ಹುಣಸೂರಿನಲ್ಲಿ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಪಕ್ಷದ ಮುಖಂಡರು ಕೈಹಿಡಿದು ಮೇಲೆತ್ತಿ ಒಮ್ಮತ ತೋರಿದರು. ನಿಖಿಲ್ ಕುಮಾರಸ್ವಾಮಿ, ಸಾ.ರಾ.ಮಹೇಶ್, ಜಿ.ಡಿ.ಹರೀಶ್‌ಗೌಡ, ಮಹದೇವ್, ಕೃಷ್ಣನಾಯಕ, ರಂಜಿತ ಚಿಕ್ಕಮಾದು ಇತರರಿದ್ದರು.  
ಮೈಸೂರು

ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಖಚಿತ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಜಾ.ದಳ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭವಿಷ್ಯ
  • ಜನರೊಂದಿಗೆ ಜನತಾದಳ ಸಮಾವೇಶ
ಹುಣಸೂರು: ರೈತ ಮತ್ತು ಶೋಷಿತರ ವಿರೋಧಿ ನೀತಿಯನ್ನು ಅನುಸುರಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬೀದಿಗಿಳಿದು ಹೋರಾಡಲು ರಾಜ್ಯದಲ್ಲಿ ಜೆಡಿಎಸ್ ಪಕ್ಷ ಇನ್ನೂ ಶಕ್ತಿಯುತವಾಗಿಯೇ ಇದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಖಚಿತ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭವಿಷ್ಯ ನುಡಿದರು.
ಜೆಡಿಎಸ್ ಪಕ್ಷದ ವತಿಯಿಂದ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಜನವಿರೋಧಿ, ರೈತವಿರೋಧಿ, ಶೋಷಿತ ವಿರೋಧಿ ನೀತಿಯನ್ನೇ ಅನುಸರಿಸಿಕೊಂಡು ಬಂದಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಮೂರು ವರ್ಷಗಳಲ್ಲಿ ಎಸ್‌ಇಪಿ-ಟಿಎಸ್‌ಪಿ ಯೋಜನೆಯ ಒಟ್ಟು 37 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಶಾಸಕ ಜಿ.ಡಿ.ಹರೀಶ್‌ಗೌಡ, ಮಾಜಿ ಸಚಿವ ಸಾ.ರಾ.ಮಹೇಶ್, ಪಕ್ಷದ ಜಿಲ್ಲಾಧ್ಯಕ್ಷ ಅಶ್ವಿನ್‌ಕುಮಾರ್, ಎಚ್.ಡಿ.ಕೋಟೆ ತಾಲೂಕಿನ ಮುಖಂಡ ಕೃಷ್ಣನಾಯಕ ಮಾತನಾಡಿದರು. ಮಾಜಿ ಶಾಸಕ ಕೆ.ಮಹದೇವ್, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್, ಮೈಸೂರು ನಗರಾಧ್ಯಕ್ಷ ಎಸ್‌ಬಿಎಂ. ಮಂಜು, ಎಂಎಲ್‌ಸಿ ಮಂಜೇಗೌಡ, ಮಾಜಿ ಮೇಯರ್ ರವಿಕುಮಾರ್, ತಾಲೂಕು ಮುಖಂಡರಾದ ಬಸವಲಿಂಗಯ್ಯ, ಶರವಣ, ಎಚ್.ಪಿ.ಸತೀಶ್‌ಕುಮಾರ್, ಕೃಷ್ಣರಾಜ ಗುಪ್ತ, ಸಿರಾಜ್, ಹರವೆ ಶ್ರೀಧರ್, ಸತೀಶ್ ಪಾಪಣ್ಣ, ಬಿಳಿಕೆರೆ ಮಧು, ರಂಜಿತಾ ಚಿಕ್ಕಮಾದು, ದೇವರಾಜ ಒಡೆಯರ್ ಇತರರು ಇದ್ದರು.
