ಮಾನಸ ಗಂಗೋತ್ರಿ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಕುಂಬರಹಳ್ಳಿ ಅವರ ‘ವಿಪ್ರಚಂದ್ರ’ ಕವನ ಸಂಕಲನ ಅನಾವರಣಗೊಳಿಸಲಾಯಿತು. ಎಸ್.ನಾರಾಯಣ್, ಅಂಶಿಪ್ರಸನ್ನಕುಮಾರ್, ಬಿ.ಜೆ.ವಿಜಯಕುಮಾರ್, ಪ್ರೊ.ನಂಜಯ್ಯ ಹೊಂಗನೂರು, ಎ.ಎಂ.ಶಿವಸ್ವಾಮಿ, ಸವಿತಾ ಪ.ಮಲ್ಲೇಶ್ ಇತರರು ಇದ್ದರು. 
ಮೈಸೂರು

ಪುಸ್ತಕಗಳು ಓದುಗರಿಗೆ ಒಳ್ಳೆಯ ಅನುಭವ ನೀಡುವಂತಿರಲಿ: ಚಿತ್ರ ನಿರ್ದೇಶಕ ಎಸ್.ನಾರಾಯಣ್ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಸಮಾಜವನ್ನು ತಿದ್ದುವ, ಸರಿದಾರಿಗೆ ತರುವ ಇನ್ನಷ್ಟು ಸಾಹಿತ್ಯ ಬರಬೇಕು
  • ಎಂಬತ್ತರ ದಶಕಕ್ಕಿಂತ ಮುಂಚೆ ರಾಜಕಾರಣಿಗಳು ಸಾಕಷ್ಟು ಓದಿಕೊಂಡಿದ್ದರು. ಇದರಿಂದ ರಾಜಕಾರಣವೂ ಸರಿ ದಾರಿಯಲ್ಲಿ ಸಾಗುತ್ತಿತ್ತು
ಮೈಸೂರು:ಪುಸ್ತಕಗಳು ಓದುಗರಿಗೆ ಒಳ್ಳೆಯ ಅನುಭವ ನೀಡುವಂತಿರಬೇಕು. ಅಲ್ಲದೇ ನಿರಂತರವಾಗಿ ಓದುಸಿಕೊಂಡು ಹೋಗಬೇಕು ಎಂದು ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್ ಅಭಿಪ್ರಾಯಪಟ್ಟರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೆಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಒಕ್ಕೂಟದಿಂದ ಮಾನಸ ಗಂಗೋತ್ರಿ ಬಿಎಂಶ್ರೀ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ರಾಹುಲ್ ಕುಂಬರಹಳ್ಳಿ ಅವರ ‘ವಿಪ್ರಚಂದ್ರ’ ಕವನ ಸಂಕಲನ ಅನಾವರಣಗೊಳಿಸಿ ಅವರು ಮಾತನಾಡಿದರು.
ಬರವಣಿಗೆ ಎಂಬುದು ಅಷ್ಟು ಸುಲಭವಾಗಿ ಒಲಿಯುವುದಿಲ್ಲ. ಅದಕ್ಕೆ ನಿರಂತರ ಅಭ್ಯಾಸ ಇರಬೇಕು. ಪೆನ್ನು ಹಿಡಿದರೆ ನಿರ್ಗಳವಾಗಿ ಬರೆಸಿಕೊಂಡು ಹೋಗುತ್ತಿರಬೇಕು. ಪುಸ್ತಕಗಳು ಓದುಗರಿಗೆ ಒಳ್ಳೆಯ ಅನುಭವ ನೀಡುವಂತಿರಬೇಕು ಎಂದರು.
