ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ 
ಮೈಸೂರು

ಬಿಜೆಪಿಯವರು ರಣಹದ್ದುಗಳು, ಕೋಮು ಗಲಭೆ ಆಗುವುದನ್ನೇ ಕಾಯುತ್ತಾರೆ : ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಬಿಜೆಪಿಯವರು ರಣಹದ್ದುಗಳು, ಕೋಮು ಗಲಭೆ ಆಗುವುದನ್ನೇ ಅವರು ಕಾಯುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಮುಗಲಭೆ ನಡೆದು ಯಾರಾದರು ಮೃತಪಟ್ಟರೆ ಅದರ ಲಾಭವನ್ನು ಬಿಜೆಪಿ ಪಡೆಯುತ್ತದೆ, ಇದುವೇ ಬಿಜೆಪಿಯವರ ಪ್ಲಾೃನ್. ಯಾವುದೇ ಕಡೆ ಕೋಮು ಗಲಭೆಯಾದರೂ ಅದರ ಚುನಾವಣಾ ಲಾಭ ಬಿಜೆಪಿಗೆ ಆಗಿದೆ. ಹೀಗಾಗಿ ಬಿಜೆಪಿಗೆ ಕೋಮು ಗಲಭೆ ಬಗ್ಗೆ ಆಸಕ್ತಿ ಹೆಚ್ಚು ಎಂದು ಟೀಕಿಸಿದರು.
ತಿ.ನರಸೀಪುರದಲ್ಲೂ ಕೋಮು ಗಲಬೆಗೆ ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಗಣೇಶೋತ್ಸವ ಮೆರವಣಿಗೆ ಸಂದರ್ಭ ಮಸೀದಿ ಮುಂದೆ ಏತಕ್ಕೆ ಪಟಾಕಿ ಒಡೆಯಬೇಕು? ನಮ್ಮ ದೇವಸ್ಥಾನದ ಮುಂದೆ ಅವರು ಬಂದು ಪಟಾಕಿ ಹೊಡೆದರೆ ನಾವು ಸುಮ್ಮನೆ ಇರುತ್ತೇವಾ? ಚರ್ಚ್, ಮಸೀದಿ, ದೇವಸ್ಥಾನ ಮುಂದೆ ಪಟಾಕಿ ಹೊಡೆಯಬಹುದು ಎಂದು ಕಾನೂನು ಇದೆಯೇ? ಯಾಕೆ ಧಾರ್ಮಿಕ ಸ್ಥಳಗಳಲ್ಲೇ ಪಟಾಕಿ ಹೊಡೆಯಬೇಕು ಎಂದು ಪ್ರಶ್ನಿಸಿದರು.
ಯಾರೇ ತಪ್ಪು ಮಾಡಿದರು ತಪ್ಪೇ, ಇದು ಎಲ್ಲ ಧರ್ಮದವರಿಗು ಅನ್ವಯ ಆಗುತ್ತದೆ. ತಿ.ನರಸೀಪುರದಲ್ಲಿ ಯಾವುದೇ ರಸ್ತೆಯಲ್ಲಾದರೂ ಮೆರವಣಿಗೆ ನಡೆಸಲಿ. ಆದರೆ, ಅನುಮತಿ ಪಡೆದು ಮೆರವಣಿಗೆ ನಡೆಸಲಿ. ಅನುಮತಿ ಪಡೆದರೆ ನಾವು ಭದ್ರತೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ತಿ.ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ಯಾವುದೇ ತಪ್ಪು ಮಾಡಿಲ್ಲ. ಅವರು ಬುದ್ಧಿವಾದ ಮಾತ್ರ ಹೇಳಿದ್ದಾರೆ. ಅವರು ಹೇಳಿದ ಬುದ್ಧಿವಾದದ ಧಾಟಿ ಸ್ವಲ್ಪ ಬದಲಾಗಿದೆ, ಇದನ್ನು ಬಿಟ್ಟು ಇನ್ಸ್‌ಪೆಕ್ಟರ್ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡದೆ ಇರುವ ಇನ್ಸ್‌ಪೆಕ್ಟರ್ ವಿರುದ್ಧ ಏತಕ್ಕೆ ಕ್ರಮ ಕೈಗೊಳ್ಳಬೇಕು? ಅನುಮತಿ ಇಲ್ಲದೆ ಅವರಿಗೆ ಬೇಕಾದಂತಹ ರಸ್ತೆಗಳಿಗೆ ಹೋಗಲು ಬಿಡಲು ಆಗುತ್ತಾ? ಅನುಮತಿ ಪಡೆಯದೆ ಬೇರೆ ರಸ್ತೆಯಲ್ಲಿ ಹೋಗಿ ಏನಾದರು ಅನಾಹುತ ಆದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ತಾಯಿಯ ಆಸೆಯಂತೆ ಮೈಸೂರಿನಲ್ಲಿ ಕಟ್ಟಿಸಿದ್ದೇವೆ. ನನ್ನ ತಾಯಿಗೆ ಮೈಸೂರಿನಲ್ಲಿ ಸೆಟ್ಲ್ ಆಗಬೇಕೆಂಬ ಆಸೆ ಇತ್ತು. ಹಾಗಾಗಿ ಅವರ ಇಚ್ಚೆ ಪ್ರಕಾರ ಮನೆ ಕಟ್ಟಿಸಿದ್ದೇವೆ. ಮನೆಯ ಸಂಪೂರ್ಣ ಪ್ಲಾೃನ್ ನನ್ನ ತಾಯಿಯದ್ದು. ಈ ಹಿಂದೆ ಎರಡು ಮನೆ ಕಟ್ಟಿಸಿದ್ದೇವು, ಅಲ್ಲಿ ನಾವು ಒಂದು ದಿನವೂ ಇರಲಿಲ್ಲ. ಎರಡು ಮನೆಯನ್ನು ಮಾರುವ ಪರಿಸ್ಥಿತಿ ಬಂದು ಮಾರಿದೇವು, ಈಗ ಈ ಮನೆ ಕಟ್ಟಿಸಿದ್ದೇವೆ. ನನ್ನ ತಾಯಿ-ತಂದೆ ನಾನು ಎಲ್ಲರೂ ಅಲ್ಲೇ ಉಳಿಯುತ್ತೇವೆ. ಇನ್ಮುಂದೆ ನನ್ನ ತಂದೆ ವಾರಕ್ಕೊಮೆಯಾದರು ಮೈಸೂರಿಗೆ ಬರಲು ಹೇಳಿದ್ದೇವೆ ಎಂದರು.