ಪಿರಿಯಾಪಟ್ಟಣದ ಜೇಂಕಾರ ಡಯಾಗ್ನೋಸ್ಟಿಕ್ ಪಾಲಿಕ್ಲಿನಿಕ್ ಲ್ಯಾಬ್ ಮತ್ತು ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಎಂ.ಬಿ.ಸಂಪತ್, ಕೆ.ರಮೇಶ್, ಸಿ.ಎನ್.ವಿಜಯ್, ಟಿ.ಎಸ್.ಹರೀಶ್, ಡಿ.ಆರ್.ಧನಂಜಯ್, ಡಿ.ರಮೇಶ್, ಕಾಳೇಗೌಡ ಇತರರು ಇದ್ದರು. 
ಮೈಸೂರು

ರಕ್ತದಾನ ಅಮೂಲ್ಯ ಜೀವ ಉಳಿಸಲು ಸಹಕಾರಿ

ಎಂ.ರವಿ

ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಅಧ್ಯಕ್ಷ ಎಂ.ಬಿ.ವಸಂತ್ ಅಭಿಮತ

ಪಿರಿಯಾಪಟ್ಟಣ: ರಕ್ತದಾನ ಮಾಡುವುದರಿಂದ ತುರ್ತು ಸಂದರ್ಭಗಳಲ್ಲಿ ಅಮೂಲ್ಯ ಜೀವ ಉಳಿಸಲು ಸಹಕಾರಿಯಾಗಲಿದೆ ಎಂದು ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಅಧ್ಯಕ್ಷ ಎಂ.ಬಿ.ಸಂಪತ್ ತಿಳಿಸಿದರು.
ಪಟ್ಟಣದ ಜೇಂಕಾರ ಡಯಾಗ್ನೋಸ್ಟಿಕ್ ಪಾಲಿಕ್ಲಿನಿಕ್ ಲ್ಯಾಬ್ ಮತ್ತು ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಶನಿವಾರ ರೋಟರಿ ಪಿರಿಯಾಪಟ್ಟಣ ಐಕಾನ್ಸ್ ವತಿಯಿಂದ ಮೈಸೂರಿನ ಕ್ಯೂರ್ ಬ್ಲಡ್ ಸೆಂಟರ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಾವು ನೀಡುವ ರಕ್ತವು ಅಪಘಾತಗಳಿಂದ ತೀವ್ರವಾಗಿ ಗಾಯಗೊಂಡವರು, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಅಗತ್ಯವಿರುವುದು ಸೇರಿದಂತೆ ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯವಿದ್ದಾಗ ರೋಗಿಗಳ ನೆರವಿಗೆ ಬರಲಿದೆ. ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಿ ನಾವು ನೀಡುವ ರಕ್ತ ಎಂದಿಗೂ ವ್ಯಯವಾಗುವುದಿಲ್ಲ. ಬದಲಾಗಿ ಇನ್ನೊಬ್ಬರ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದರು.
ರೋಟರಿ ನಿಯೋಜಿತ ಸಹಾಯಕ ಪ್ರಾಂತಪಾಲ ಸಿ.ಎನ್.ವಿಜಯ್ ಮಾತನಾಡಿ, ಯಾವುದೇ ಆರೋಗ್ಯವಂತ ವ್ಯಕ್ತಿ ತನ್ನ 60ನೇ ವಯಸ್ಸಿನವರೆಗೆ ರಕ್ತದಾನ ಮಾಡಬಹುದಾಗಿದ್ದು ಇಂದಿನ ಯುವಜನತೆ ರಕ್ತದಾನ ಮಹತ್ವದ ಬಗ್ಗೆ ಅರಿತು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ರೋಟರಿ ವಲಯ ಸೇನಾನಿ ಕೆ.ರಮೇಶ್ ಮಾತನಾಡಿ, ನಿಯಮಿತವಾಗಿ ನಾವು ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮಗಳು ಉಂಟಾಗುವುದಿಲ್ಲ. ವೈದ್ಯರ ಸಲಹೆ ಮೇರೆಗೆ ರಕ್ತದಾನ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿರಿಮಾತು ಹೇಳಿದರು.
ಕ್ಯೂರ್ ಬ್ಲಡ್ ಸೆಂಟರ್ ವೈದ್ಯರಾದ ಡಾ.ಅರ್ಜುನ್ ಮಾತನಾಡಿ, 18 ವರ್ಷದಿಂದ 60 ವರ್ಷ ವಯಸ್ಸಿನ ಆರೋಗ್ಯವಂತ ಮನುಷ್ಯರು ಯಾರಾದರೂ ಸರಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇದರಿಂದ ನಮ್ಮ ದೇಹದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಬದಲಾಗಿ ಇನ್ನೊಬ್ಬರ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದರು.
ಶಿಬಿರದಲ್ಲಿ ಐವರು ಮಹಿಳೆಯರು ಸೇರಿದಂತೆ ಒಟ್ಟು 30 ಜನರು ರಕ್ತದಾನ ಮಾಡಿದರು. ಇವರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಜೇಂಕಾರ್ ಡಯಾಗ್ನೋಸ್ಟಿಕ್ ಪಾಲಿ ಕ್ಲಿನಿಕ್ ಲ್ಯಾಬ್ ಮತ್ತು ಸ್ಕ್ಯಾನಿಂಗ್ ಸೆಂಟರ್ ಮುಖ್ಯಸ್ಥ ಕೆ.ಬಿ.ಮಹೇಶ್, ಪುರಸಭಾ ಮಾಜಿ ಸದಸ್ಯ ಪಿ.ಸಿ.ಕೃಷ್ಣ, ರೋಟರಿ ಐಕಾನ್ಸ್ ಕಾರ್ಯದರ್ಶಿ ಸತೀಶ್ ಆರಾಧ್ಯ, ನಿಯೋಜಿತ ಅಧ್ಯಕ್ಷ ಟಿ.ಎಸ್.ಹರೀಶ್, ಸದಸ್ಯರಾದ ಡಿ.ಆರ್.ಧನಂಜಯ್, ಡಿ.ರಮೇಶ್, ಕಾಳೇಗೌಡ, ಪರಮೇಶ್, ಮುಖಂಡ ಶಿವರಾಮೇಗೌಡ ಮತ್ತು ಸಿಬ್ಬಂದಿ ನವೀದ್, ಶಿವು, ಆಶಾ, ಶಮಂತ್, ಮಂಜುಳಮ್ಮ, ಪ್ರದೀಪ್, ಚೇತನ್, ಪಾಪ ನಾಯಕ, ಜಮೀಲಾಬಾನು, ದರ್ಶನ್, ಅಯನ್ ಮತ್ತಿತರರಿದ್ದರು.