ಹಲವು ಬಾರಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಡಾ.ಬಿ.ಬೃಂದಾ, ಡಾ.ಕುಸುಮಾ, ಗಿರೀಶ್, ವಿಕ್ರಂ ಅಯ್ಯಂಗಾರ್, ಡಾ.ಭಾರತಿ, ಕೆ.ಎಸ್.ಸುಕೃತಾ, ಪ್ರತಿಮಾ ಇತರರಿದ್ದರು. 
ಮೈಸೂರು

ಅಂಜಿಕೆ ಬಿಟ್ಟು ರಕ್ತದಾನ ಮಾಡಿ

ಯುವತಿಯರಿಗೆ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬಿ.ಬೃಂದಾ ಸಲಹೆ

ಆರೋಗ್ಯವಾಗಿರುವ ಅರ್ಹ ಯುವತಿಯರು ಯಾವುದೇ ಅಂಜಿಕೆಯಿಲ್ಲದೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬಹುದು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಬಿ.ಬೃಂದಾ ತಿಳಿಸಿದರು.

ಕೃಷ್ಣಮೂರ್ತಿಪುರಂನ ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರಬೋಧನ ಮತ್ತು ನಿಯಂತ್ರಣ ಘಟಕ, ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯ ಹಾಗೂ ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಕ್ತದಾನಕ್ಕೂ ಮೊದಲು ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಅರ್ಹತೆ ಹೊಂದಿರುವವರು ಸುರಕ್ಷಿತವಾಗಿ ರಕ್ತದಾನ ಮಾಡಬಹುದು. ರಕ್ತದಾನದಿಂದ ಸಾಮಾನ್ಯವಾಗಿ ದೇಹಕ್ಕೆ ಶಾಶ್ವತ ಹಾನಿಯಾಗುವುದಿಲ್ಲ. ಆದರೆ ಗರ್ಭಿಣಿಯರು, ಇತ್ತೀಚೆಗೆ ಹೆರಿಗೆ ಅಥವಾ ಗರ್ಭಪಾತವಾಗಿರುವವರು, ತೀವ್ರ ರಕ್ತಹೀನತೆ ಹೊಂದಿರುವವರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ವೈದ್ಯಕೀಯ ಸಲಹೆಯಿಲ್ಲದೆ ರಕ್ತದಾನ ಮಾಡಬಾರದು ಎಂದು ಹೇಳಿದರು.

ಹಲವು ಬಾರಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಅನಿತಾ ಪಿ.ಜಯರಾಮ್ ಹಾಗೂ ವಿದ್ಯಾರ್ಥಿನಿಯರಾದ ಐಶ್ವರ್ಯಾ, ನಂದಿನಿ, ಹರ್ಷಿತಾ, ನಮ್ರತಾ ಮತ್ತು ಕೀರ್ತನಾ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಕಾಲೇಜಿನ 40 ವಿದ್ಯಾರ್ಥಿನಿಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ಕೆ.ಆರ್.ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕುಸುಮಾ, ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ನಿರ್ದೇಶಕ ಗಿರೀಶ್, ವಿಕ್ರಂ ಅಯ್ಯಂಗಾರ್, ಪ್ರಾಂಶುಪಾಲೆ ಡಾ.ಭಾರತಿ, ಉಪ ಪ್ರಾಂಶುಪಾಲ ಕೆ.ಎಸ್.ಸುಕೃತ, ಎನ್‌ಎಸ್‌ಎಸ್ ಅಧಿಕಾರಿ ಪ್ರತಿಮಾ ಇತರರಿದ್ದರು.