ರಾಹುಲ್ ಅವರು ಸಾಹಿತ್ಯದಲ್ಲಿ ಇನ್ನಷ್ಟು ಸಾಧನೆ ಮುಂದುವರಿಯಲಿ. ‘ವಿಪ್ರಚಂದ್ರ’ ಕವನ ಸಂಕಲನ ಚನ್ನಾಗಿ ಮೂಡಿ ಬಂದಿದ್ದು, ಸಮಾಜವನ್ನು ತಿದ್ದುವ, ಸರಿದಾರಿಗೆ ತರುವ ಇನ್ನಷ್ಟು ಸಾಹಿತ್ಯ ಬರಬೇಕು ಎಂದು ಆಶಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ಸಾಹಿತ್ಯ ಓದುವುದರಿಂದ ಉತ್ತಮ ಚಿಂತನೆಗಳು ಮೂಡುತ್ತವೆ. ಆಗಾಗಿ ಎಂಬತ್ತರ ದಶಕಕ್ಕಿಂತ ಮುಂಚೆ ರಾಜಕಾರಣಿಗಳು ಸಾಕಷ್ಟು ಓದಿಕೊಂಡಿದ್ದರು. ಇದರಿಂದ ರಾಜಕಾರಣವೂ ಸರಿ ದಾರಿಯಲ್ಲಿ ಸಾಗುತ್ತಿತ್ತು. ಅಲ್ಲದೇ ಆಡಳಿತ ಕೂಡ ಉತ್ತಮವಾಗಿರುತ್ತಿತ್ತು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ ಎಂದು ಅವರು ವಿಷಾದಿಸಿದರು.
ಪತ್ರಿಕೆ, ಸಾಹಿತ್ಯಕ್ಕೆ ತನ್ನದೇ ಅದ ಶಕ್ತಿ ಇತ್ತು. 1969 ರಲ್ಲಿ ಅಮೆರಿಕದಲ್ಲಿ ಎರಡು ಪುಟಗಳ ಪುಟ್ಟ ಪತ್ರಿಕೆ ಬರೆದ ವರದಿಯಿಂದ ಅಲ್ಲಿನ ಅಧ್ಯಕ್ಷರೇ ರಾಜೀನಾಮೆ ನೀಡಬೇಕಾಗಿ ಬಂತು. ನಮ್ಮ ರಾಜ್ಯದಲ್ಲಿ 1983ರಲ್ಲಿ ನಡೆದ ರೈತರ ಮೇಲೆ ನವಲಗುಂದ, ನರಗುಂದದಲ್ಲಿ ಅದ ಗೋಲಿಬಾರ್ ಪ್ರಕರಣದ ಮಾಧ್ಯಮ ವರದಿಯಿಂದಾಗಿ ಸರ್ಕಾರವೇ ಉರುಳಿ ಹೋಯಿತು ಎಂದರು.
ಕೃತಿ ಕುರಿತು ನಿವೃತ್ತ ಪ್ರಾಧ್ಯಾಪಕ ಎ.ಎಂ.ಶಿವಸ್ವಾಮಿ ಮಾತನಾಡಿ, ಸಾಹಿತ್ಯ ಎಂಬುದು ಸ್ವಾನುಭವವಾಗಿದ್ದು, ಅದನ್ನು ಓದಿಯೇ ಅನುಭವಿಸಬೇಕು. ಸಾಹಿತ್ಯದಲ್ಲಿ ಸಮಾನತೆಯ ಸಂದೇಶಗಳು ಬೇಕು, ಈ ರೀತಿಯ ಸಾಮಾಜಿಕ ಚಿಂತನೆಯನ್ನು ಒಳಗೊಳ್ಳುವವರು ಮಾತ್ರ ಉತ್ತಮ ಕವಿಗಳಾಗುತ್ತಾರೆ ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು ಅಧ್ಯಕ್ಷತೆ ವಹಿಸಿದ್ದರು. ಮಾನಸ ಗಂಗೋತ್ರಿ ಆಡಳಿತಾಧಿಕಾರಿ ಡಾ.ಎಸ್.ಟಿ. ರಾಮಚಂದ್ರ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪ್ರಗತಿಪರ ಚಿಂತಕಿ ಸವಿತಾ ಪ.ಮಲ್ಲೇಶ್, ಲೇಖಕ ರಾಹುಲ್ ಕುಂಬರಹಳ್ಳಿ, ಸಂಘಟಕರಾದ ಸಿ. ರಂಗಯ್ಯ, ಸಿ.ರಂಗರಾಮು, ರಂಗಸ್ವಾಮಿ, ಶೈಲಜಾ ಇದ್ದರು.