ನಗರದ ತಾಲೂಕು ಕಚೇರಿ ಮುಂಭಾಗ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹಾಗೂ ಚಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ದಿಡೀರ್ ಪ್ರತಿಭಟನೆ ನಡೆಸಲಾಯಿತು. ಬಿ.ಹರ್ಷವರ್ಧನ್, ಎಲ್ ನಾಗೇಂದ್ರ, ಸಿಂಧವಳ್ಳಿ ಕೆಂಪಣ್ಣ ಸೇರಿದಂತೆ ಇತರರು ಇದ್ದರು.
- ಸಂಘಸಂಸ್ಥೆಗಳ ಚುನವಣೆ ಮುಂದೂಡಿಕೆ ಆರೋಪ
- ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ ನೇತೃತ್ವ
ನಂಜನಗೂಡು : ಅಧಿಕಾರದಲ್ಲಿದ್ದೇವೆ ಎಂಬ ಕಾರಣಕ್ಕೆ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡುವ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧ ಮುಂಭಾಗ ಬುಧವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಯಾರದ್ದೋ ಮಾತುಗಳನ್ನು ಕೇಳಿಕೊಂಡು ನಂಜನಗೂಡು ತಾಲೂಕಿನಲ್ಲಿ ಚುನಾವಣೆಗಳನ್ನು ಮುಂದೂಡುತ್ತಿದ್ದಾರೆ. ಸಂಸದ, ಶಾಸಕರ ಮಾತು ಕೇಳಿಕೊಂಡು ಚುನಾವಣೆ ಮಾಡಬೇಕೇ, ಇಲಾಖೆ ನಿಯಮದಂತೆ ಚುನಾವಣೆಗಳನ್ನು ನಡೆಸಬೇಕು. ಈ ವಿಚಾರದಲ್ಲಿ ಲಂಚ ತಾಂಡವಾಡುತ್ತಿದೆ. ಈ ರೀತಿ ಚುನಾವಣೆಗಳನ್ನು ಮುಂದೂಡದೆ, ಆಯಾ ಸಮಯಗಳಲ್ಲಿ ನಡೆಸಬೇಕು ಎಂದು ತಹಶೀಲ್ದಾರ್‌ಗೆ ಸೂಚಿಸಿದರು.
ಸಿದ್ದರಾಮಯ್ಯ ರಾಜೀನಾಮೆಗೆ ರೆಡಿಯಾಗುವಂತೆ ಹೈಕಮಾಂಡ್ ಹೇಳಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಲು ರೆಡಿಯಾಗುತ್ತಿದ್ದಾರೆ. ಅವರ ಕಥೆ ಮುಗಿಯಿತು. ನಾನು ಈ ಮೊದಲೇ ಹೇಳಿದಂತೆ ನಡೆದಿದೆ. ನಾನು ಹೇಳಿದ್ದೆ ಸತ್ಯ ಆಯ್ತು. ನವೆಂಬರ್ ನಲ್ಲಿ ಚೇಂಜ್ ಆಗುತ್ತೆ. ಅವರು ಯಾರನ್ನಾದರೂ ಮಾಡಿಕೊಳ್ಳಲಿ, ಎರಡೂವರೆ ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಇಡೀ ಕರ್ನಾಟಕದಲ್ಲಿ ಹಳ್ಳ ಬಿದ್ದ ರಸ್ತೆಗಳನ್ನು ನಾವು ನೋಡುತ್ತಿದ್ದೇವೆ. ರೈತರಿಗೆ ಪರಿಹಾರ ಕೊಡುತ್ತಿಲ್ಲ, ಮಂಡ್ಯದಲ್ಲಿ ರೈತ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸರ್ಕಾರ ತೊಲಗುವವರೆಗೂ ಜನಸಾಮಾನ್ಯರಿಗೆ ಒಳ್ಳೆಯದಾಗುವುದಿಲ್ಲ. ನಮಗೆ ನ್ಯಾಯ ಸಿಗಲಿಲ್ಲ ಎಂದರೆ ನಂಜನಗೂಡು ತಾಲೂಕು ಕಚೇರಿಗೆ ಬೀಗ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ, ಎಗ್ಗಿಲ್ಲದೆ ನಡೆಯುತ್ತಿದೆ. ನಂಜನಗೂಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರೈತರ ಆತ್ಮಹತ್ಯೆಗಳು ನಡೆಯುತ್ತಿವೆ. 