ನಗರದಲ್ಲಿ ಆಯೋಜಿಸಿದ್ದ ಬಿಜೆಪಿಯ ಮೈಸೂರು ನಗರದ ಪ್ರಶಿಕ್ಷಣ ವರ್ಗ ತರಬೇತಿಯಲ್ಲಿ ಡಿ.ವಿ.ಸದಾನಂದಗೌಡ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಲ್.ನಾಗೇಂದ್ರ, ತೋಂಟದಾರ್ಯ, ಶಿವಕುಮಾರ್, ಸೋಮಶೇಖರ್ ಇತರರು ಇದ್ದರು.
- ಒಬ್ಬ ಜನಪ್ರತಿನಿಧಿಯ ಶೇ.75ರಷ್ಟು ಶಕ್ತಿ ಕಾರ್ಯಕರ್ತರು ಹಾಗೂ ಪಕ್ಷ ಆಗಿರುತ್ತದೆ
- ದೀನ ದಯಾಳ್ ಉಪಾಧ್ಯಾಯರ ಆಶಯದಂತೆ ಕೊನೆಯ ಜನರನ್ನೂ ನಾವು ತಲುಪಬೇಕು
ಮೈಸೂರು:ರಾಜ್ಯದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಶಕ್ತಿಯೇ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.
ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-2026 ಅಂಗವಾಗಿ ನಗರದ ಹೊರವಲಯದ ಲಿಂಗದೇವರಕೊಪ್ಪಲಿನ ಪ್ರಜಾಪಿತ ಬ್ರಹ್ಮಾಕುಮಾರಿಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಬಿಜೆಪಿಯ ಮೈಸೂರು ನಗರದ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದರು.
ಒಬ್ಬ ಜನಪ್ರತಿನಿಧಿಯ ಶೇ.75ರಷ್ಟು ಶಕ್ತಿ ಕಾರ್ಯಕರ್ತರು ಹಾಗೂ ಪಕ್ಷ ಆಗಿರುತ್ತದೆ. ಮೈಸೂರಿನಲ್ಲಿ ಕಳೆದ ಚುನಾವಣೆಯಲ್ಲಿ ಪಕ್ಷ ಕಳೆದುಕೊಂಡಿದ್ದನ್ನು ಮತ್ತೆ ಪಡೆದುಕೊಳ್ಳಲು ಕಾರ್ಯಕರ್ತರ ಅಗತ್ಯವಿದೆ. ಅದಕ್ಕೆ ಈಗಿನಿಂದಲೇ ಪರಿಶ್ರಮ ಹಾಕಬೇಕು ಎಂದರು.
ಘೋಷಣೆ, ಅನುಷ್ಠಾನ ಆಧಾರಿತ ರಾಜಕಾರಣ ನಮ್ಮ ಧ್ಯೇಯ. ದೀನ ದಯಾಳ್ ಉಪಾಧ್ಯಾಯರ ಆಶಯದಂತೆ ಕೊನೆಯ ಜನರನ್ನೂ ನಾವು ತಲುಪಬೇಕು. ಶಿಸ್ತಿಲ್ಲದ ಪಕ್ಷ ಬೆಳೆಯಲು ಸಾಧ್ಯವಿಲ್ಲ. ಅಂತಹ ಪಕ್ಷ ಯಾವ ಸ್ಥಿತಿಗೆ ಬಂದಿದೆ ಎಂದು ನೋಡಿದ್ದೇವೆ ಎಂದರು.
ಪಕ್ಷದ ಪ್ರತಿಯೊಬ್ಬನೂ ಗೌರವ ಪಡೆಯಲು ಪಕ್ಷದ ಮೂಲ ಸಿದ್ಧಾಂತ ತಿಳಿಯಬೇಕು ಎಂಬ ಕಾರಣಕ್ಕೆ ಪ್ರಶಿಕ್ಷಣ ವರ್ಗ ಆರಂಭವಾಗಿದೆ. ಪಕ್ಷದ ಕಾರ್ಯಕರ್ತ ಬಲಿಷ್ಠನಾದಾಗ ಪಕ್ಷ ಬಲಿಷ್ಠನಾಗುತ್ತಾನೆ ಎಂದರು.
