ಪ್ರಧಾನಿ ನರೇಂದ್ರ ಮೋದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಖಂಡಿಸಿ ನಗರದಲ್ಲಿ ಬಿಜೆಪಿ ನಗರ ಯುವಮೋರ್ಚಾ ಕಾರ್ಯಕರ್ತರು ಪ್ರತಿಭಟಿಸಿದರು. ಟಿ.ಎಸ್.ಶ್ರೀವತ್ಸ, ರಾಕೇಶ್, ಗಿರಿಧರ್, ಗೋಪಾಲ್‌ರಾವ್, ಜೋಗಿ ಮಂಜು, ಡಿ.ಲೋಹಿತ್, ಕೆ.ಎಂ.ನಿಶಾಂತ್ ಇತರರು ಇದ್ದರು. 
ಮೈಸೂರು

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಭಯೋತ್ಪಾದಕರನ್ನು ತಯಾರು ಮಾಡಿದ್ದೇ ಕಾಂಗ್ರೆಸ್
  • ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡುವ ಸಂಸ್ಕೃತಿಯನ್ನು ಕಾಂಗ್ರೆಸ್ ಬಿಡಬೇಕು
ಮೈಸೂರು:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಬಿಜೆಪಿ ನಗರ ಯುವಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಗಾಂಧಿ ವೃತ್ತ ಸೇರಿದ ಬಿಜೆಪಿ ಕಾರ್ಯಕರ್ತರು, ಖರ್ಗೆ ಅವರು ಹೇಳಿಕೆ ಖಂಡಿಸಿ ನಾನಾ ನಾಮಫಲಕಗಳನ್ನು ಹಿಡಿದು ಹಲವು ಘೋಷಣೆಗಳನ್ನು ಕೂಗಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಕಾಂಗ್ರೆಸ್ ಚಾಳಿಯೇ ಇಂತಹ ಹೇಳಿಕೆಯಾಗಿದೆ. ರಾಷ್ಟ್ರಪತಿಯನ್ನು ಅವಳು ಯಾರು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರೆ. ಪ್ರಧಾನಿಯನ್ನು ಖರ್ಗೆ ಅವರು ಭಯೋತ್ಪಾದಕ ಎನ್ನುತ್ತಾರೆ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ವಿರೋಧ ಪಕ್ಷವಾಗಿ ಬಿಜೆಪಿ ಚಿಂತನೆಯನ್ನು ವಿರೋಧಿಸಿ. ಆದರೆ, ವ್ಯಕ್ತಿ ವಿರೋಧ ಮಾಡುವುದು ಸರಿಯಲ್ಲ. ಭಯೋತ್ಪಾದಕರನ್ನು ತಯಾರು ಮಾಡಿದ್ದೇ ಕಾಂಗ್ರೆಸ್. ಇದಕ್ಕೆ ಹಲವು ನಿದರ್ಶನಗಳು ನಮಲ್ಲಿವೆ. ನೀವು ಮಾಡಿರುವ ಇಂತಹ ಚಟುವಟಿಕೆಗಳಿಗೆ ಉತ್ತೇಜನ ನೀಡಿ ಪ್ರಧಾನಿಯವರಿಗೆ ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಚುನಾವಣಾ ರಾಜಕೀಯಕ್ಕಾಗಿ ಇಂತಹ ಹೇಳಿಕೆ ಸರಿಯಲ್ಲ. ಏಳು ವರ್ಷದ ಬಿಜೆಪಿ ಅವಧಿಯಲ್ಲಿ ಒಂದೇ ಒಂದು ಹಗರಣ ನಡೆಯದ ರೀತಿ ಭ್ರಷ್ಟಚಾರ ಮುಕ್ತ ಸ್ವಚ್ಛ ಆಡಳಿತ ನೀಡುತ್ತಿದ್ದೇವೆ. ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡುವ ಸಂಸ್ಕೃತಿಯನ್ನು ಕಾಂಗ್ರೆಸ್ ಬಿಡಬೇಕು ಎಂದರು.
ಬಿಜೆಪಿ ಯುವಮೋರ್ಚಾ ನಗರಾಧ್ಯಕ್ಷ ರಾಕೇಶ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ರಾಜಕಾರಣಿಯಾಗಿ ಇಂತಹ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಅವರು ದೇಶದ ಜನರ ಕ್ಷಮೆಯಾಚಿಸಬೇಕು. ಖರ್ಗೆಯವರ ಹೇಳಿಕೆ ಖಂಡಿಸಿ ದೇಶ ಹಾಗೂ ರಾಜ್ಯದ ಎಲ್ಲ ಘಟಕಗಳಲ್ಲಿಯೂ ಬಿಜೆಪಿ ಕರೆ ನೀಡಿರುವ ಪ್ರತಿಭಟನೆ ಬೆಂಬಲಿಸಿ ನಗರದಲ್ಲಿಯೂ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ಗಿರಿಧರ್, ಮುಖಂಡರಾದ ಗೋಪಾಲ್‌ರಾವ್, ಜೋಗಿ ಮಂಜು, ಡಿ.ಲೋಹಿತ್, ರಾಕೇಶ್‌ಭಟ್, ಕೆ.ಎಂ.ನಿಶಾಂತ್ ಇತರರು ಇದ್ದರು.