21 ಕೆರೆಗಳನ್ನು ತುಂಬಿಸಬೇಕಿತ್ತು. ನಮ್ಮ ಸರ್ಕಾರ ಇದ್ದಾಗ ಕೆರೆಗಳನ್ನು ತುಂಬಿಸುವ ಕೆಲಸಗಳನ್ನು ಮಾಡಿದ್ದೆವು. ಈ ಸರ್ಕಾರದಲ್ಲಿ ಯಾವುದೇ ಕೆರೆಗಳನ್ನು ತುಂಬಿಸಿಲ್ಲ. ಕಾಡಾನೆಗಳು ಚಿರತೆ ಮತ್ತು ಹುಲಿಗಳ ದಾಳಿ ಆಗುತ್ತಿದೆ. ಪ್ರಾಣಿ ಮತ್ತು ಮಾನವ ಸಂಘರ್ಷ ನಡೆಯುತ್ತಿದೆ. ಸರ್ಕಾರ ನಡೆಸಲು ಇವರಲ್ಲಿ ಹಣ ಇಲ್ಲ. ದುಡ್ಡಿಲ್ಲದೆ ಪಾಪರ್ ಆಗಿದ್ದಾರೆ. ಫ್ರೀ ಫ್ರೀ ಅಂದುಕೊಂಡು ಹೆಣ್ಮಕ್ಳನ್ನು ಬಸ್ ಹತ್ತಿಸಿ, ಇಳಿಸುತ್ತಿದ್ದಾರೆ ಅಷ್ಟೇ. ಇದನ್ನು ಬಿಟ್ಟರೆ ಬೇರೆ ಏನು ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಕಸುವಿನಹಳ್ಳಿ, ಹಾಡ್ಯ, ಹೆಡಿಯಾಲ ಸಹಕಾರ ಸಂಘದ ಚುನಾವಣೆಯನ್ನು ಮುಂದೂಡಲಾಗುತ್ತದೆ. ಚುನಾವಣೆ ನಿಗದಿಯಾಗಿರುವುದನ್ನು ಪೊಲೀಸರು ತಡೆದಿದ್ದಾರೆ. ಚುನಾವಣೆಗಳನ್ನು ನಡೆಸಲೇಬೇಕು. ಕಾರಣ ಕೇಳಿದರೆ ಪೊಲೀಸರ ಕೊರತೆ ಇದೆ ಎಂದು ಕಾರಣ ನೀಡುತ್ತಿದ್ದಾರೆ. ಪೊಲೀಸರ ಕೊರತೆ ಎದ್ದು ಕಾಣುತ್ತಿದೆ. ನಂಜನಗೂಡಿನಲ್ಲಿ ಕಳ್ಳತನ, ಕೊಲೆ, ಸುಲಿಗೆ ದರೋಡೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಒಂಟಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ಐದು ವರ್ಷ ಶಾಸಕನಾಗಿದ್ದ ಸಂದರ್ಭದಲ್ಲಿ ಯಾವುದೇ ಪ್ರಕರಣಗಳು ನಡೆಯುತ್ತಿರಲಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಎಂದು ದೂರಿದರು.
ಮಾಜಿ ಶಾಸಕರಾದ ಎಲ್.ನಾಗೇಂದ್ರ, ಬಿ.ಹರ್ಷವರ್ಧನ್, ಮಾಜಿ ಜಿಪಂ ಸದಸ್ಯ ಚಿಕ್ಕರಂಗನಾಯಕ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಕೆಂಡಗಣ್ಣಪ್ಪ, ಬಿಜೆಪಿ ಪಟ್ಟಣ ಅಧ್ಯಕ್ಷ ಎಸ್.ಸಿದ್ದರಾಜು, ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ಬಾಲಚಂದ್ರು, ಪ್ರಧಾನ ಕಾರ್ಯದರ್ಶಿಗಳಾದ ಮಹದೇವಪ್ರಸಾದ್, ರಾಘವೇಂದ್ರ, ಪುಟ್ಟಸ್ವಾಮಿ, ಸಿದ್ದರಾಜು, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ಹೊರಳವಾಡಿ ಮಹೇಶ್, ಮಂಜುನಾಥ್, ಹುರಾ ಚಂದ್ರು, ಉಮೇಶ್, ಕೃಷ್ಣಪ್ಪ, ಮಹದೇವಸ್ವಾಮಿ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.