ನಗರದ ನ್ಯಾಯಾಲಯ 
ಮೈಸೂರು

ನಗರದ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಪ್ರಮುಖ ಮುಖ್ಯಾಂಶಗಳು

  • ಮೈಸೂರು ಕೋರ್ಟ್ ಆವರಣದಲ್ಲಿ ಕೆಲಕಾಲ ಆತಂಕ
  • ಹುಸಿ ಎಂದು ತಿಳಿದ ಬಳಿಕ ನಿಟ್ಟುಸಿರು
ಮೈಸೂರು: ನಗರದ ನ್ಯಾಯಾಲಯಕ್ಕೆ ಮಂಗಳವಾರ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಕೆಲ ಹೊತ್ತು ಗಲಿಬಿಲಿ, ಆತಂಕದ ವಾತಾವರಣ ಸೃಷ್ಟಿಯಾಯಿತು.
‘ನಗರದ ನ್ಯಾಯಾಲಯಗಳಲ್ಲಿ ಬಾಂಬ್ ಇಟ್ಟಿರುವುದಾಗಿ’ ಅನಾಮಧೇಯ ವ್ಯಕ್ತಿಯು ಜಿಲ್ಲಾ ಮುಖ್ಯ ನ್ಯಾಯಾಧೀಶರಿಗೆ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದರಿಂದ ಭೀತಿಗೆ ಕಾರಣವಾಯಿತು.
ಬೆಳಗ್ಗೆ 9.45ಕ್ಕೆ ನ್ಯಾಯಾಧೀಶರು ಇ-ಮೇಲ್ ಗಮನಿಸಿದ್ದು, ‘ನಿಮ್ಮ ಕೋರ್ಟ್ ಆವರಣದಲ್ಲಿ ಮಾನವ ಆತ್ಮಹತ್ಯಾ ಬಾಂಬ್ ಅಳವಡಿಸಲಾಗಿದ್ದು, ಮಧ್ಯಾಹ್ನ 1.55ರೊಳಗೆ ನ್ಯಾಯಾಧೀಶರನ್ನು ಸ್ಥಳಾಂತರಿಸಿ’ ಎಂಬ ಸಂದೇಶವು ಮಹಮ್ಮದ್ ವಿಕ್ರಮ್ ಹೆಸರಿನಿಂದ ಬಂದಿತ್ತು.
ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ವಕೀಲರು ಹಾಗೂ ಸಿಬ್ಬಂದಿಯನ್ನು ಹೊರಕಳಿಸಿ ನ್ಯಾಯಾಲಯದ ಆವರಣವನ್ನು ಖಾಲಿಗೊಳಿಸಿದರು. 
ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಕೋರ್ಟ್‌ನ ಕೊಠಡಿಗಳು, ಹಾಲ್‌ಗಳು ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಿತು.
 ಪರಿಶೀಲನೆ ಬಳಿಕ ಹುಸಿ ಬಾಂಬ್ ಬೆದರಿಕೆ ಎಂಬುದು ಖಚಿತಲಾಯಿತು. ಮಧ್ಯಾಹ್ನ 2 ಗಂಟೆಯ ಬಳಿಕ ಎಲ್ಲರನ್ನೂ ಪರಿಶೀಲಿಸಿ ಕೋರ್ಟ್ ಆವರಣದೊಳಗೆ ಪುನಃ ಬಿಡಲಾಯಿತು.
ಬಾಂಬ್ ಬೆದರಿಕೆಯಿಂದಾಗಿ ವಕೀಲರು, ಸಿಬ್ಬಂದಿ ಹೊರಬಂದಿದ್ದರಿಂದ ಹಳೇ ನ್ಯಾಯಾಲಯದ ಮುಂಭಾಗ ಹಾದು ಹೋಗುವ ಕೃಷ್ಣರಾಜ ಬುಲೇವಾಡ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ 2016ರ ಆಗಸ್ಟ್ 1ರಂದು ಜಿಲ್ಲಾ ನ್ಯಾಯಾಲಯದ ಹಿಂಬದಿಯ ಶೌಚಗೃಹದಲ್ಲಿ ಸ್ಫೋಟ ಸಂಭವಿಸಿತು. ಉಗ್ರರು ಕುಕ್ಕರ್ ಬಾಂಬ್ ಇರಿಸಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಿತ್ತು. ಈ ಘಟನೆಯನ್ನು ಹುಸಿ ಬಾಂಬ್ ಬೆದರಿಕೆಯು ಮತ್ತೊಮ್ಮೆ ನೆನಪಿಸಿತು.