ರಾಜಕಾರಣದಲ್ಲಿ ವಿಚಾರಗಳನ್ನು ಒಳಗಿಟ್ಟುಕೊಂಡು ಭಾವನಾತ್ಮಕ ಪ್ರತಿಕ್ರಿಯೆ ನೀಡಿದರೆ, ಕಾರ್ಯಕರ್ತ ಬೆಳವಣಿಗೆ ಆಗುವುದಿಲ್ಲ. ಬಿಜೆಪಿ ವಿಚಾರಕ್ಕೆ ಒತ್ತು ಕೊಟ್ಟು ಕೆಲಸ ಮಾಡಿಕೊಂಡು ಬಂದಿದೆ. ದೇಶ ಮೊದಲು ಎಂಬ ಪರಿಕಲ್ಪನೆಯಲ್ಲಿ ಕೆಲಸ ಮಾಡಿದೆ. ಅಯೋಧ್ಯೆ, ಶ್ರೀರಾಮ ಮಂದಿರದ ನಿರ್ಮಾಣ, ಆರ್ಟಿಕಲ್ 370 ವಿಚಾರಗಳನ್ನು ಅಧಿಕಾರ ಇದ್ದಾಗ ಇಲ್ಲದಾಗಲೂ ಪ್ರತಿಪಾದಿಸಿದ್ದೆವು. ಸ್ವಾಭಿಮಾನಿ, ಸಮೃದ್ಧ ದೇಶದ ವಿಚಾರಕ್ಕೆ ಬದ್ಧವಾದ ರಾಜಕೀಯ ನೀತಿ ಬರಲು ಬಿಜೆಪಿ ರೂಪುಗೊಂಡಿದೆ ಎಂದು ಹೇಳಿದರು.
ರಾಜಕಾರಣಿಗಳಿಗೂ ಪುನಶ್ಚೇತನ ಕಾರ್ಯಕ್ರಮ ಇರುತ್ತದೆ. ಬದಲಾವಣೆಗೆ ಅನುಗುಣವಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತಿಳಿಸುತ್ತೇವೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ಹಿರಿಯರ ವಿಚಾರಕ್ಕೆ ಬದ್ಧವಾಗಿ ನಾವು ಕೆಲಸ ಮಾಡಬೇಕು. ನೀವು ಜನರ ಬಳಿಗೆ ಯೋಜನೆ ತಲುಪಿಸಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳು ಯಶಸ್ವಿಯಾಯಿತು ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಬಿಜೆಪಿ ಬೇರು ಎಂದರೆ ಅದು ಕಾರ್ಯಕರ್ತರು. ಭಾರತೀಯ ಸಿದ್ಧಾಂತವೇ ನಮ್ಮ ಸಿದ್ಧಾಂತ ಆಗಿರುವುದರಿಂದ ರಾಷ್ಟ್ರವೇ ನಮ್ಮನ್ನು ಒಪ್ಪಿಕೊಂಡಿದೆ. ವೈಯಕ್ತಿಕ ಆಕಾಂಕ್ಷೆಯ ಜತೆಗೆ ಸಿದ್ಧಾಂತದ ಗುರಿಯೊಂದಿಗೆ ಮುಂದುವರಿಯಬೇಕು ಎಂದರು.
ದೇಶದಲ್ಲಿ ಬಲಿಷ್ಠವಾಗಿ ಇದ್ದರೂ, ಶ್ರೇಷ್ಠ ದೇಶ ನಿರ್ಮಾಣಕ್ಕೆ ಅನೇಕ ಸಮಸ್ಯೆ ಇದೆ. ಅದನ್ನು ಎದುರಿಸಲು ಕಾರ್ಯಕರ್ತರ ಶಕ್ತಿ ಅಗತ್ಯ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಅವರನ್ನು ಹೇಗೆ ಎದುರಿಸುತ್ತೇವೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ದುರಾಡಳಿತದ ಬಗ್ಗೆ ಜನರಿಗೆ ತಿಳಿಸಬೇಕಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಆಡಳಿತ ಬರುವ ಅವಕಾಶ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಮಾಜಿ ಸದಸ್ಯರಾದ ತೋಂಟದಾರ್ಯ, ಸಿದ್ದರಾಜು, ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಮೇಯರ್‌ಗಳಾದ ಶಿವಕುಮಾರ್, ಸಂದೇಶ್‌ಸ್ವಾಮಿ, ಮಹಿಳಾ ಮೋರ್ಚಾದ ಮಾಳವಿಕಾ ಅವಿನಾಶ್, ಹೇಮಾ ನಂದೀಶ್, ಅಲ್ಪಸಂಖ್ಯಾತರ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಅನಿಲ್ ಥಾಮಸ್, ಮೈಸೂರು ವಿಭಾಗೀಯ ಸಹ ಪ್ರಮುಖ್ ಡಾ.ಈ.ಸಿ.ನಿಂಗರಾಜೇಗೌಡ, ಮುಖಂಡರಾದ ಬಿ.ಎಂ.ರಘು, ಅರುಣ್ ಕುಮಾರ್‌ಗೌಡ ಮೊದಲಾದವರು ಇದ್ದರು.