕ್ತಿಗಳು ಕೇವಲ ಮೆಡಿಕಲ್ ಸ್ಟೋರ್‌ಗಳಲ್ಲಿ ಸಿಗುವ ಮಾತ್ರೆಗಳನ್ನು ಅವಲಂಬಿಸುವ ಬದಲು, ವಿಳಂಬ ಮಾಡದೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆಗೊಳಪಡಬೇಕು ಎಂದು ಸಲಹೆ ನೀಡಿದರು.
ಮಣಿಪಾಲ್ ಆಸ್ಪತ್ರೆ ಮೈಸೂರಿನ ಹಾಸ್ಪಿಟಲ್ ಡೈರೆಕ್ಟರ್ ಆದ ಸಂದೀಪ್ ಪಟೇಲ್ ಬಿ. ಜೆ. ಅವರು ಮಾತನಾಡಿ, "ನರಗಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ಆರಂಭದಲ್ಲೇ ಗುರುತಿಸಿದರೆ ಯಶಸ್ವಿಯಾಗಿ ಗುಣಪಡಿಸಬಹುದು. ಇಂತಹ ಕಾರ್ಯಕ್ರಮಗಳ ಮೂಲಕ ಜನರು ರೋಗದ ಲಕ್ಷಣಗಳನ್ನು ಬೇಗನೆ ಪತ್ತೆಹಚ್ಚಿ, ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಮೈಸೂರಿನ ಮಣಿಪಾಲ್ ಆಸ್ಪತ್ರೆಯು ನುರಿತ ತಜ್ಞರು, ಅತ್ಯಾಧುನಿಕ ಸ್ಕ್ಯಾನಿಂಗ್ ಮತ್ತು ಸುಧಾರಿತ ಐಸಿಯು ಸೌಲಭ್ಯಗಳೊಂದಿಗೆ ಬ್ರೈನ್ ಟ್ಯೂಮರ್, ಸ್ಟ್ರೋಕ್ ಹಾಗೂ ನರರೋಗಗಳಿಗೆ ಅತ್ಯುತ್ತಮ ತುರ್ತು ಚಿಕಿತ್ಸೆ ನೀಡಲು ಸಂಪೂರ್ಣವಾಗಿ ಸಜ್ಜಾಗಿದೆ." ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಂವಾದಾತ್ಮಕ ಪ್ರಶ್ನೋತ್ತರ ಅವಧಿಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿದವರು ತಜ್ಞರೊಂದಿಗೆ ನೇರವಾಗಿ ಸಂವಹನ ನಡೆಸುವ ಮೂಲಕ, ಆರಂಭಿಕವಾಗಿ ನರವೈಜ್ಞಾನಿಕ ರೋಗಲಕ್ಷಣಗಳನ್ನು ಗುರುತಿಸುವುದು, ಲಭ್ಯವಿರುವ ಚಿಕಿತ್ಸಾ ಆಯ್ಕೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ದೀರ್ಘಕಾಲೀನ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ಪೂರ್ವಭಾವಿ ಕ್ರಮಗಳ ಕುರಿತು ಉಪಯುಕ್ತ ಮಾಹಿತಿಗಳನ್ನು ಪಡೆದುಕೊಂಡರು.