ರಕ್ತದಾನ ಮಹಾದಾನವಾಗಿದ್ದು, ಇದರಿಂದ ಮತ್ತೊಂದು ಜೀವವನ್ನು ಉಳಿಸಿದ ಸಮಾಧಾನ ಸಿಗುತ್ತದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ನಗರದ ಸಯ್ಯಜಿರಾವ್ ರಸ್ತೆಯಲ್ಲಿರುವ ಕೋಟೆ ಶ್ರೀ ಶಾಂತಿನಾಥ ಬಸದಿಯಲ್ಲಿ ಶಾಂತಿಚಕ್ರ ಯುವ ಬ್ರಿಗೇಡ್ ಮೈಸೂರು ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಣ ಕೊಟ್ಟರೆ ಏನು ಬೇಕಾದರೂ ಸಿಗುತ್ತದೆ. ಆದರೆ ಮನುಷ್ಯನ ಬದುಕಿಗೆ ಅಗತ್ಯವಾದ ರಕ್ತ ಮಾತ್ರ ಫ್ಯಾಕ್ಟರಿಯಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು ಗಾಯಗೊಂಡು ಜೀವನ್ಮರಣದ ಹೋರಾಟ ನಡೆಸುವ ಅಮೂಲ್ಯ ಜೀವಗಳನ್ನು ಉಳಿಸಲು ರಕ್ತ ದಾನಿಗಳ ಕೊಡುಗೆ ಮಹತ್ವದ್ದಾಗಿದೆ. ಅಲ್ಲದೆ ರಕ್ತದಾನ ಮಾಡಿದವರ ದೇಹವು ಮತ್ತಷ್ಟು ಹೊಸ ರಕ್ತವನ್ನು ಉತ್ಪಾದಿಸುವುದರಿಂದ ದಿಢೀರ್ ಹೃದಯಾಘಾತ ಮುಂತಾದ ಸಮಸ್ಯೆಗಳಿಂದ ಪಾರಾಗಬಹುದು ಎಂದು ಹೇಳಿದರು.
ಯುವ ಬ್ರಿಗೇಡ್ ಮೂಲಕ ಯುವಕರು ಸೇರಿ ಸಮಾಜ ಮುಖಿ ಕಾರ್ಯಕ್ಕೆ ತೊಡಗಿಸಿಕೊಂಡಿರುವುದು, ಸಮಾಜಕ್ಕೆ ಮಾದರಿ. ಇವತ್ತಿನ ರಕ್ತದಾನ ಶಿಬಿರ ಅತ್ಯಂತ ಮಾನವೀಯ ಗುಣದ ಕಾರ್ಯ. ಯುವಕರು ಇಂತಹ ಕಾರ್ಯಕ್ಕೆ ತೊಡಗಿಸಿಕೊಂಡು ಮಾದರಿಯಾಗಬೇಕು ಎಂದರು.
ಯುವ ಬ್ರಿಗೇಡ್ ವತಿಯಿಂದ ರಕ್ತದಾನವಲ್ಲದೇ, ಅಂಗವಿಕಲ ಮಕ್ಕಳಿಗೆ ಕುಡಿಯುವ ನೀರಿನ ಘಟಕದ ವಿತರಣೆ, ಊಟದ ಬಾಕ್ಸ್‌ಗಳನ್ನು ನೀಡುವ ಕೆಲಸವನ್ನು ಈ ಹಿಂದೆ ಮಾಡಿದೆ. ರಕ್ತದಾನ ಶಿಬಿರ ನಡೆಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದಂತಾಗಿದೆ ಎಂದರು.
ಜೈನ್ ಸಮಾಜ ಶಾಂತಿಯ ಸಂಕೇತ. ಮಾನವ ಕಷ್ಟಕ್ಕೆ ಹೆಚ್ಚು ಸ್ಪಂದಿಸುತ್ತದೆ. ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಸಮುದಾಯ ಮಾಡುತ್ತದೆ. ಜೈನ ಸಮುದಾಯ ಸ್ವಾಮೀಜಿಯಾಗುವುದು, ವ್ರತಗಳನ್ನು ಪಾಲಿಸುವುದು ಕಷ್ಟಕರವಾಗಿದೆ. ಕಠಿಣ ವ್ರತಗಳನ್ನು ಪಾಲಿಸುವ ಮೂಲಕ ಸಮಾಜದಲ್ಲಿ ತಮ್ಮದೇ ಆದ ಅಸ್ಮಿತೆಯನ್ನು ಉಳಿಸಿಕೊಂಡಿದ್ದು ಹಿಂದೂ ಸಮಾಜವು ಕೂಡ ಈ ನಿಟ್ಟಿನಲ್ಲಿ ಸಾಗುತ್ತಿದೆ ಎಂದರು.
ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಜನರು ಭಾಗವಹಿಸಿ ರಕ್ತದಾನ ಮಾಡಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೈಸೂರು ಜಿಲ್ಲಾಧಿಕಾರಿ ಕೆ.ಶಿಲ್ಪಾ, ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರ ವ್ಯವಸ್ಥಾಪಕ ನಿರ್ದೇಶಕ ಇ.ಎಸ್ ಗಿರೀಶ್, ಶಾಂತಿಚಕ್ರ ಯುವ ಬ್ರಿಗೇಡ್‌ನ ಜೆ.ಚಿರಂತ್ ಜೈನ್, ಶಾಂತಿನಾಥ ಸೇವಾ ಸಮಿತಿ ಎಸ್.ಬಿ ಸುರೇಶ್ ಜೈನ್, ದಿಗಂಬರ ಜೈನ್ ಸಮಾಜದ ಎಂ.ಆರ್ ಸುನೀಲ್ ಕುಮಾರ್ ಜೈನ್, ಕೇವಲಿನ್ ಚಾರಿಟಬಲ್ ಟ್ರಸ್ಟ್‌ನ ಬಿ.ಸೀಮಂತಿನಿ ಮತ್ತಿತರರು ಉಪಸ್ಥಿತರಿದ್ದರು.