ಕಾಂಗ್ರೆಸ್ ವಿರುದ್ಧ ಬಿಜೆಪಿಯಿಂದ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಧೀರಜ್ ಮುನಿರಾಜ್, ಪ್ರತಾಪ್ ಸಿಂಹ, ಟಿ.ಎಸ್.ಶ್ರೀವತ್ಸ, ಎಲ್.ನಾಗೇಂದ್ರ, ಎನ್.ಸುಬ್ಬಣ್ಣ, ಶಿವಕುಮಾರ್, ಡಾ.ಇ.ಸಿ.ನಿಂಗರಾಜ್‌ಗೌಡ, ಎಸ್.ಮಹದೇವಯ್ಯ, ಕುಂಬ್ರಳ್ಳಿ ಎನ್.ಸುಬ್ಬಣ್ಣ, ರುದ್ರಮೂರ್ತಿ, ವಿ.ಸೋಮಸುಂದರ್, ಬಿ.ಎಂ.ರಘು, ಎಂ.ವಿ.ಮೋಹನ್, ಎಸ್.ಸಂದೇಶ್‌ಸ್ವಾಮಿ ಇತರರು ಇದ್ದರು. 
ಮೈಸೂರು

ಪ್ರಧಾನಿ ಕಚೇರಿ ಮುತ್ತಿಗೆ ಯತ್ನಕ್ಕೆ ಬಿಜೆಪಿ ಕಿಡಿ, ಪ್ರತಿಭಟನೆ

ಆರ್.ಕೃಷ್ಣ

ಪ್ರಮುಖ ಮುಖ್ಯಾಂಶಗಳು

  • ದೇಶ ವಿರೋಧಿ ದುಷ್ಟಶಕ್ತಿಗಳ ಪ್ರೇರಣೆಯಿಂದ ಪ್ರಧಾನಮಂತ್ರಿ ಕಚೇರಿಗೆ ಮುತ್ತಿಗೆ
  • ವಿದ್ಯಾರ್ಥಿಗಳ ಹಿತ ಕಾಯಲು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಕಾಂಗ್ರೆಸ್ ಅಪಪ್ರಚಾರ
ಮೈಸೂರು:ನೀಟ್ ಪರೀಕ್ಷೆ ವಿಚಾರವನ್ನು ಕಾಂಗ್ರೆಸ್ ರಾಜಕಾರಣಗೊಳಿಸುತ್ತಿದೆ. ಇದೇ ವಿಷಯವಾಗಿ ಶಾಸಕ ಹರೀಶ್ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಬಿಜೆಪಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ರಾಮಸ್ವಾಮಿ ವೃತ್ತದಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿಯಿಂದ ಪ್ರತಿಭಟನೆ ನಡೆಸಿ, ದೇಶ ವಿರೋಧಿ ದುಷ್ಟಶಕ್ತಿಗಳ ಪ್ರೇರಣೆಯಿಂದ ಪ್ರಧಾನಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ನಾಯಕರ ನಡೆಗೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಯುವಮೋರ್ಚಾ ಅಧ್ಯಕ್ಷರಾದ ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ತಕ್ಷಣವೇ ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿ 13 ಜನರನ್ನು ಬಂಧಿಸಿದೆ. ಅನೇಕ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಹಿತ ಕಾಯಲು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ನೀಟ್ ಪರೀಕ್ಷಾ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಕೇಂದ್ರ ಸರ್ಕಾರ ಸಂಕಲ್ಪ ಮಾಡಿದ್ದು, ದೇಶದ ರಾಜಕೀಯ ಅಸ್ಥಿರತೆಗೆ ಸಂಚು ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮವಾಗಲಿದೆ ಎಂದು ಹೇಳಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಮುಚ್ಚಿ ಹಾಕದೆ ಸಿಬಿಐ ತನಿಖೆಯ ಮೂಲಕ ಭಾಗಿಯಾಗಿದ್ದವರನ್ನು ಪತ್ತೆ ಹಚ್ಚಿ ಜೈಲಿಗೆ ಹಾಕಿದರು ಎಂದು ಹೇಳಿದರು.