ಚುನಾವಣಾ ಕಾವು ಆರಂಭ
ನನ್ನ ಮತ್ತು ಶಾಸಕ ಜಿ.ಡಿ.ಹರೀಶ್‌ಗೌಡ ಬಾಂಧವ್ಯ ರಾಜಕಾರಣವನ್ನೂ ಮೀರಿದ್ದು, ಹರೀಶ್‌ಗೌಡ ನೇತೃತ್ವದಲ್ಲಿ ಹುಣಸೂರಿನಲ್ಲಿ ಪಕ್ಷದ ಕಾರ್ಯಕ್ರಮ ಅಭೂತಪೂರ್ವವಾಗಿದೆ. ಈ ಜನಸಾಗರ ನೋಡಿದರೆ ಚುನಾವಣಾ ಕಾವು ಹುಣಸೂರಿನಿಂದಲೇ ಆರಂಭಗೊಂಡಿದೆ ಎನ್ನಬಹುದು. ಮತದಾರ ಆಳುವ ಸರ್ಕಾರಕ್ಕೆ ಪಾಠ ಕಲಿಸಲು ಸಜ್ಜಾಗಿದ್ದಾನೆ ಎಂದು ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಗೊಂದಲಕ್ಕೆ ಸ್ಪಷ್ಟ ತೆರೆ:
ನನ್ನ ರಾಜಕಾರಣದ ಜೀವನ ನಿಖಿಲ್‌ರೊಂದಿಗೆ ಮುಂದುವರಿಯಲಿದ್ದು, ನಾನೂ ಮುಂಬರುವ 2028ರ ಚುನಾವಣೆಯಲ್ಲೂ ಹುಣಸೂರಿನಲ್ಲೇ ಸ್ಪರ್ಧಿಸುವೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಹೇಳುವ ಮೂಲಕ ಕಾರ್ಯಕರ್ತರ ಮನದಲ್ಲಿದ್ದ ಕ್ಷೇತ್ರ ಬದಲಾವಣೆ ಗೊಂದಲಕ್ಕೆ ಸಂಪೂರ್ಣ ತೆರೆ ಎಳೆದರು.
ನೂತನ ಪದಾಧಿಕಾರಿಗಳ ಪದಗ್ರಹಣ
ತಾಲೂಕು ಜೆಡಿಎಸ್ ಘಟಕದ ನೂತನ ಅಧ್ಯಕ್ಷರಾಗಿ ಜಿ.ಪಂ. ಮಾಜಿ ಸದಸ್ಯ ಎಂ.ಬಿ.ಸುರೇಂದ್ರ, ನಗರಾಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಎಸ್.ಶರವಣ ಅಧಿಕಾರ ಸ್ವೀಕರಿಸಿದರು.
ಅದ್ದೂರಿ ಮೆರವಣಿಗೆ
ತಾಲೂಕಿನ ಬಿಳಿಕೆರೆಯ ಹೊಸಲು ಮಾರಮ್ಮ ದೇಗುಲದ ಆವರಣದಿಂದ 1000ಕ್ಕೂ ಹೆಚ್ಚು ಯುವಕರು ಬೈಕ್ ರ‌್ಯಾಲಿ ಮೂಲಕ ತಮ್ಮ ನೆಚ್ಚಿನ ನಾಯಕರನ್ನು ಹುಣಸೂರಿಗೆ ಕರೆತಂದರು. ಹುಣಸೂರಿನ ಎಪಿಎಂಸಿ ವೃತ್ತದಲ್ಲಿನ ಅರಸು ಪುತ್ಥಳಿಗೆ ನಿಖಿಲ್ ಕುಮಾರಸ್ವಾಮಿ ಮಾಲಾರ್ಪಣೆ ಮಾಡಿದರು. ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ಮಂಗಳೂರಿನ 20ಕ್ಕೂ ಹೆಚ್ಚು ಜಾನಪದ ಕಲಾತಂಡಗಳು, 800ಕ್ಕೂ ಹೆಚ್ಚು ಕಳಸ ಹೊತ್ತ ಮಹಿಳೆಯರ ಮೆರವಣಿಗೆ ಮುನೇಶ್ವರ ಕಾವಲ್ ಮೈದಾನ ತಲುಪಿತು. ಅರಸು ಪುತ್ಥಳಿ ಬಳಿ ಅಭಿಮಾನಿಗಳು ಕ್ರೇನ್ ಮೂಲಕ ನೆಚ್ಚಿನ ನಾಯಕರಿಗೆ ಮೂಸಂಬಿ ಹಣ್ಣಿನ ಹಾರ ಹಾಕಿ ಸಂಭ್ರಮಿಸಿದರು.