ಮೊದಲು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇಳುತ್ತಿದ್ದವರು ಈಗ ಪ್ರಧಾನಿ ರಾಜೀನಾಮೆ ಕೇಳುತ್ತಿದ್ದಾರೆ. ಮೋದಿ ಬಂದ ನಂತರ 1.36 ಲಕ್ಷ ಸೀಟುಗಳು ಹೆಚ್ಚಾಗಿದ್ದು, ಇಂದು 350 ರಿಂದ 845 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಕಾಕ್ರೋಚ್ ಮೂಲಕ ಮೋದಿ ಸರ್ಕಾರ ಪತನಗೊಳಿಸಲು ಸದ್ದಿಲ್ಲದೆ ಪ್ರಯತ್ನ ನಡೆಸಲಾಗಿದ್ದು, ವಿದ್ಯಾರ್ಥಿಗಳನ್ನು ಎತ್ತಿಕಟ್ಟಲಾಗಿದೆ ಎಂದು ದೂರಿದರು.
ಭಾರತವನ್ನು ಮುಗಿಸಲು ಷಡ್ಯಂತ್ರ ಮಾಡುತ್ತಿರುವ ವ್ಯಕ್ತಿಗಳು ದೇಶ ವಿರೋಧಿ ಶಕ್ತಿಗಳೊಂದಿಗೆ ಕೈ ಜೋಡಿಸುತ್ತಿದ್ದಾರೆ. ಪ್ರತಿಭಟನಾನಿರತರಿಗೆ ಮುಲ್ಲಾಗಳು ಬಂದು ಬಿರಿಯಾನಿ ತಿನ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮೈಸೂರಿನಲ್ಲಿ ಗುಂಡಿಮುಚ್ಚಲು ಸಾಧ್ಯವಾಗದ ಶಾಸಕ ಕೆ.ಹರೀಶ್‌ಗೌಡ ಅವರು, ಕಾಲೇಜಿನಲ್ಲಿ ಕಾಂಗ್ರೆಸ್ ನಾಯಕರ ಚಿತ್ರ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳನ್ನು ಎತ್ತಿಕಟ್ಟುವ ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದಿದ್ದರೂ ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರವಿದೆ ಎನ್ನುವುದನ್ನು ಯಾರೂ ಮರೆಯಬಾರದು. ಕಾಂಗ್ರೆಸ್‌ನವರಂತೆ ನಾವೂ ಮೊಟ್ಟೆ ಒಡೆಯಲು ಶುರು ಮಾಡಿದರೆ ಕಾಂಗ್ರೆಸ್ಸಿಗರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗಲ್ಲ ಎಂದು ಎಚ್ಚರಿಸಿದರು.
ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಮೈಸೂರು ವಿಭಾಗೀಯ ಸಹ ಪ್ರಭಾರಿ ಡಾ.ಇ.ಸಿ.ನಿಂಗರಾಜ್‌ಗೌಡ, ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಎನ್.ಸುಬ್ಬಣ್ಣ, ಪ್ರಧಾನ ಕಾರ್ಯದರ್ಶಿಗಳಾದ ರುದ್ರಮೂರ್ತಿ, ವಿ.ಸೋಮಸುಂದರ್, ಬಿ.ಎಂ.ರಘು, ನಗರ ವಕ್ತಾರ ಎಂ.ವಿ.ಮೋಹನ್, ಮಾಜಿ ಮೇಯರ್ ಎಸ್.ಸಂದೇಶ್‌ಸ್ವಾಮಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಹೇಮಂತ್‌ಕುಮಾರ್‌ಗೌಡ, ಬಿ.ಪಿ.ಮಂಜುನಾಥ್, ನಗರಪಾಲಿಕೆ ಮಾಜಿ ಸದಸ್ಯರಾದ ಪಿ.ಪ್ರಶಾಂತ್‌ಗೌಡ, ರಂಗಸ್ವಾಮಿ, ಎಂ.ಕೆ.ಶಂಕರ್, ಸೌಮ್ಯಾ ಉಮೇಶ್, ಪ್ರಮೀಳಾ ಭರತ್, ಗುರುವಿನಾಯಕ, ಲಕ್ಷ್ಮೀ ಕಿರಣ್‌ಗೌಡ, ರಮೇಶ್, ಮಾಜಿ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಹೇಮಾ ನಂದೀಶ್, ಜಯಪ್ರಕಾಶ್(ಜೆಪಿ), ಕಾರ್ತಿಕ್ ಮರಿಯಪ್ಪ ಇತರರು ಇದ್ದರು.